ರಾಮನಗರ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ – ಮಗನಿಗಾಗಿ ಅಮ್ಮನಿಂದ ಕ್ಷೇತ್ರ ತ್ಯಾಗ..!
ರಾಮನಗರ: 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ. ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಪುತ್ರ ನಿಖಿಲ್ ಗಾಗಿ ವಿಧಾನಸಭಾ ಸ್ಥಾನವನ್ನು ತ್ಯಾಗ ಮಾಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರಕ್ಷೇತ್ರದಿಂದ ಪುತ್ರ ನಿಖಿಲ್ ಸ್ಪರ್ಧಿಸಲಿದ್ದಾನೆ ಎಂದು ಸ್ವತಃ ಅನಿತಾ ಕುಮಾರಸ್ವಾಮಿ ಘೋಷಿಸಿದ್ದಾರೆ. ಡಿಸೆಂಬರ್ 17ರಂದು ರಾಮನಗರದಲ್ಲಿ ನಡೆದ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಅನಿತಾ ಕುಮಾರಸ್ವಾಮಿ, ನಿಮ್ಮೆಲ್ಲರ ಆಶೀರ್ವಾದ ಪುತ್ರ ನಿಖಿಲ್ ಕುಮಾರಸ್ವಾಮಿ ಮೇಲೆ ಇರಲಿ ಎಂದು ಹೇಳುತ್ತಾ ಭಾವುಕರಾಗಿದ್ದಾರೆ.
ಇದನ್ನೂ ಓದಿ : ರಾಜ್ಯದ ದೇಗುಲಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ ಹೇರುತ್ತಾರಾ?- ಸರ್ಕಾರಕ್ಕೆ ಅರ್ಚಕರ ಒಕ್ಕೂಟ ನೀಡಿದ ಮನವಿಯಲ್ಲಿ ಏನೇನಿದೆ?
ಮುಂದಿನ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಬೆಂಬಲ ನೀಡಬೇಕು. ನನ್ನ ಬಗ್ಗೆ ಕೆಲವು ಅಪಪ್ರಚಾರಗಳನ್ನು ಮಾಡುತ್ತಿದ್ದರು. ನಾನು ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ನಾನು ದೇವರ ಮುಂದೆ ನಿಂತಾಗ ಕೂಡ ನನ್ನ ಗಂಡ ನನ್ನ ಮಗನಿಗೆ ಒಳ್ಳೆಯದಾಗಲಿ ಅಂತಾನೆ ಕೇಳುವುದು ಎಂದು ಹೇಳುತ್ತ ಅನಿತಾ ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದ್ದಾರೆ. ಅನಿತಾ ಕುಮಾರಸ್ವಾಮಿ ಮುಂದಿನ ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ವತಃ ಹೆಚ್. ಡಿ ಕುಮಾರಸ್ವಾಮಿ ಈ ಹಿಂದೆಯೇ ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಮನಗರ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿಸಿತ್ತು. ಒಂದು ಕಡೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಸಾಧ್ಯತೆಗಳು ಹೆಚ್ಚಿವೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದ್ರೆ, ಪಕ್ಷದಿಂದ ಯಾವುದೇ ಖಚಿತ ಮಾಹಿತಿ ಸಿಕ್ಕಿರಲಿಲ್ಲ, ಇದೀಗ ಸ್ವತಃ ಶಾಸಕಿ, ತಾಯಿ ಅನಿತಾ ಕುಮಾರಸ್ವಾಮಿ ಅವರಿಂದಲೇ ಮಗನಿಗೆ ಪಟ್ಟಾಭಿಷೇಕವಾಗಿದೆ.
ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಕ್ಕೆ ಮತ್ತೊಂದು ಮುಹೂರ್ತ ಫಿಕ್ಸ್
ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಕ್ಕೆ ಮತ್ತೊಂದು ಮುಹೂರ್ತ ಫಿಕ್ಸ್ ಮಾಡಲಾಗಿದ್ದು, ಕೆಲ ಕ್ಷೇತ್ರಗಳ ಟಿಕೆಟ್ ಹಂಚಿಕೆ ತೀವ್ರ ಕುತೂಹಲ ಮೂಡಿಸಿದೆ. ಸಂಖ್ಯಾಶಾಸ್ತ್ರಜ್ಞರ ಸಲಹೆಗಳಿಗೆ ಬದ್ಧವಾಗಿ 96 ರಿಂದ 116 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಈ ಹಿಂದೆ ನವೆಂಬರ್ ನಲ್ಲಿ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿತ್ತು. ಆ ಸಮಯ ಸರಿಯಿಲ್ಲ ಎಂದು ಹೆಚ್.ಡಿ ರೇವಣ್ಣ ಸಲಹೆ ನೀಡಿದ್ದರು. ಅದರಂತೆ ಕುಮಾರಸ್ವಾಮಿ ಡಿಸೆಂಬರ್ 16ರಂದು ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮೊದಲ ಪಟ್ಟಿ ಪ್ರಕಟ ಮಾಡಲು ತೀರ್ಮಾನಿಸಿದ್ದರು. ಆದ್ರೆ, ಕಾರ್ಯಕ್ರಮದಲ್ಲಿ ಧಾರ್ಮಿಕ ವೇದಿಕೆಯಲ್ಲಿ ರಾಜಕೀಯ ಬೇಡ ಎಂದು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿಲ್ಲ. ಇದೀಗ ಅಂತಿಮವಾಗಿ ಡಿಸೆಂಬರ್ 19ರಂದು ಪಟ್ಟಿ ಬಿಡುಗಡೆಯಾಗಲಿದೆ.