ಕರುಣ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ- ತಂಡದಿಂದ ತೆಗೆಯಬಾರದು ಎಂದು ಅನಿಲ್ ಕುಂಬ್ಳೆ ಸಲಹೆ
ಕರುಣ್ ಬಿಗ್ ಇನ್ನಿಂಗ್ಸ್ ಕಟ್ಟದಿದ್ದರೂ ಉತ್ತಮವಾಗಿಯೇ ಆಡಿದ್ದಾರೆ – ಅನಿಲ್ ಕುಂಬ್ಳೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ದಿನಗಣನೆ ಶುರುವಾಗಿದೆ. ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಆಡ್ತಾರಾ, ಇಲ್ಲವೇ ಅನ್ನೋ ಅನುಮಾನು ಮತ್ತು ಚರ್ಚೆಗಳು ಈಗಾಗಲೇ ಶುರುವಾಗಿದೆ. ಇದರ ಮಧ್ಯೆ, ಕನ್ನಡಿಗನ ಪರ ಮತ್ತೊಬ್ಬ ಕನ್ನಡದ ಲೆಜೆಂಡರಿ ಕ್ರಿಕೆಟರ್ ಬ್ಯಾಟಿಂಗ್ ಮಾಡಿದ್ದಾರೆ. ಕರುಣ್ ಟೆಸ್ಟ್ನಲ್ಲಿ ಉತ್ತಮ ಜೊತೆಯಾಟವಾಡಿದ್ದಾರೆ. ಅವರಿಗೆ ಚಾನ್ಸ್ ಸಿಗಲೇಬೇಕು ಅಂತಾ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಇದನ್ನೂ ಓದಿ:6 ಇನ್ನಿಂಗ್ಸ್ ಆಡಿದ್ರೂ ಅರ್ಧಶತಕವನ್ನೂ ಬಾರಿಸದ ಕರುಣ್ ನಾಯರ್ – 4ನೇ ಪಂದ್ಯದಿಂದ ಗೇಟ್ ಪಾಸ್?
ಟೀಂ ಇಂಡಿಯಾದ ಮಾಜಿ ಕ್ರಿಕೆಟರ್, ಕರ್ನಾಟಕದ ದಿಗ್ಗಜ ಬೌಲರ್ ಅನಿಲ್ ಕುಂಬ್ಳೆ ಅವರು ಕರುಣ್ ನಾಯರ್ ಪರ ಮಾತನಾಡಿದ್ದಾರೆ. ಕರುಣ್ ನಾಯರ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದು ಅವರಿಗೆ ಮತ್ತೊಂದು ಅವಕಾಶ ನೀಡುವುದು ಸೂಕ್ತ ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ನಡೆಯಲಿದೆ. ಜುಲೈ 23 ರಂದು ಪ್ರಾರಂಭವಾಗುವ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆಗಳಾಗಬೇಕು ಎಂಬುದು ಕ್ರಿಕೆಟ್ ಪಂಡಿತರ ವಾದ. ಅದರಲ್ಲೂ ಕನ್ನಡಿಗ ಕರುಣ್ ನಾಯರ್ ಅವರನ್ನು ಹೊರಗಿಡಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಆದರೆ ಕರುಣ್ ನಾಯರ್ ಬಗ್ಗೆ ಬೇರೆಯದ್ದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ.
ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವ ಕರುಣ್ ನಾಯರ್ ಅವರನ್ನು ತಂಡದಿಂದ ಹೊರಗಿಡುವ ಕೆಲಸವನ್ನು ಮಾಡಬಾರದು ಎಂದಿದ್ದಾರೆ ಅನಿಲ್ ಕುಂಬ್ಳೆ. ‘ಮ್ಯಾಂಚೆಸ್ಟರ್ ಟೆಸ್ಟ್ಗೆ ಟೀಂ ಇಂಡಿಯಾದಲ್ಲಿ ಹೆಚ್ಚು ಬದಲಾವಣೆ ಮಾಡಬಾರದು. ಆಡಿರುವ 3 ಪಂದ್ಯಗಳಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿರುವ ಕಾರಣ ಹೆಚ್ಚಿನ ಬದಲಾವಣೆಯ ಅವಶ್ಯಕತೆ ಇಲ್ಲ ಎಂದು ನನಗನಿಸುತ್ತದೆ. ಹೌದು, ಲಾರ್ಡ್ಸ್ನಲ್ಲಿ ಟೀಂ ಇಂಡಿಯಾ 22 ರನ್ಗಳಿಂದ ಸೋತರಬಹುದು, ಆದರೆ ಆ ಪಂದ್ಯದಲ್ಲಿ ತಂಡದ ಪ್ರದರ್ಶನ ಚೆನ್ನಾಗಿತ್ತು. ಕರುಣ್ ನಾಯರ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ. ಅವರು ಲಾರ್ಡ್ಸ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ರನ್ ಗಳಿಸಿದರು. ರಾಹುಲ್ ಜೊತೆಗೆ ಉತ್ತಮ ಜೊತೆಯಾಟವನ್ನು ಕಟ್ಟಿದರು. ಇದು ತಂಡಕ್ಕೆ ಉಪಯುಕ್ತವಾಗಿತ್ತು. ಆದರೆ ಅವರು ಎರಡನೇ ಇನ್ನಿಂಗ್ಸ್ನಲ್ಲಿ ಖಂಡಿತವಾಗಿಯೂ ತಪ್ಪು ಮಾಡಿದರು. ಅದನ್ನು ಹೊರತುಪಡಿಸಿದರೆ, ಸರಣಿಯಲ್ಲಿ ಕರುಣ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಅವಕಾಶ ಕೊಡಬೇಕು ಎಂದು ಅನಿಲ್ ಕುಂಬ್ಳೆ ಅಭಿಪ್ರಾಯ ಪಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕರುಣ್ ನಾಯರ್ ಬಿಗ್ ಇನ್ನಿಂಗ್ಸ್ ಕಟ್ಟಿಲ್ಲ. ಅರ್ಧಶತಕ ಬಾರಿಸದ ಏಕೈಕ ಆಟಗಾರನೆಂದರೆ ಅದು ಕೂಡಾ ಕರುಣ್ ನಾಯರ್. ಸರಣಿಯಲ್ಲಿ ಇದುವರೆಗೆ 3 ಪಂದ್ಯಗಳನ್ನಾಡಿರುವ ಕರುಣ್ 21.83 ಸರಾಸರಿಯಲ್ಲಿ 131 ರನ್ ಗಳಿಸಿದ್ದಾರೆ. ಆದರೆ, ಕರುಣ್ ಜೊತೆಯಾಟಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. 8 ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಕರುಣ್ಗೆ ಇನ್ನೊಂದು ಚಾನ್ಸ್ ಕೊಡಿ ಅಂತಾ ಕನ್ನಡಿಗ ಕ್ರಿಕೆಟ್ ಪ್ರೇಮಿಗಳ ಕೋರಿಕೆಯೂ ಹೌದು.

ನೋಡಿರಿ

