ಏಕದಿನ ಸರಣಿ ಬೇಡವೆಂದು ಪಾಕಿಸ್ತಾನ ತಗಾದೆ – ಪಿಸಿಬಿ ಕಿರಿಕ್ ಗೆ ತಲೆಬಾಗುತ್ತಾ ವಿಂಡೀಸ್ ಬೋರ್ಡ್?

ಏಕದಿನ ಸರಣಿ ಬೇಡವೆಂದು ಪಾಕಿಸ್ತಾನ ತಗಾದೆ – ಪಿಸಿಬಿ ಕಿರಿಕ್ ಗೆ ತಲೆಬಾಗುತ್ತಾ ವಿಂಡೀಸ್ ಬೋರ್ಡ್?

ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವೆ ವೈಟ್ ಬಾಲ್ ಸರಣಿಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಮುಂದಿನ ತಿಂಗಳು ಅಮೆರಿಕ ಮತ್ತು ಕೆರಿಬಿಯನ್‌ನಲ್ಲಿ ನಡೆಯಲಿರುವ ವೈಟ್-ಬಾಲ್ ಸರಣಿಯ ವೇಳಾಪಟ್ಟಿಯೇ ಈಗ ಉಭಯ ಕ್ರಿಕೆಟ್ ಮಂಡಳಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಪಾಕಿಸ್ತಾನ ತಂಡವು ಕೆರಿಬಿಯನ್ ಪ್ರವಾಸದಲ್ಲಿ ಕೆಲ ಬದಲಾವಣೆಗೆ ಒತ್ತಾಯಿಸಿದ್ದು ಸರಣಿ ರದ್ದು ಮಾಡೋದಾಗಿ ಬೆದರಿಕೆ ಹಾಕಿದೆ.

ಏಕದಿನ ಸರಣಿ ಕೈಬಿಟ್ಟು ಟಿ-20ಐ ಪಂದ್ಯಗಳಷ್ಟೇ ಆಡುವಂತೆ ತಗಾದೆ!

ಪಾಕಿಸ್ತಾನ್-ವೆಸ್ಟ್ ಇಂಡೀಸ್ ನಡುವೆ ಆಗಸ್ಟ್ 1 ರಿಂದ ವೈಟ್ ಬಾಲ್ ಸರಣಿಗೆ ಶೆಡ್ಯೂಲ್ ಫಿಕ್ಸ್ ಮಾಡಲಾಗಿದೆ. ಈ ಸರಣಿಯಲ್ಲಿ ಉಭಯ ತಂಡಗಳು ಟಿ20 ಹಾಗೂ ಏಕದಿನ ಪಂದ್ಯಗಳನ್ನಾಡಬೇಕಿದೆ. ಆಗಸ್ಟ್ 1 ರಿಂದ 12 ರವರೆಗೆ ಅಮೆರಿಕ ಮತ್ತು ಕೆರಿಬಿಯನ್ ದ್ವೀಪಗಳಿಗೆ ಪಾಕಿಸ್ತಾನ ಪ್ರವಾಸ ಮಾಡಲಿದೆ.  ಮೂರು ಟಿ20  ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಆದರೆ ಈಗ ಪಾಕಿಸ್ತಾನವು ಟಿ20 ಸರಣಿ ಮಾತ್ರ ಆಡಲು ತಯಾರಿದ್ದೇವೆ ಎಂದಿದೆ. ಅಲ್ದೇ ಏಕದಿನ ಪಂದ್ಯಗಳನ್ನು ಆಡಲು ನಿರಾಕರಿಸಿದೆ. ಅಷ್ಟೇ ಅಲ್ದೇ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ 6 ಪಂದ್ಯಗಳ ಸರಣಿ ಆಯೋಜಿಸಲೇಬೇಕು ಅಂತಿದ್ರೆ 6 ಟಿ20 ಪಂದ್ಯಗಳನ್ನಾಡಲು ಪಾಕಿಸ್ತಾನ್ ತಂಡ ರೆಡಿ ಎಂದಿದೆ. ಹಾಗೇನಾದ್ರೂ ವಿಂಡೀಸ್ ಕ್ರಿಕೆಟ್ ಮಂಡಳಿ ಇದಕ್ಕೆ ಒಪ್ಪದೇ ಇದ್ರೆ ಇಡೀ ಸರಣಿಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದೆ.ಇತ್ತ ಕ್ರಿಕೆಟ್ ವೆಸ್ಟ್ ಇಂಡೀಸ್  ಪ್ರಸ್ತುತ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಯೋಜಿಸಲಿದ್ದೇವೆ ಎಂದು CWI ಸಿಇಒ ಕ್ರಿಸ್ ಡೆಹ್ರಿಂಗ್ ಹೇಳಿದ್ದಾರೆ. ಉಭಯ ರಾಷ್ಟ್ರಗಳು ಪಟ್ಟು ಸಡಿಲಿಸದೇ ಇರೋದು ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ಪಾಕಿಸ್ತಾನ್-ವೆಸ್ಟ್ ಇಂಡೀಸ್ ನಡುವಣ ಸರಣಿ ನಡೆಯಲಿದೆಯಾ ಎಂಬುದೇ ಈಗ ಇರೋ ಪ್ರಶ್ನೆ.

ಪಾಕ್  ಗೆ ಟಿ-20, ವಿಂಡೀಸ್ ಗೆ ಏಕದಿನ ವಿಶ್ವಕಪ್ ಟಾರ್ಗೆಟ್!

ಇಲ್ಲಿ ಉಭಯ ರಾಷ್ಟ್ರಗಳು ವೈಟ್ ಬಾಲ್ ಸರಣಿಯಲ್ಲಿ ಬೇರೆ ಬೇರೆ ಫಾರ್ಮೆಟ್​ಗೆ ಪಟ್ಟು ಹಿಡಿದಿರೋದಕ್ಕೆ ಕಾರಣವೂ ಇದೆ. 2026ರ ಟಿ-20 ವಿಶ್ವಕಪ್ ಮತ್ತು 2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರೋದೇ ಈ ಕಿರಿಕ್​ಗೆ ಕಾರಣವಾಗಿದೆ. ಅಂದ್ರೆ ವೆಸ್ಟ್ ಇಂಡೀಸ್ ತಂಡವು ಇತ್ತೀಚಿನ ದಿನಗಳಲ್ಲಿ ಯಾವುದೇ ಏಕದಿನ ಪಂದ್ಯಗಳನ್ನು ಆಡಿಲ್ಲ. ಅದರಲ್ಲೂ, 2023ರ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗದ ಕಾರಣ ವಿಂಡೀಸ್ ಪಡೆ ಇದೀಗ 50 ಓವರ್‌ಗಳ ಪಂದ್ಯಗಳನ್ನ ಹೆಚ್ಚೆಚ್ಚು ಆಡೋಕೆ ಟಾರ್ಗೆಟ್ ಇಟ್ಕೊಂಡಿದೆ. ಇದೇ ಕಾರಣಕ್ಕೆ ಪಾಕ್ ವಿರುದ್ಧ ಏಕದಿನ ಸರಣಿಗೆ ಶೆಡ್ಯೂಲ್ ಫಿಕ್ಸ್ ಮಾಡಿದೆ. ಆದರೆ ಪಾಕಿಸ್ತಾನ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಟಿ20 ಪಂದ್ಯಗಳನ್ನು ಆಡಲು ನೋಡ್ತಿದೆ. ಆದ್ರೆ ವಿಂಡೀಸ್ ತಂಡದ ಪರಿಸ್ಥಿತಿಯೇ ಶೋಚನೀಯವಾಗಿದೆ.

 ಅವನತಿಯತ್ತ ಸಾಗುತ್ತಿದೆಯಾ ವೆಸ್ಟ್ ಇಂಡೀಸ್ ಕ್ರಿಕೆಟ್?

ಒಂದು ಕಾಲದಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಮಾದರಿಗಳಲ್ಲಿ ‘ದೈತ್ಯ ಶಕ್ತಿ’ಯಾಗಿ ಜಾಗತಿಕ ಕ್ರಿಕೆಟ್‌ನ ಅನಭಿಷಿಕ್ತ ದೊರೆಯಾಗಿ ಮೆರೆದಿದ್ದ ವೆಸ್ಟ್ ಇಂಡೀಸ್ ತಂಡ ಈಗ ಈ ಎರಡೂ ಮಾದರಿಗಳಲ್ಲಿ ಹಳ್ಳ ಹಿಡೀತಿದೆ.  ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಕೇವಲ 27 ರನ್‌ಗಳಿಗೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ವೆಸ್ಟ್ ಇಂಡೀಸ್‌ನ ಈಗಿನ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಬ್ರಿಯಾನ್ ಲಾರಾ, ಶಿವನರೈನ್ ಚಂದರ್​ಪಾಲ್, ವಿವಿ ರಿಚರ್ಡ್ಸ್, ಸೊಬರ್ಸ್, ಕ್ರಿಸ್ ಗೇಲ್ ಹೀಗೆ ಹಲವು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರನ್ನು ಹುಟ್ಟುಹಾಕಿದ್ದ ಕೆರೀಬಿಯನ್ ನಾಡಿನ ಕ್ರಿಕೆಟ್ ಅವನತಿಯತ್ತ ಸಾಗುತ್ತಿದ್ಯಾ ಅನ್ನುವ ಪ್ರಶ್ನೆಗಳು ಮೂಡ್ತಿವೆ. ಬೇಡದ ವಿಚಾರಗಳಿಂದಲೇ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಇತ್ತೀಚಿನ ದಶಕಗಳಲ್ಲಿ ಆಗಾಗ ಸುದ್ದಿಯಲ್ಲಿದೆ.

2023ರ ವಿಶ್ವಕಪ್ ಅರ್ಹತಾ ಸುತ್ತಿನಿಂದ ಹೊರಬಿದ್ದಿದ್ದ ವಿಂಡೀಸ್ ಪಡೆ!

ವಿಂಡೀಸ್ ತಂಡಕ್ಕೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ವಿಂಡೀಸ್ ಅವನತಿಯತ್ತ ಸಾಗಿದಂತಿದೆ. 2023ರ ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತಿನಲ್ಲಿ ನೆದರ್ಲೆಂಡ್ಸ್, ಜಿಂಬಾಬೈ ತಂಡಗಳೆದುರು, ಕೊನೆಗೆ ಸ್ಕಾಟ್ಲಂಡ್ ವಿರುದ್ಧವೂ ಸೋತಿತ್ತು. ಏಕದಿನ ವಿಶ್ವಕಪ್​ ರೇಸ್​ನಿಂದ ಹೊರಬಿದ್ದಿತ್ತು. 1975 ಮತ್ತು 1979 ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ವಿಂಡೀಸ್ ಅದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದು ನಿರಾಸೆ ಮೂಡಿಸಿತ್ತು. ಅಂದರೆ ಅದಕ್ಕೂ ಮುನ್ನ 12 ಏಕದಿನ ವಿಶ್ವಕಪ್​ಗಳಲ್ಲಿ ವೆಸ್ಟ್ ಇಂಡೀಸ್ ತಂಡ ಪಾಲ್ಗೊಂಡಿತ್ತು. ಇದೀಗ 2027ರ ಏಕದಿನ ವಿಶ್ವಕಪ್​ನಲ್ಲಾದ್ರೂ ಅರ್ಹತೆ ಪಡೆಯೋಣ ಅಂದ್ರೆ ಸರಣಿಯೇ ರದ್ದಾಗೋ ಭೀತಿ ಶುರುವಾಗಿದೆ.

Shantha Kumari