ಅಮೆರಿಕದಲ್ಲಿ ಸಮುದ್ರದೊಳಗೆ ಕಂಪಿಸಿದ ಭೂಮಿ- ದ್ವೀಪ ಭಾಗದಲ್ಲಿ ಸುನಾಮಿ ಎಚ್ಚರಿಕೆ

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಭೂಮಿ ಕಂಪಿಸಿದ್ದು, ಜನರಲ್ಲಿ ಭಯ ಹುಟ್ಟಿದೆ.. ಅಮೆರಿಕದ ಅಲಾಸ್ಕಾದಲ್ಲಿ ಈ ಘಟನೆ ನಡೆದಿದ್ದು, ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದೆ. ಸುನಾಮಿ ಆಗುವ ಸಾಧ್ಯತೆಯೂ ಇದೆ ಎಂದು ಅಮೆರಿಕದ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಸಮುದ್ರದ 36 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಅಲಾಸ್ಕಾ ಪರ್ಯಾಯ ದ್ವೀಪದ ಸ್ಯಾಂಡ್ ಪಾಯಿಂಟ್‌ನಿಂದ 87 ಕಿ.ಮೀ ದೂರದಲ್ಲಿ ಇದರ ಕೇಂದ್ರ ಬಿಂದು ಇತ್ತು ಎಂದು ಎನ್‌ಸಿಎಸ್ ಮಾಹಿತಿ ನೀಡಿದೆ. ಭೂಕಂಪದ ನಂತರ ದಕ್ಷಿಣ ಅಲಾಸ್ಕಾ ಹಾಗೂ ಪರ್ಯಾಯ ದ್ವೀಪ ಭಾಗದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಸಮುದ್ರದ ಕಡಿಮೆ ಆಳದಲ್ಲಿ ಸಂಭವಿಸಿದ ಭೂಕಂಪ ಇದಾಗಿದ್ದು, ಇದು ಸಾಕಷ್ಟು ಅಪಾಯಕಾರಿಯಾಗಿರುತ್ತೆ.. ಹೀಗಾಗಿ ಕರಾವಳಿಯ ಜನರು ಎತ್ತರದ ಪ್ರದೇಶಗಳಿಗೆ ಅಥವಾ ಒಳನಾಡಿಗೆ ಸ್ಥಳಾಂತರಗೊಳ್ಳಬೇಕು. ಹಾಗೇ ಕಡಲತೀರದಿಂದ ದೂರವಿರಬೇಕು ಎಂದು ಅಮೆರಿಕ ರಾಷ್ಟ್ರೀಯ ಹವಾಮಾನ ಸೇವಾ ಕೇಂದ್ರ ಎಚ್ಚರಿಕೆ ನೀಡಿದೆ. ಆರಂಭದಲ್ಲಿ ಭೂಮಿಯು 12 ಬಾರಿ ಕಂಪಿಸಿತ್ತು. ಈ ಪೈಕಿ ಒಂದು ಭೂಕಂಪ 5.2ರಷ್ಟು ತೀವ್ರತೆಯನ್ನು ಹೊಂದಿತ್ತು. ಸುನಾಮಿ ಎಚ್ಚರಿಕೆ ಮತ್ತು ಸಲಹೆಯನ್ನು ಅಲಾಸ್ಕನ್ ಕರಾವಳಿ ಪ್ರದೇಶಗಳಿಗೆ ಮಾತ್ರ ನೀಡಲಾಗಿದ್ದು, ದೂರದ ಪ್ರದೇಶಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ. ಭೂಕಂಪದ ಬಳಿಕ ಸ್ಯಾಂಡ್ ಪಾಯಿಂಟ್‌ನಲ್ಲಿ ಗರಿಷ್ಠ 0.2 ಅಡಿ ಎತ್ತರದ ಸುನಾಮಿ ಕಂಡುಬಂದಿದ್ದು, ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಭೂಕಂಪವು ಅಮೆರಿಕ ಸ್ಥಳೀಯ ಸಮಯ 12:37ರ ಸುಮಾರಿಗೆ ಸಂಭವಿಸಿದ್ದು, ಇದರ ಕೇಂದ್ರಬಿಂದು ಸ್ಯಾಂಡ್ ಪಾಯಿಂಟ್ ದ್ವೀಪ ಪಟ್ಟಣದ ದಕ್ಷಿಣಕ್ಕೆ ಅಂದಾಜು 87 ಕಿಲೋಮೀಟರ್ ದೂರದಲ್ಲಿದೆ ಎಂದು ಹೇಳಲಾಗಿದೆ. ಭೂಕಂಪದ ನಂತರ ದಕ್ಷಿಣ ಅಲಾಸ್ಕಾ ಮತ್ತು ಅಲಾಸ್ಕಾ ಪರ್ಯಾಯ ದ್ವೀಪ ಪ್ರದೇಶಗಳಲ್ಲಿ ಯಾವುದೇ ಕ್ಷಣದಲ್ಲಾದರೂ ಸುನಾಮಿ ಎದುರಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ತೀವ್ರ ಭೂಕಂಪನದ ಬೆನ್ನಲ್ಲೇ ಸುನಾಮಿ ಸೇರಿದಂತೆ ಪ್ರಕೃತಿ ವಿಕೋಪ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಅಲಾಸ್ಕಾದ ಪಾಮರ್‌ನಲ್ಲಿರುವ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರ ಮುನ್ಸೂಚನೆಯನ್ನ ನೀಡಲಾಗಿದೆ.
ಅಮೆರಿಕ ಈ ಹಿಂದೆಯು ಈ ರೀತಿಯ ಭೀಕರ ಭೂಕಂಪನ ಹಾಗೂ ಸುನಾಮಿಗಳನ್ನು ಎದುರಿಸಿದೆ. ಈ ಬಾರಿಯ ಭೂಕಂಪನವು ತೀವ್ರವಾಗಿದ್ದು ಯಾವುದೇ ಕ್ಷಣದಲ್ಲಾದರೂ ಸುಮಾಮಿ ಎದುರಾಗುವ ಆತಂಕ ಎದುರಾಗಿದೆ. ಅಲಾಸ್ಕಾ ಭೂಕಂಪನ ಬೆನ್ನಲ್ಲೇ ಈ ಭಾಗದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಈ ಪ್ರದೇಶದಲ್ಲಿ 1964ರಲ್ಲಿ 9.2 ತೀವ್ರತೆಯ ಭೂಕಂಪ ಸಂಭವಿಸಿತ್ತು.

ನೋಡಿರಿ

