ಅಭಿನವ ಸರಸ್ವತಿಯ ಬದುಕಿನಲ್ಲಿ ನೋವುಗಳ ಸರಮಾಲೆ – ಅಮ್ಮನಿಗೆ ಕೊಟ್ಟ ಮಾತನ್ನು ಕೊನೆತನಕ ಉಳಿಸಿಕೊಂಡಿದ್ದರು ಸರೋಜಾದೇವಿ

ದಕ್ಷಿಣಭಾರತದ ಖ್ಯಾತ ನಟಿ, ಚತುರ್ಭಾಷಾ ನಟಿ ಅಂತಾನೇ ಹೆಸರುವಾಸಿಯಾಗಿದ್ದರು ಬಿ.ಸರೋಜಾದೇವಿ. 161 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ಅಭಿನಯ ಸರಸ್ವತಿ ಜುಲೈ 14, ಸೋಮವಾರ ಅಸ್ತಂಗತರಾಗಿದ್ದಾರೆ. ಸರೋಜಾದೇವಿಯವರ ಬಾಲ್ಯದ ಆ ಒಂದು ನೆನಪು, ಹಿರಿಯ ತಾರೆಯ ಮನದಲ್ಲಿ ಬೇರು ಬಿಟ್ಟಿರುವ ನೋವಿನ ಕಥೆಯ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅಸ್ತಂಗತ – ಅಭಿನಯ ಸರಸ್ವತಿ ಅಗಲಿಕೆಗೆ ಚಿತ್ರರಂಗದ ಗಣ್ಯರ ಸಂತಾಪ
ಭಾರತದ ಸಿನಿ ಜಗತ್ತಿನಲ್ಲಿ ಸರೋಜಾದೇವಿ ಅತ್ಯಂತ ಯಶಸ್ವಿ ನಟಿಯಾಗಿದ್ದರು. ಸರೋಜಾ ದೇವಿ ಅವರ ಜನ್ಮನಾಮ ರಾಧಾದೇವಿ ಎಂದಾಗಿತ್ತು. ಬೈರಪ್ಪ ಗೌಡ- ರುದ್ರಮ್ಮ ದಂಪತಿಗೆ 1938 ಜನವರಿ 7ರಂದು ಬೆಂಗಳೂರಿನಲ್ಲಿ ಸರೋಜಾದೇವಿ ಮಗಳಾಗಿ ಜನಿಸಿದ್ದರು. ತಂದೆ ಬೈರಪ್ಪ ಗೌಡ, ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸರೋಜಾ ದೇವಿ ಬೈರಪ್ಪ ದಂಪತಿಗೆ ನಾಲ್ಕನೇ ಮಗಳಾಗಿದ್ದರು. ತಂದೆ ಭೈರಪ್ಪ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ಗೃಹಿಣಿ ಆಗಿದ್ದರು. ನೃತ್ಯ ಕಲಿಯಲು ಹಾಗೂ ನಟನೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಭೈರಪ್ಪ ಅವರು ಮಗಳಿಗೆ ಪ್ರೋತ್ಸಾಹಿಸಿದರು. ಅವರು ನಟನೆಗೆ ಬರಲು ಸಿದ್ಧವಾದಾಗ ತಾಯಿ ಮಗಳಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ನೀಡಿದ್ದರು. ಈಜುಡುಗೆ ಹಾಗೂ ತೋಳಿಲ್ಲದ ಬ್ಲೌಸ್ನ ಯಾವಾಗಲೂ ಹಾಕಬಾರದು ಎಂದು ತಾಯಿ ಖಡಕ್ ಆಗಿ ಹೇಳಿದ್ದರು. ಇದನ್ನು ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಪರಿಪಾಲಿಸಿಕೊಂಡು ಬಂದಿದ್ದರು. ಅದೇ ಕಾರಣಕ್ಕೆ ಸರೋಜಾ ದೇವಿ ಯಾವುದೇ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರಲಿಲ್ಲ.
ಬೋಲ್ಡ್ ಆಗಿ ಕಾಣಿಸಿಕೊಳ್ಳದೇ ಇದ್ದರೂ ಸರೋಜಾದೇವಿ ಚಿತ್ರರಂಗದಲ್ಲಿ ಮೊದಲ ಮಹಿಳಾ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದರು. ನಟನೆಯಲ್ಲಿ ಅಭಿಮಾನಿಗಳ ಮನಗೆದ್ದ ಬಿ.ಸರೋಜಾ ದೇವಿ, ತಮ್ಮ ಸ್ವಂತ ಜೀವನ ಅಂತಾ ಬಂದಾಗ ಅನೇಕ ನೋವುಗಳನ್ನ ಕಂಡಿದ್ದರು. ವೈಯಕ್ತಿಕ ಬದುಕಿನಲ್ಲಿ ಮರೆಯಲಾಗದ ನೋವುಗಳನ್ನು ಅನುಭವಿಸಿದರು. ಅದರಲ್ಲೂ ಪ್ರಾಣಸ್ನೇಹಿತ, ಪ್ರೀತಿಯ ಪತಿಯ ಅಗಲಿಕೆ ಬಿ.ಸರೋಜಾದೇವಿಯವರನ್ನು ಕುಗ್ಗುವಂತೆ ಮಾಡಿತ್ತು. 1967 ಮಾರ್ಚ್ 1ರಂದು ಎಂಜಿನಿಯರ್ ಶ್ರೀಹರ್ಷ ಎಂಬುವವರನ್ನ ಸರೋಜಾದೇವಿ ವಿವಾಹವಾದರು. ಇವರು 1986ರಲ್ಲಿ ಪತಿ ಶ್ರೀಹರ್ಷ ಇಹಲೋಕ ತ್ಯಜಿಸಿಬಿಟ್ಟರು. ಪತಿ ನಿಧನ ಹೊಂದಿದ ನಂತರ ಅವರಿಗೆ ದುಃಖದಿಂದ ಆಚೆ ಬರಲು ತುಂಬಾ ವರ್ಷಗಳು ಬೇಕಾದವು. ಒಂದು ವರ್ಷಗಳ ಕಾಲ ಕ್ಯಾಮೆರಾವನ್ನೇ ಎದುರಿಸಿರಲಿಲ್ಲ. ಪತಿ ಹಾಗೂ ಕುಟುಂಬಸ್ಥರು ಅಂದರೆ, ಸರೋಜಾದೇವಿಯರಿಗೆ ಬದುಕಿನ ಒಂದು ಭಾಗ. ಹೀಗಾಗಿ ಪತಿ ಸಾವನ್ನಪ್ಪಿದ ನಂತಕ ಸರೋಜಾ ದೇವಿ, ಯಾರನ್ನೂ ಭೇಟಿ ಆಗಲಿಲ್ಲ. ಸರೋಜಾ ದೇವಿ ಹಾಗೂ ಹರ್ಷ ದಂಪತಿಗೆ ಹರ್ಷ ಇಂದಿರಾ ಹಾಗೂ ಹರ್ಷ ಗೌತಮ್ ಎಂಬ ಇಬ್ಬರು ಮಕ್ಕಳಿದ್ದರು. ಅದರ ಜೊತೆಗೆ ಭುವನೇಶ್ವರಿ ಎಂಬ ಮಗುವನ್ನು ದತ್ತು ಪಡೆದುಕೊಂಡಿದ್ದರು. ಆದರೆ ಆ ಮಗು ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡಿತ್ತು. ಮಗಳ ನೆನಪಿಗಾಗಿ ಸರೋಜಾ ದೇವಿ ಸಾಹಿತ್ಯದಲ್ಲಿ ಸಾಧನೆ ಮಾಡಿದವರಿಗೆ ‘ಭುವನೇಶ್ವರಿ ಪ್ರಶಸ್ತಿ’ ನೀಡುತ್ತ ಬಂದಿದ್ದರು. ಅಲ್ಲದೇ ಪತಿ ಹಾಗೂ ಅಮ್ಮನ ನೆನಪಿಗಾಗಿ ಸಮಾಜಮುಖ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು.
ಕೆಲವು ಸಿನಿಮಾಗಳಿಗೆ ಒಪ್ಪಂದ ಮಾಡಿಕೊಂಡಿದ್ದರ ಪರಿಣಾಮ ಅನಿವಾರ್ಯವಾಗಿ 1987ರಲ್ಲಿ ಚಿತ್ರೀಕರಣಕ್ಕೆ ಮರಳಿದ್ದರು. ಆದರೆ ಹೊಸ ಸಿನಿಮಾಗಳಿಗೆ ಅವರು ಸಹಿ ಮಾಡಲಿಲ್ಲ. ಬದಲಾಗಿ ಹಿಂದೆ ಸೈನ್ ಮಾಡಿದ್ದ ಸಿನಿಮಾಗಳನ್ನು ಮಾತ್ರ ಪೂರ್ಣಗೊಳಿಸಿಕೊಟ್ಟರು. ಗಂಡನ ಅಗಲಿಕೆಯ ನೋವು ಮರೆಯುವಷ್ಟರಲ್ಲೇ ಅಮ್ಮ ರುದ್ರಮ್ಮ ನಿಧನರಾಗುತ್ತಾರೆ. ಸರೋಜಾ ದೇವಿ ಜನಿಸುತ್ತಿದ್ದಂತೆಯೇ ಅವರ ತಾತ, ದತ್ತು ನೀಡುವಂತೆ ಒತ್ತಾಯಿಸಿದ್ದರಂತೆ. ಆದರೆ ಸರೋಜಾ ದೇವಿಯ ತಾಯಿ ರುದ್ರಮ್ಮ ಹಠ ಮಾಡಿ ಉಳಿಸಿಕೊಂಡಿದ್ದರು. ಅಷ್ಟೇ ಅಲ್ಲದೇ, ಸರೋಜಾ ದೇವಿಗೆ ಚಿತ್ರರಂಗ ಪ್ರವೇಶ ಮಾಡಲು ಸಹಾಯ ಮಾಡಿದ್ದೇ ಅಮ್ಮ ರುದ್ರಮ್ಮ. ಗಂಡನ ಅಗಲಿಕೆ, ದತ್ತು ಮಗಳ ಹಠಾತ್ ಸಾವು, ಅಮ್ಮನ ಅಗಲಿಕೆಯಿಂದ ಸರೋಜಾದೇವಿ ಕುಗ್ಗಿಹೋಗಿದ್ದರು. ಆದರೆ, ಕನ್ನಡ ಚಿತ್ರರಂಗದ ನಟ ನಟಿಯರ ಪಾಲಿಗೆ ಇವರು ಪ್ರೀತಿಯ ಸರೋಜಮ್ಮ. ಈಗಲೂ ಅನೇಕ ನಟ, ನಟಿಯರು ಪ್ರೀತಿಯಿಂದ ಅಮ್ಮಾ ಅಂತಾನೇ ಇವರನ್ನು ಕರೆಯುತ್ತಾರೆ. ಚಿತ್ರರಂಗ ಕಂಡ ಹಿರಿಯ ತಾರೆ, ಅಭಿನವ ಸರಸ್ವತಿ ಕೊನೆಗೂ ಕಾಲನ ಕರೆಗೆ ಓಗೊಟ್ಟಿದ್ದಾರೆ. ಇವರ ಅಂತಿಮ ಆಸೆಯಂತೆ ಗಂಡನ ಸಮಾಧಿಪಕ್ಕದಲ್ಲೇ ಅಂತ್ಯಸಂಸ್ಕಾರ ಮಾಡುವ ವ್ಯವಸ್ಥೆನಡೆಯುತ್ತಿದೆ.

ನೋಡಿರಿ

