ಅಪರ್ಣಾ ಸಾಯುವ ಎರಡು ದಿನ ಮೊದಲು ಕೇಳಿದ್ದು ಕರುಳು ಹಿಂಡುವ ಕೋರಿಕೆ – ಪತ್ನಿ ನೆನಪಲ್ಲಿ ನೋವಿನ ಕಥೆ ಬಿಚ್ಚಿಟ್ಟ ನಾಗರಾಜ್ ವಸ್ತಾರೆ

ಅಪರ್ಣಾ ಸಾಯುವ ಎರಡು ದಿನ ಮೊದಲು ಕೇಳಿದ್ದು ಕರುಳು ಹಿಂಡುವ ಕೋರಿಕೆ – ಪತ್ನಿ ನೆನಪಲ್ಲಿ ನೋವಿನ ಕಥೆ ಬಿಚ್ಚಿಟ್ಟ ನಾಗರಾಜ್ ವಸ್ತಾರೆ

ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ಕರುನಾಡನ್ನು ಅಗಲಿ ಒಂದು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಅವರ ಪತಿ ನಾಗರಾಜ್‌ ವಸ್ತಾರೆ ತಮ್ಮ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್‌ ಹಾಕಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಪತ್ನಿ ಅಪರ್ಣಾ ಅವರು ಕಾಯಿಲೆಯಿಂದ ಅನುಭವಿಸಿದ ನೋವು, ಅವರನ್ನ ಕಳೆದುಕೊಂಡು ತಾವು ಅನುಭವಿಸುತ್ತಿರುವ ಸಂಕಟದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ:ಕರುನಾಡ ಚಕ್ರವರ್ತಿ ಶಿವಣ್ಣನಿಗೆ 63ನೇ ಹುಟ್ಟುಹಬ್ಬದ ಸಂಭ್ರಮ – ಅಭಿಮಾನಿಗಳ ಅಭಿಮಾನಕ್ಕೆ ಬೆರಗಾದ ಶಿವರಾಜ್ ಕುಮಾರ್

ಕಳೆದ ವರ್ಷ ಜುಲೈ 9. ದೇಹದ ನರನಾಡಿಯಲ್ಲೂ ನೋವು ಅನುಭವಿಸಿದ್ದರು ಅಪರ್ಣಾ. ಇದೇ ನೋವಿನಲ್ಲಿ ಅಪರ್ಣಾ ಅವರು ಪತಿ ನಾಗರಾಜ್ ವಸ್ತಾರೆ ಬಳಿ ಬೇಡಿಕೆಯೊಂದನ್ನ ಇಟ್ಟಿದ್ದರು.  ಆ ಬೇಡಿಕೆಯೇನು ಅನ್ನೋದು ಗೊತ್ತಾದರೆ, ಎಂಥವರ ಮನಸು ಮಿಡಿಯದೇ ಇರುವುದಿಲ್ಲ. ಈ ಬಗ್ಗೆ ಅಪರ್ಣಾ ಪತಿ ನಾಗರಾಜ್ ವಸ್ತಾರೆ ಬರೆದುಕೊಂಡಿದ್ದಾರೆ.

‘ನನ್ನನ್ನು ಪಾರು ಮಾಡಿ, ವಸ್ತಾರೆ…’ ಎಂದು ದೀನಳಾಗಿ ಕೆಲವಾರು ಸರ್ತಿ ಯಾಚಿಸುವಳು. ಸುತ್ತಲಿನ ಮರ್ತ್ಯವನ್ನು ದಾಟಲಿಕ್ಕಾಗದೆ ಹತ್ತಾ ಹಾಸಿಗೆಗಂಟಿಕೊಂಡು ವರ್ಷಗಟ್ಟಲೆ ತಳ್ಳಿದರೆಂತೆನ್ನುವ ಸಹಜ ಸ್ವಾಭಾವಿಕ ಅಳುಕು ಅವಳದು. ನಿಜಕ್ಕಾದರೆ, ಸಾವೆಂಬುದನ್ನು ಹತ್ತಿರದಿಂದ ಕಂಡಿದ್ದ ಹತ್ತಾರು ಘಟನೆಗಳು ಅದೇ ಜುಲೈಯಿಯ ತುಸು ಮುನ್ನಿನಲ್ಲಿ ನಮ್ಮೆದುರು ಜರುಗಿದ್ದವು. ನಾನೂ ಅವನ್ನು ಸಾಕ್ಷಾತ್ ಕಂಡುಕೊಂಡಿದ್ದೆ. ಪ್ರತಿಸಾರಿಯೂ, ‘ಹಾಗೇನಿಲ್ಲ, ಕಂದ… ಎಷ್ಟೆಲ್ಲ ಸಂಕಷ್ಟ ದಾಟಿದ್ದೇವಲ್ಲ. ಇದನ್ನೂ ದಾಟುವೆವು ಬಿಡು…’ ಎಂದು ಬೆನ್ನು ತಡವಿ ಹೇಳುತ್ತಿದ್ದೆ. ಚೆನ್ನಾಗಿ ನೆನಪಿದೆ, ಅಂದೊಂದು ಸಾರಿ, ‘ಅಪರ್ಣೇ, ಇನ್ನೆಷ್ಟು ನೋವು ನಿನ್ನ ಪಾಲಿನದಾಗಿ ಈ ಧರೆಯಲ್ಲಿ ಮಿಕ್ಕಿದೆಯೋ… ಎಲ್ಲವನ್ನೂ ಅನುಭವಿಸಿಬಿಡು, ಕಂದ… ಅದೇನೋ ಕರ್ಮವೆಂದಾರಲ್ಲ ಆ ಸಲುವಾಗಿ. ಎಷ್ಟೇ ಕಷ್ಟವಾದರೂ ನೋಡಿಕೊಳುತೀನಿ. ಮುಂದಿನ ಜನುಮವಿದೆಯೋ ಇಲ್ಲವೋ- ಅರಿಯೆ, ಹಾಗೊಂದಿದ್ದಲ್ಲಿ, ಆವಾಗಲಾದರೂ ಚೆನ್ನಾಗಿರು…’ ಅಂತಲೂ ಕಣ್ತುಂಬಿಕೊಂಡು ಹೇಳಿದ್ದೆ. ಕಳೆದ ಜುಲೈಯಿಯ ಒಂಬತ್ತನೇ ತಾರೀಖೂ ಅಷ್ಟೆ, ಬೆಳಬೆಳಿಗ್ಗೆಯೇ, ಅಪರ್ಣೆ, ‘ನಾನೊಂದು ಹೇಳುತೀನಿ. ನಡೆಸಿಕೊಡುತೀರಾ?’ ಎಂದೊಂದು ಅರಿಕೆಯಿಟ್ಟಿದ್ದಳು. ವಿಷಯವೇನೆಂದು ಗೊತ್ತಿತ್ತಾದರಿಂದ, ‘ಈವಾಗ ಬೇಡ, ಕಂದ… ಆಮೇಲೆ ಮಾತಾಡೋಣ’ ಎಂದು ಮಾತು ಹಾರಿಸಿದ್ದೆ. ಆದರೆ ಪಟ್ಟುಬಿಡದೆ ಮಾತು ಮುಂದುವರಿಸಿದ್ದಳು. ‘ಏನು ಗೊತ್ತಾ, ನಾನೇನಾದರೂ ಹಾಸಿಗೆ ಹಿಡಿದುಬಿಟ್ಟರೆ ಯಾರಿಗೂ ಹೇಳದೆ ಮುಗಿಸಿಬಿಡಿ, ವಸ್ತಾರೆ… ಏನೂ ತಪ್ಪಿಲ್ಲ. ನಿಮ್ಮ ಮೇಲೆ ನಾನಿನ್ನು ಹೊರೆಯಾಗಿರಲಾರೆ’ ಎಂದು ಅಂಗಲಾಚಿದ್ದಳು. ಅವೊತ್ತೇ ಸಂಜೆ, ಆಸ್ಪತ್ರೆಯತ್ತ ಸಾಗುವ ಕಾರುದಾರಿಯಲ್ಲಿ ನನ್ನ ಎಡಗೈಯನ್ನು ತನ್ನೆರಡೂ ಕೈಗಳಲ್ಲಿ ಹಿಡಿದು, ‘ನಿಮ್ಮನ್ನು ಬಿಟ್ಟು ಹೋಗೋಕೆ ನನಗಿಷ್ಟ ಇಲ್ಲ…’ ಅಂತಂದಳು. ‘ಎಷ್ಟು ಸಲ ಹೀಗೆ ಆಗಿದೆಯಲ್ಲವಾ, ಅಪರ್ಣೇ… ಈ ಸಲವೂ ಹಾಗೇ ಆಗುತ್ತೆ. ಗೆದ್ದು ಮನೆಗೆ ಹೋಗುತೀವಿ…’ ಎಂದು ಸಮಾಧಾನ ಹೇಳಿದೆ.

ಈ ವಿಚಾರವನ್ನು ನಾಗರಾಜ ವಸ್ತಾರೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇವರ ಬರಹದಲ್ಲಿ ತನ್ನ ಅಪರ್ಣೆ ಅನುಭವಿಸಿದ ನೋವಿದೆ. ಇದನ್ನು ಓದಿದವರಿಗೂ ಅಪರ್ಣಾ ಎಂಬ ಚೆಂದದ ಕನ್ನಡ ಮಗಳು ಅನುಭವಿಸಿದ ನೋವಿಗೆ ಮನ ಮಿಡಿಯುತ್ತಿದೆ.

ಇನ್ನೂ ಮುಂದುವರೆದು ನಾಗರಾಜ ವಸ್ತಾರೆ ಬರೆಯುತ್ತಾರೆ. ಅದೇನೆಂದರೆ, – ನನ್ನೊಡನಿದ್ದ ಅಪರ್ಣೆ ನನ್ನೊಳಗಾಗಿ ಮತ್ತು ನಿಮ್ಮೊಡನಿದ್ದ ಅವಳು ನಿಮ್ಮೊಳಗಾಗಿ, ಜುಲೈ ಹನ್ನೊಂದಕ್ಕೆ ಸರಿಯಾಗಿ ಒಂದು ವರ್ಷ. ತಿಥಿಗಳ ಲೆಕ್ಕದಲ್ಲಿ ಆಷಾಢ ಶುದ್ಧ ಷಷ್ಠಿ- ಜೂನ್ ಮಾಹೆಯ ಮೂವತ್ತನೇ ತಾರೀಖು ಜರುಗಿದ್ದು. ಜರುಗಿ ಮುಗಿದಿದ್ದು. ನನ್ನ ಮಟ್ಟಿಗೆ ಮಾತ್ರ ಯಾವೊತ್ತಿಗೂ ಮುಗಿಯದ್ದು. ನಿಜ ಹೇಳುತ್ತೇನೆ. ಕಳೆದೊಂದು ವರ್ಷವನ್ನು ನಾನು ಧ್ಯಾನವೆನ್ನುವ ಹಾಗೆ ಕಳೆದಿದ್ದೇನೆ. ಅಪರ್ಣೆಯ ಸ್ಮರಣೆಯನ್ನು ಯಜ್ಞವೆನ್ನುವ ಹಾಗೆ ಕೈಕೊಂಡಿದ್ದೇನೆ. ಅವಳ ಹೆಸರನ್ನು ಉಸುರಿನೊಟ್ಟಿಗೆ ಬೆಸೆದು ‘ಅಜಪಾಜಪ’ವೆಂದೊಂದಾಗಿ ಸದಾ ಚಾಲೂವಿಟ್ಟಿದ್ದೇನೆ. (ಅಜಪಾಜಪವೆಂದರೆ ಮಣಿ ಬಿಟ್ಟು ಮಣಿ ಹಿಡಿದು ನಡೆಸುವ ಜಪಮಾಲೆಯಲ್ಲಿ ಜರುಗುವ ಜಪವಲ್ಲ. ಜಪವೇ ಅಲ್ಲದ ಜಪವೆಂತಲೇ ಅದರ ಅರ್ಥ.) ಒಳಮನೆಯೊಳಗೆ ಅವಳು ಇರುತ್ತಿದ್ದ ಅಷ್ಟಿಷ್ಟು ಎಡೆಯಲ್ಲೆಲ್ಲ ಮಣಿದೀಪಗಳನ್ನಿಟ್ಟು ಅಖಂಡವಾಗಿ ಉರಿಸಿದ್ದೇನೆ. ಅವಳಿಲ್ಲದ ಮತ್ತು ಅವಳನ್ನು ಕುರಿತಲ್ಲದ ಏನನ್ನೂ ಧೇನಿಸದೆ ಮತ್ತು ಬರೆಯದೆ- ಎರಡು ಆಷಾಢಗಳ ನಡುವೆ, ನಿಜಕ್ಕೂ ವಿಯೋಗಮುಖಿಯಾಗಿ ಸರಿದ ದುಃಖತಪ್ತ ಸಂವತ್ಸರವನ್ನು ಸವೆಸಿದ್ದೇನೆ. ಅಸಲಿನಲ್ಲಿ, ಇವೆಲ್ಲದರ ಮೂಲಕ ನನ್ನನ್ನು ನಾನು ದಾಟುತ್ತಿದ್ದೇನೆ. ಅವಳನ್ನೂ ದಾಟುವ ಹವಣು ನಡೆಸಿದ್ದೇನೆ. ಅಂತಿಂತಿದ್ದಿರದ ಈ ಹೆಣ್ಣನ್ನು ಸುಲಭವಾಗಿ ದಾಟಲಾಗದೆಂದು ಈ ಒಂದು ವರ್ಷದಲ್ಲಿ ಇನ್ನಿರದೆ ಕಂಡರಿತಿದ್ದೇನೆ. ಅವಳೂ ನನ್ನನ್ನು ಸುಲಭಕ್ಕೆ ದಾಟಳೆನ್ನುವ, ಹಾಗೇ ನನಗೂ ದಾಟಗೊಡಳೆನ್ನುವ ನನ್ನದೇ ಭ್ರಮೆಯನ್ನು ಅರಿವೊಂದಾಗಿ ಕಟೆದು ಕಣ್ಮನಸಿನಲ್ಲಿ ಕಟ್ಟಿಕೊಂಡಿದ್ದೇನೆ.

Sulekha