ಬಿರಿಯಾನಿ ಎಲೆ ಎಂದು ನೀಲಗಿರಿ ಎಲೆ ಮಾರಾಟ! – ರಾಜ್ಯದಲ್ಲಿ ಬಯಲಾಯ್ತು ಮತ್ತೊಂದು ದಂಧೆ!

ಬಿರಿಯಾನಿ ಎಲೆ ಎಂದು ನೀಲಗಿರಿ ಎಲೆ ಮಾರಾಟ! – ರಾಜ್ಯದಲ್ಲಿ ಬಯಲಾಯ್ತು ಮತ್ತೊಂದು ದಂಧೆ!

ಬೆಳ್ಳಗಿರೋದೆಲ್ಲ ಹಾಲಲ್ಲ ಅನ್ನೋ ಗಾದೆ ಮಾತಿನಂತೆ ಮಾರ್ಕೆಟ್‌ನಲ್ಲಿ ಸಿಗೋದೆಲ್ಲ ವರ್ಜಿನಲ್‌ ಅಲ್ಲ ಅನ್ನೋ ಹಾಗಿದೆ. ರಾಜ್ಯದಲ್ಲಿ ನಕಲಿ ವಸ್ತುಗಳ ಮಾರಾಟ ದಂಧೆ ಹೆಚ್ಚಾಗ್ತಾನೆ ಇದೆ. ಇದೀಗ ಬಿರಿಯಾನಿ ಎಲೆ ಅಂತ ನೀಲಗಿರಿ ಮರದ ಎಲೆ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ವಿಂಬಲ್ಡನ್ ಅಂಗಳದಲ್ಲಿ ಕಮರಿದ ಜೊಕೋ ಕನಸು – ಸರ್ಬಿಯಾ ಟೆನ್ನಿಸ್ ದೊರೆಯನ್ನ ಸೋಲಿಸಿ ಫೈನಲ್‌ಗೇರಿದ ಯಾನಿಕ್ ಸಿನ್ನರ್

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಇಸ್ಲಾಂ ನಗರದಲ್ಲಿನ ಪಾಳು ಬಿದ್ದ ಮನೆಯೊಂದರ ಬಳಿ ಈ ಕಲಬೆರಕೆ ಮಸಾಲೆ ಪದಾರ್ಥಗಳನ್ನು ತಯಾರಿಸಲಾಗುತ್ತಿತ್ತು. ಆರೋಪಿಗಳು ದನಿಯಾ ಕಾಳು, ಮೆಣಸಿನ ಕಾಳು, ಬಿರಿಯಾನಿ ಎಲೆ, ಚಿಕನ್ ಮಸಾಲೆ, ಸಾಂಬರ್ ಮಸಾಲೆಯನ್ನು ಕೆಮಿಕಲ್​ ಬಳಸಿ ತಯಾರು ಮಾಡುತ್ತಿದ್ದರು. ಬಿರಿಯಾನಿ ಎಲೆ ಅಂತ ನೀಲಗಿರಿ ಮರದ ಎಲೆಗಳಿಗೆ ಬಣ್ಣ ಹಾಕಿ ತಯಾರಿಸಿದ್ದರು. ಅಲ್ಲದೆ, ಪಪ್ಪಾಯಿ ಹಣ್ಣಿನ ಬೀಜಗಳನ್ನು ಮೆಣಿಸಿನ ಕಾಳುಗಳಲ್ಲಿ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದರು. ದನಿಯಾ ಬೀಜಗಳಿಗೆ‌ ವಿವಿಧ ಕೆಮಿಕಲ್​ಗಳನ್ನು ಬಳಕೆ ಮಾಡಲಾಗಿರುವುದು ಪರಿಶೀಲನೆ ವೇಳೆ ತಿಳಿದುಬಂದಿದೆ. ಬಟಾಣಿಗಳಿಗೆ ಹಸಿರು ಬಣ್ಣ ಮಿಶ್ರಣ ಮಾಡಿ, ಜವಾರಿ ಅಂತ ಗ್ರಾಹಕರನ್ನು ನಂಬಿಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಒಟ್ಟು 846 ಕೆಜಿ ಕಲಬೆರಿಕೆ ಮಸಾಲೆ ಪದಾರ್ಥಗಳನ್ನು ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅಧಿಕಾರಿಗಳ ದಾಳಿ ಮಾಡುತ್ತಿದ್ದಂತೆ, ಕಲಬೆರಕೆ ದಂಧೆ ನಡೆಸುತ್ತಿದ್ದ ಆರೋಪಿ ಗಫೂರ್ ಹಾಗೂ ಈತನ ಜೊತೆಗಾರರು ಪರಾರಿಯಾಗಿದ್ದಾರೆ. ದಾಳಿ ವೇಳೆ ಒಟ್ಟು‌ 846 ಕೆಜಿ ವಿವಿಧ ನಕಲಿ ಮಸಾಲೆ ಪದಾರ್ಥಗಳು ಜಪ್ತಿ ಮಾಡಲಾಗಿದೆ. ಈ ಪೈಕಿ 367 ಕೆಜಿ ಬಣ್ಣ ಮಿಶ್ರಿತ ದನಿಯಾ ಕಾಳು, 220 ಕೆಜಿ ಅರಿಶಿನ ಹಾಗೂ ಕಡಲೆಕಾಯಿ, 150 ಕೆಜಿ ಕೆಂಪು ಕಡಲೆ, 16 ಕೆಜಿ ಕೆಂಪು ಕೊಬ್ಬರಿ, 6.5 ಕೆಜಿ ನೀಲಗಿರಿ ಎಲೆ, 43 ಕೆಜಿ ಕಾಳು ಮೆಣಸಿನಂತಿರುವ ಪಪ್ಪಾಯ ಬೀಜ, 42 ಕೆಜಿ ಚಕ್ಕೆ, 500 ಗ್ರಾಂ ಹಳದಿ ಹಾಗೂ ಕೆಂಪು ಬಣ್ಣದ ಕೆಮಿಕಲ್ ಪೌಡರ್ ಜಪ್ತಿ ಮಾಡಲಾಗಿದೆ. ಸದ್ಯ ಆಹಾರ ಸುರಕ್ಷತಾ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

Shwetha M