ರೈಲು ಹಳಿ ಮೇಲೆ ಮರಿಗೆ ಜನ್ಮ ನೀಡಿದ ಆನೆ – ಎರಡು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತ

ರೈಲು ಹಳಿ ಮೇಲೆ ಮರಿಗೆ ಜನ್ಮ ನೀಡಿದ ಆನೆ – ಎರಡು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತ

ಗಜಪ್ರಸವ ಅಂದರೆ ಎಲ್ಲರಿಗೂ ಗೊತ್ತೇ ಇದೆ. ಇಂಥದ್ದೊಂದು ಅಪರೂಪದ ಘಟನೆ ರೈಲು ಹಳಿಮೇಲೆಯೇ ನಡೆದಿದೆ. ರೈಲು ಹಳಿಯಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದೆ. ಇದಕ್ಕಾಗಿ ರೈಲ್ವೆ ಅಧಿಕಾರಿಗಳು ಎರಡು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಳಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ:ವಯಸ್ಸಿಗೂ ಮೊದಲೇ ನಿಮ್ಮ ಕೂದಲು ಬಿಳಿಯಾಗಿದ್ಯಾ? – ಈ ಮನೆಮದ್ದು ಬಳಸಿ ನಿಮ್ಮ ಕೂದಲಿನ ಆರೈಕೆ ಮಾಡಿ

ಜಾರ್ಖಂಡ್‌ನ ರಾಮಗಢದಲ್ಲಿ ಇಂಥೊದ್ದೊಂದು ವಿಶೇಷ ಘಟನೆ ನಡೆದಿದೆ. ಜೂನ್ 25 ರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಗರ್ಭಿಣಿ ಹೆಣ್ಣು ಆನೆ ಹೆರಿಗೆ ನೋವಿನಿಂದ ಹಳಿಗಳ ಮೇಲೆ ಮಲಗಿದೆ ಎನ್ನುವ ಮಾಹಿತಿ ಬಂದಿತು. ಆದರೆ ಈ ಆನೆಯೂ ರೈಲಿಗೆ ಸಿಲುಕಬಹುದು, ಹೀಗಾಗಿ ದಯವಿಟ್ಟು ಮಾರ್ಗದಲ್ಲಿ ಎಲ್ಲಾ ರೈಲುಗಳ ಸಂಚಾರವನ್ನು ನಿಲ್ಲಿಸುವಂತೆ ರೈಲು ಚಾಲಕ ಮತ್ತು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಈ ಮಾಹಿತಿ ಬಂದ ತಕ್ಷಣವೇ ಅರಣ್ಯ ಅಧಿಕಾರಿ ನಿತೀಶ್ ಕುಮಾರ್ ಬರ್ಕಕಾನಾದಲ್ಲಿರುವ ರೈಲ್ವೆ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ ಆ ಕೂಡಲೇ ಎಲ್ಲಾ ರೈಲುಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಆನೆಯೂ ಮರಿಗೆ ಜನ್ಮ ನೀಡುವ ಸಲುವಾಗಿ ಎರಡು ಗಂಟೆಗಳ ಕಾಲ ರೈಲನ್ನು ನಿಲ್ಲಿಸಿ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.

ಈ ಹೃದಯಸ್ಪರ್ಶಿ ವಿಡಿಯೋವನ್ನು ಕೇಂದ್ರ ಸಚಿವ ಭೂಪೇಂದ್ರ ಸಿಂಗ್‌ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಚಾಲಕ ಮತ್ತು ರೈಲ್ವೆ ಅಧಿಕಾರಿ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆನೆಯು ತನ್ನ ಮರಿಗೆ ಜನ್ಮ ನೀಡುವ ಸಂದರ್ಭದಲ್ಲಿ ರೈಲು ನಿರ್ವಾಹಕರು ಎರಡು ಗಂಟೆಗಳ ಕಾಲ ತಾಳ್ಮೆಯಿಂದ ಕಾಯುತ್ತಿದ್ದರು. ಅಲ್ಲದೇ ಇಂತಹ ಹೃದಯಸ್ಪರ್ಶಿ ಘಟನೆಗಳನ್ನು ನೋಡುವುದು ಸಂತೋಷಕರವಾಗಿದೆ ಎಂದು ಬರೆದುಕೊಂಡಿದ್ದಾರೆ. ರಾಮಗಢದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ನಿತೀಶ್ ಕುಮಾರ್ ಈ ಘಟನೆ ಬಗ್ಗೆ ವಿವರಿಸಿದ್ದಾರೆ. ಈ ಘಟನೆ ಬಗ್ಗೆ ಕೇಳಿ, ಮತ್ತು ವಿಡಿಯೋ ನೋಡಿದವರು ಕೂಡಾ ತಾಯಿ ಆನೆ ಹಾಗೂ ಅದರ ಮರಿಯನ್ನು ರಕ್ಷಿಸಿದ ರೈಲ್ವೆ ಸಿಬ್ಬಂದಿಗೆ ಸೆಲ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ.

Sulekha