ಭಾರತದ ಬೆಳಗಿದ ಆಕಾಶ್ ದೀಪ್ ಮನದಲ್ಲಿ ನೋವಿನ ಸರಮಾಲೆ- ತಮ್ಮನ ಸಾಧನೆಗೆ ಅನಾರೋಗ್ಯದ ನಡುವೆಯೂ ಅಕ್ಕನ ಸಂಭ್ರಮ

ಭಾರತದ ಬೆಳಗಿದ ಆಕಾಶ್ ದೀಪ್ ಮನದಲ್ಲಿ ನೋವಿನ ಸರಮಾಲೆ- ತಮ್ಮನ ಸಾಧನೆಗೆ ಅನಾರೋಗ್ಯದ ನಡುವೆಯೂ ಅಕ್ಕನ ಸಂಭ್ರಮ

ಆಂಗ್ಲರ ನಾಡಿನಲ್ಲಿ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಕಾಶ್ ದೀಪ್ ಬಗ್ಗೆ ಹೊಗಳಿಕೆಯ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಆಕಾಶ್ ದೀಪ್ ಸಹೋದರಿ ಕ್ಯಾನ್ಸರ್ ಗೆದ್ದು ಬರಲಿ ಎಂಬ ಹಾರೈಕೆ ಕ್ರಿಕೆಟ್ ಅಭಿಮಾನಿಗಳದ್ದು. ಭಾರತ ಗೆದ್ದ ಖುಷಿಯಲ್ಲೇ ಆಕಾಶ್ ದೀಪ್ ಮನಸಿನ ನೋವು ಹೊರಬಂದಿತ್ತು. ತನ್ನ ಸಹೋದರಿ ಕ್ಯಾನ್ಸರ್ ಜೊತೆ ಹೋರಾಡುತ್ತಿದ್ದಾಳೆ ಎಂಬ ನೋವಿನ ವಿಚಾರವನ್ನ ಆಕಾಶ್ ದೀಪ್ ಹೊರಜಗತ್ತಿಗೆ ತಿಳಿಸಿದ್ದರು. ಜೊತೆಗೆ 10 ವಿಕೆಟ್ ಪಡೆದ ತನ್ನ ಅದ್ಭುತ ಪ್ರದರ್ಶನವನ್ನು ಸಹೋದರಿಗೆ ಸಮರ್ಪಿಸಿದ್ದರು. ನಾನು ಚೆಂಡನ್ನು ಕೈಗೆತ್ತಿಕೊಂಡಾಗಲೆಲ್ಲಾ ಅವಳ ಆಲೋಚನೆಗಳು ಮತ್ತು ಚಿತ್ರಗಳು ನನ್ನ ಮನಸ್ಸಿನಲ್ಲಿ ಹಾದು ಹೋಗುತ್ತಿದ್ದವು. ಈ ಪ್ರದರ್ಶನ ಅವಳಿಗೆ ಸಮರ್ಪಿಸುತ್ತಿದ್ದೇನೆ. ಸಹೋದರಿ, ನಾವೆಲ್ಲರೂ ನಿಮ್ಮೊಂದಿಗಿದ್ದೇವೆ ಎಂದು ಆಕಾಶ್ ದೀಪ್ ಧೈರ್ಯ ತುಂಬಿದ್ದರು. ಇದೀಗ ಆಕಾಶ್ ದೀಪ್ ಸಹೋದರಿ ತನ್ನ ತಮ್ಮನ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ:ಬಡತನದಲ್ಲಿ ಬದುಕಿ ಕ್ರಿಕೆಟ್ ಜಗತ್ತು ಬೆಳಗಲು ಬಂದ ಆಕಾಶದೀಪ – ಚೊಚ್ಚಲ ಪಂದ್ಯದಲ್ಲೇ ಸ್ಟಾರ್ ಆದ ಆಕಾಶ್‌ದೀಪ್

ಆಕಾಶ್ ದೀಪ್ ಸಹೋದರಿ ಜ್ಯೋತಿ ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಜ್ಯೋತಿ ಅವರಿಗೆ ಮಾರಕ ಕೊಲೊನ್ ಕ್ಯಾನ್ಸರ್ ರೋಗ ಇರುವುದು ಗೊತ್ತಾಗಿದ್ದು 2025ರಲ್ಲಿ. ಈ ವೇಳೆ ಆಕಾಶ್ ದೀಪ್ ಅವರು ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯುತ್ತಿದ್ದರು. ಇತ್ತ ಕರುಳಿನಲ್ಲಿ ಗಂಟು ಇದ್ದಿದ್ದರಿಂದ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಅಗತ್ಯವಾಗಿತ್ತು. ಹೀಗಾಗಿ ಜ್ಯೋತಿ ಅವರು ಸರ್ಜರಿಗೆ ಒಳಗಾಗಿದ್ದರು. ಇದೇ ವೇಳೆ ಆಕಾಶ್ ದೀಪ್ ಐಪಿಎಲ್​ನಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ತನ್ನ ಅಭ್ಯಾಸ ಮುಗಿಸಿದ ನಂತರ ಪ್ರತಿದಿನ ಆಸ್ಪತ್ರೆಗೆ ಭೇಟಿ ನೀಡಿ ಆಕ್ಕನ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಿದ್ದರು. ಇದರ ನಡುವೆ ಆಕಾಶ್ ದೀಪ್ ತುಂಬಾ ಕುಗ್ಗಿ ಹೋಗಿದ್ದರು. ಏಕೆಂದರೆ ಕೆಲ ವರ್ಷಗಳ ಹಿಂದೆಯಷ್ಟೇ ಆಕಾಶ್ ದೀಪ್ ತನ್ನ ತಂದೆ ಹಾಗೂ ಅಣ್ಣನನ್ನು ಕಳೆದುಕೊಂಡಿದ್ದರು. ಈ ನೋವಿನಿಂದ ಹೊರಬರುವ ಮುನ್ನವೇ ಅಕ್ಕನ ಕ್ಯಾನ್ಸರ್ ಸುದ್ದಿಯು ಆಕಾಶ್ ದೀಪ್ ಅವರನ್ನು ಮತ್ತಷ್ಟು ಹೈರಾಣರನ್ನಾಗಿಸಿತು. ಹೀಗಾಗಿಯೇ ಟೀಮ್ ಇಂಡಿಯಾ ವೇಗಿ ಅಕ್ಕನ ಆರೋಗ್ಯದ ಬಗ್ಗೆ ತುಂಬಾ ಚಿಂತತರಾಗಿದ್ದರು. ಈ ಚಿಂತೆಯೊಂದಿಗೆ ಇಂಗ್ಲೆಂಡ್​ ಪ್ರವಾಸ ಮಾಡಿರುವ ಆಕಾಶ್ ದೀಪ್ ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಅಲ್ಲದೆ ತನ್ನ ಅಮೋಘ ಪ್ರದರ್ಶನವನ್ನು ಅಕ್ಕ ಜ್ಯೋತಿಗೆ ಸಮರ್ಪಿಸಿದ್ದಾರೆ.

ಆಕಾಶ್ ದೀಪ್ ಇಂದು ಕ್ರಿಕೆಟ್ ಅಂಗಳದಲ್ಲಿ ಏನೇ ಸಾಧಿಸಿದ್ದಾರೋ ಅದಕ್ಕೆ ಕಾರಣ ಸಹೋದರಿ ಜ್ಯೋತಿ. ಏಕೆಂದರೆ ಆಕಾಶ್ ಓದಿ ಉತ್ತಮ ಸಾಧನೆ ಮಾಡಬೇಕೆಂದು ಶಿಕ್ಷಕರಾಗಿದ್ದ ಅವರ ತಂದೆ ಬಯಸಿದ್ದರು. ಆದರೆ ಆಕಾಶ್ ದೀಪ್ ಓದು ತಲೆಗೆ ಹತ್ತುತ್ತಿರಲಿಲ್ಲ. ಬದಲಾಗಿ ಕ್ರಿಕೆಟ್​ ಆಡುವುದನ್ನು ಇಷ್ಟಪಡುತ್ತಿದ್ದರು. ಟೂರ್ನಮೆಂಟ್​ಗಳಿಗೆ ಹೊರಡುವ ಮೊದಲು ಸಹೋದರಿಗೆ ವಿಷಯ ತಿಳಿಸಿ ಅವರಿಂದಲೇ ಹಣ ಪಡೆಯುತ್ತಿದ್ದರು ಆಕಾಶ್ ದೀಪ್. ಗೆದ್ದ ಬಳಿಕ ಹಣವನ್ನು ಹಿಂತಿರುಗಿಸುತ್ತಿದ್ದರಂತೆ. ಬಿಹಾರ ಮೂಲದವರಾಗಿರುವ ಆಕಾಶ್ ದೀಪ್, ರಣಜಿ ತಂಡವನ್ನು ಪ್ರತಿನಿಧಿಸುತ್ತಿರುವುದು ಬಂಗಾಳ ಪರ ಎಂಬುದು ವಿಶೇಷ. ಇದಕ್ಕೇನು ಕಾರಣ ಎಂಬುದನ್ನು ಜ್ಯೋತಿ ಬಹಿರಂಗಪಡಿಸಿದ್ದಾರೆ. ಆಕಾಶ್ ದೀಪ್ ಕ್ರಿಕೆಟ್ ಆಡಲು ಶುರುವಾದಾಗ ಬಿಹಾರ ಕ್ರಿಕೆಟ್ ಮಂಡಳಿಯನ್ನು ರಣಜಿ ಟ್ರೋಫಿಯಿಂದ ನಿಷೇಧಿಸಲಾಗಿತ್ತು. ಹೀಗಾಗಿ ಅವನು ಬಂಗಾಳಕ್ಕೆ ತೆರಳಿದ್ದ. ಅಲ್ಲಿ  ಸ್ಥಳೀಯ ಪಂದ್ಯಗಳನ್ನು ಆಡುವ ಮೂಲಕ ತಮ್ಮ ಖರ್ಚುಗಳನ್ನು ಸ್ವಂತವಾಗಿ ನಿರ್ವಹಿಸುತ್ತಿದ್ದ. ಹೀಗೆ ಯಾರಿಗೂ ಹೊರೆಯಾಗದೇ ಎಲ್ಲವೂ ನೋಡಿಕೊಳ್ಳುತ್ತಿದ್ದ ಎಂದು ಜ್ಯೋತಿ ತಮ್ಮ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

Sulekha