Happy Birthday ದಾದಾ – ಸೌರವ್ ಗಂಗೂಲಿಗೆ 53ನೇ ವರ್ಷದ ಹುಟ್ಟುಹಬ್ಬ

ಭಾರತೀಯ ಕ್ರಿಕೆಟ್ನ ದಿಕ್ಕನ್ನೇ ಬದಲಿಸಿದ ಕ್ರಿಕೆಟಿಗ ಸೌರವ್ ಗಂಗೂಲಿ. ಜುಲೈ 8ಕ್ಕೆ ದಾದಾ 53ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನಾಲ್ಕು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಏಕೈಕ ಕ್ರಿಕೆಟಿಗ ಸೌರವ್ ಗಂಗೂಲಿ ಬಗ್ಗೆ ವಿಶೇಷ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಭಾರತದ ಗೆಲುವಿನ ಹೀರೋ ಆಕಾಶ್ ದೀಪ್ – ತನ್ನ ಗೆಲುವನ್ನ ಕ್ಯಾನ್ಸರ್ ಪೀಡಿತ ತಂಗಿಗೆ ಅರ್ಪಿಸಿದ ಅಣ್ಣ
ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ನಲ್ಲಿ 11,363 ರನ್ಗಳಿಸಿದ ಅಗ್ರಕ್ರಮಾಂಕದ ಎಡಗೈ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್ನಲ್ಲೂ ದಾದಾ ಮಿಂಚಿದ್ದಾರೆ. ಒಡಿಐನಲ್ಲಿ 10,000ಕ್ಕೂ ಹೆಚ್ಚು ರನ್, 100ಕ್ಕೂ ಹೆಚ್ಚು ವಿಕೆಟ್ ಪಡೆದ ಅಪರೂಪದ 6 ಆಟಗಾರರಲ್ಲಿ ಗಂಗೂಲಿ ಕೂಡಾ ಒಬ್ಬರು ಎನಿಸಿಕೊಂಡಿದ್ದಾರೆ. ಐಸಿಸಿ ಟೂರ್ನಿ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ ಏಕೈಕ ಭಾರತೀಯ ಆಟಗಾರ ಸೌರವ್ ಗಂಗೂಲಿ. ಭಾರತಕ್ಕೆ ವಿದೇಶಿ ನೆಲಗಳಲ್ಲಿ ಗೆಲ್ಲುವುದನ್ನು ಕಲಿಸಿ ಕೊಟ್ಟವರು ಇವರೇ.
ಗಂಗೂಲಿ ನಾಯಕತ್ವದಲ್ಲಿ ಭಾರತ ಒಮ್ಮೆಯೂ ವಿಶ್ವಕಪ್ ಗೆದ್ದಿಲ್ಲ.. ಆದರೂ ಭಾರತದ ಸರ್ವಶ್ರೇಷ್ಠ ನಾಯಕ ಯಾರು ಎಂಬ ಪ್ರಶ್ನೆ ಎದ್ದಾಗ ಬಹುತೇಕರ ಆಯ್ಕೆ ಬಂಗಾಳದ ಹುಲಿ ಗಂಗೂಲಿ. ಕಾರಣ, ಗಂಗೂಲಿ ಕೇವಲ ಕ್ಯಾಪ್ಟನ್ ಅಲ್ಲ, ಅವರು ಲೀಡರ್. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಇಲ್ಲಿದೆ. ಅಂದು
90ರ ದಶಕದಲ್ಲಿ ದೇಶದ ಮನೆ ಮನೆಗಳಲ್ಲಿ ಹೆಸರು ಮಾಡಿದ್ದ ಮೊಹಮ್ಮದ್ ಅಜರುದ್ದೀನ್ ಕ್ರಿಕೆಟ್ ಬದುಕಲ್ಲಿ ಮ್ಯಾಚ್ ಫಿಕ್ಸಿಂಗ್ ಬಿರುಗಾಳಿ ಎದ್ದಿತ್ತು. ಹೈದರಾಬಾದ್’ನ ಅಜರುದ್ದೀನ್ ಭಾರತ ಕ್ರಿಕೆಟ್ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದ ನಾಯಕ. ಆ ಸಮಯದಲ್ಲಿ ನಮ್ಮ ಕರ್ನಾಟಕದ ಕ್ರಿಕೆಟಿಗರಿಗೆ ಭಾರತ ತಂಡದಲ್ಲಿ ಬೆನ್ನೆಲುಬಾಗಿ ನಿಂತಿದ್ದ ವ್ಯಕ್ತಿ ಯಾರಾದರೂ ಇದ್ದರೆ ಅದು ಅಜರ್. ಕರ್ನಾಟಕದ ಆರೇಳು ಮಂದಿ ಆಟಗಾರರು ಒಟ್ಟೊಟ್ಟಿಗೇ ಭಾರತ ಪರ ಆಡಿದ್ದೂ ಅಜರ್ ನಾಯಕತ್ವದಲ್ಲೇ..
ಅಂಥಾ ಅಜರುದ್ದೀನ್ ಮ್ಯಾಚ್ ಫಿಕ್ಸಿಂಗ್ ಸುಳಿಯಲ್ಲಿ ಸಿಲುಕಿದಾಗ ಭಾರತೀಯ ಕ್ರಿಕೆಟ್’ನ ಬುಡವೇ ಅಲುಗಾಡಿ ಬಿಟ್ಟಿತು. ಅಜರ್ ನಂತರ ನಾಯಕತ್ವದ ಚುಕ್ಕಾಣಿ ಸಚಿನ್ ತೆಂಡೂಲ್ಕರ್ ಕೈಗೆ ಬಂದರೂ, ಅವರಿಗೂ ನಾಯಕತ್ವಕ್ಕೂ ಆಗಿ ಬರುತ್ತಿರಲಿಲ್ಲ. ಭಾರತೀಯ ಕ್ರಿಕೆಟ್ ನ ಪ್ರತಿಷ್ಠೆಗೆ ಪೆಟ್ಟು ಬಿದ್ದ ಸಮಯದಲ್ಲಿ ವರವಾಗಿ ಸಿಕ್ಕವರು ಕೋಲ್ಕತಾದ ಮಹಾರಾಜ ಸೌರವ್ ಗಂಗೂಲಿ..
ಬಂಗಾಳದ ದಾದಾ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡದ್ದು ಅತ್ಯಂತ ಕಠಿಣ ಸನ್ನಿವೇಶದಲ್ಲಿ. ನಾಯಕತ್ವದ ದಂಡ ಗಂಗೂಲಿ ಕೈಗೆ ಸಿಕ್ಕ ನಂತರದ್ದು ಎಲ್ಲಾ ಚರಿತ್ರೆ. ಚಾಂಪಿಯನ್ಸ್ ಟ್ರೋಫಿ, ಲಾರ್ಡ್ಸ್’ನಲ್ಲಿ ಕ್ರಿಕೆಟ್ ಜನಕರ ಹುಟ್ಟಡಗಿಸಿ ಗೆದ್ದ ನಾಟ್ ವೆಸ್ಟ್ ಕಿರೀಟ, ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಗೆಲುವು, ವಿಶ್ವಕಪ್ ಫೈನಲ್.. ದಾದಾ ಇಟ್ಟ ಪ್ರತಿ ಹೆಜ್ಜೆಯೂ ತ್ರಿವಿಕ್ರಮ ಹೆಜ್ಜೆ. ಭಾರತೀಯ ಕ್ರಿಕೆಟ್’ನ ಭವಿಷ್ಯವನ್ನೇ ಬದಲಿಸಿದ ಮೇರು ನಾಯಕ ಸೌರವ್ ಗಂಗೂಲಿ.
ಗಂಗೂಲಿಯವರ ಮೊದಲ ಪ್ರೇಮ ಕ್ರಿಕೆಟ್ ಅಲ್ಲ, ಫುಟ್ಬಾಲ್.. ಅಣ್ಣ ಸ್ನೇಹಶಿಶ್ ಗಂಗೂಲಿ ಕ್ರಿಕೆಟ್ ಆಡುತ್ತಿದ್ದದ್ದನ್ನು ನೋಡಿ, ‘ನಾನೂ ಏಕೆ ಕ್ರಿಕೆಟ್ ಆಡಬಾರದು’ ಎಂದು ತಂದೆಯ ಬಳಿ ಕೇಳಿದ್ದರಂತೆ. ‘ನೀನಾ..? ನಿನಗೆಲ್ಲಿ ಕ್ರಿಕೆಟ್ ಆಡಲು ಬರುತ್ತದೆ’ ಎಂದು ಛೇಡಿಸಿದ್ದರು ತಂದೆ ಚಾಂದಿದಾಸ್ ಗಂಗೂಲಿ.. ‘ಬನ್ನಿ, ತೋರಿಸುತ್ತೇನೆ’ ಎಂದು ತಂದೆಗೇ ಸವಾಲ್ ಹಾಕಿದ್ದ ಗಂಗೂಲಿ..
ತಂದೆಯನ್ನು ಮೈದಾನಕ್ಕೆ ಕರೆದೊಯ್ದವನೇ ‘ನನಗೆ ಬೌಲಿಂಗ್ ಮಾಡಿ’ ಎಂದಿದ್ದ.. ತಂದೆ ಆರು ಎಸೆತಗಳನ್ನು ಎಸೆಯುತ್ತಾರೆ.. ಆ ಆರೂ ಎಸೆತಗಳನ್ನು ಮೈದಾನದಿಂದ ಆಚೆ ಅಟ್ಟುತ್ತಾನೆ ಗಂಗೂಲಿ.. ಮಗ ಕೇಳಿದ್ದು ಸರಿಯಾಗಿದೆ ಎಂದು ತಂದೆಗೆ ಅನ್ನಿಸಿತ್ತು. ಕ್ರಿಕೆಟ್ ಅಕಾಡೆಮಿಗೇ ಸೇರಿಸಿ ಬಿಡುತ್ತಾರೆ.
ತಾಯಿಯ ಕಟ್ಟು ನಿಟ್ಟಿನ ಕಣ್ಣುಗಳಿಂದ ತಪ್ಪಿಸಿಕೊಳ್ಳಲು, ಓದುವ ಸಂಕಟದಿಂದ ಪಾರಾಗಲು, ಮನೆಯಿಂದ ಹೊರ ಬರಲು ಕ್ರಿಕೆಟ್ ಆಡಲು ಆರಂಭಿಸಿದ್ದ ಹುಡುಗ ಮುಂದೊಂದು ದಿನ ಭಾರತೀಯ ಕ್ರಿಕೆಟ್’ನ ಮಹಾರಾಜನಾಗಿ ಮೆರೆದು ಬಿಟ್ಟ.. ನಿಜಕ್ಕೂ ಸೌರವ್ ಗಂಗೂಲಿ ಕ್ರಿಕೆಟ್ ಲೋಕದ ಮಹಾರಾಜನೇ ಹೌದು.

ನೋಡಿರಿ

