ಭಾರತದ ಜೊತೆ ಟ್ರಂಪ್ ಸುಂಕ ಒಪ್ಪಂದಕ್ಕೆ ಕೌಂಟ್‌ಡೌನ್ – ಆ.1ರವರೆಗೂ ಸುಂಕ ಜಾರಿ ಗಡುವು ವಿಸ್ತರಣೆ

ಭಾರತದ ಜೊತೆ ಟ್ರಂಪ್ ಸುಂಕ ಒಪ್ಪಂದಕ್ಕೆ ಕೌಂಟ್‌ಡೌನ್ –  ಆ.1ರವರೆಗೂ ಸುಂಕ ಜಾರಿ ಗಡುವು ವಿಸ್ತರಣೆ

ಟ್ರಂಪ್ ಅಧಿಕಾರಕ್ಕೆ ಬಂದಾಗಿಂದ ಎಲ್ಲಾ ದೇಶಗಳ ಮೇಲೆ ತೆರಿಗೆ ವಾರ್ ಶುರುಮಾಡಿದ್ದಾರೆ.. ಇದ್ರಿಂದ ಸಾಕಷ್ಟು ದೇಶಗಳು ಕಂಗಾಲಾಗಿ ಹೋಗಿವೆ. ಇದ್ರಿಂದ ಭಾರತವೇನೂ ಹೊರತಾಗಿ ಇಲ್ಲ. ಆದ್ರೆ ಟ್ರಂಪ್ ಈಗ ಸ್ವಲ್ಪ ಭಾರತದ ಮೇಲೆ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ..

ಹೌದು.. ವಿದೇಶಗಳು ಅಮೆರಿಕದ ಉತ್ಪನ್ನಗಳ ಮೇಲೆ ಭಾರೀ ತೆರಿಗೆ ಹೇರುತ್ತದೆ ಎಂದು ಆರೋಪಿಸಿದ್ದ ಅಧ್ಯಕ್ಷ ಟ್ರಂಪ್ ಇದಕ್ಕೆ ಪ್ರತಿಯಾಗಿ ಆಯಾ ದೇಶಗಳ ಮೇಲೆ ಪ್ರತ್ಯೇಕವಾದ ಪ್ರತಿ ತೆರಿಗೆ ಹೇರುವ ನಿರ್ಧಾರವನ್ನು ಕಳೆದ ಏ.2ರಂದು ಪ್ರಕಟಿಸಿದ್ದರು.  ಇದ್ರ ಎಫೆಕ್ಟ್ ಭಾರತದ ಮೇಲೂ ಬಿದ್ದಿತ್ತು.. ಭಾರತದ ಮೇಲೆ ಶೇ.26ರಷ್ಟು ಪ್ರತಿ ತೆರಿಗೆ ಘೋಷಣೆ ಮಾಡಿತ್ತು ಅಮೆರಿಕ.  ಆದರೆ, ಬಳಿಕ ತಮ್ಮ ಧೋರಣೆಯಲ್ಲಿ ಬದಲಾವಣೆ ಮಾಡಿದ್ದ ಟ್ರಂಪ್, ಈ ಪ್ರತಿ ತೆರಿಗೆ ತಪ್ಪಿಸಿಕೊಳ್ಳಲು ಎಲ್ಲಾ ದೇಶಗಳಿಗೂ ಅಮೆರಿಕದೊಂದಿಗೆ ಹೊಸ ವ್ಯಾಪಾರ ಒಪ್ಪಂದಕ್ಕೆ ಅವಕಾಶ ಕಲ್ಪಿಸಿದ್ದರು. ಅದರನ್ವಯ ಪ್ರತಿ ತೆರಿಗೆ ಜಾರಿ ದಿನಾಂಕ ಜು.9ಕ್ಕೆ ಮುಂದೂಡಿದ್ದರು.  ಈಗ ತೆರಿಗೆಗೆ ಸಂಬಂಧಿಸಿದ ಒಪ್ಪಂದ ಮಾಡಿಕೊಳ್ಳಲು ಆ.1ರವರೆಗೆ ಗಡುವು ವಿಸ್ತರಿಸಿದ್ದಾರೆ.

ಇದನ್ನೂ ಓದಿ: ಅಮ್ಮನಿಗೆ ಹೊಸ ಕಾರು ಗಿಫ್ಟ್‌ ಕೊಟ್ಟ ಡ್ರೋನ್‌ ಪ್ರತಾಪ್ – ಮಗನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ!

ಆದರೆ ಈ 90 ದಿನಗಳ ಅವಧಿಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳು ಅಮೆರಿಕದ ಜೊತೆಗೆ ಹೊಸದಾಗಿ ಒಪ್ಪಂದ ಮಾತುಕತೆ ನಡೆಸಿದ್ದವು.  ಬಹುತೇಕ ದೇಶಗಳ ಜೊತೆ ಮಾತುಕತೆ ಅಂತಿಮ ಹಂತಕ್ಕೆ ಬಂದಿದೆಯಾದರೂ, ಕೆಲವೊಂದು ವಿಷಯಗಳ ಕುರಿತು ಭಿನ್ನಾಭಿಪ್ರಾಯ ಹಾಗೆಯೇ ಉಳಿದುಕೊಂಡಿದೆ. ಹೀಗಾಗಿ ಭಾರತ ಸೇರಿದಂತೆ ಕೆಲ ದೇಶಗಳಿಗೆ ಮಾತುಕತೆ ಅಂತಿಮಗೊಳಿಸಲು ಇನ್ನಷ್ಟು ಸಮಯ ನೀಡಲು ಟ್ರಂಪ್ ನಿರ್ಧರಿಸಿದ್ದಾರೆ.

ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್‌ ವೇಳೆಗೆ ಮೊದಲ ಹಂತದ ಮಾತುಕತೆಯನ್ನು ಮುಕ್ತಾಯಗೊಳಿಸಲು ಗಡುವನ್ನು ನಿಗದಿಪಡಿಸಿದ್ದಾರೆ. ಅದಕ್ಕೂ ಮೊದಲು, ಎರಡೂ ದೇಶಗಳು ಮಧ್ಯಂತರ ಒಪ್ಪಂದ ಅಂತಿಮಗೊಳಿಸುವ ಸಾಧ್ಯತೆಯಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಂಪ್ ಅವರು, ನಾವು ಈಗಾಗಲೇ ಬ್ರಿಟನ್ ಹಾಗೂ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಭಾರತದೊಂದಿಗೂ ನಿಕಟ ಹಂತದಲ್ಲಿದ್ದೇವೆ ಎಂದು ವಾಷಿಂಗ್ಟನ್‌ನಲ್ಲಿ ಹೇಳಿದ್ದಾರೆ.

ನಾವು ಬೇರೆ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದೇನೆ. ಹಾಗಾಗಿ ಕೆಲವು ದೇಶಗಳಿಗೆ ಸುಂಕ ವಿಧಿಸುವ ಆದೇಶ ಪತ್ರಗಳನ್ನು ಕಳುಹಿಸಿದ್ದೇವೆ. ಇನ್ನು ಕೆಲವು ದೇಶಗಳೊಂದಿಗೆ ಸ್ವಲ್ಪ ಹೊಂದಾಣಿಕೆಯಾಗಬಹುದು ಎಂದು ತಿಳಿಸಿದ್ದಾರೆ. ಈ ಪತ್ರಗಳನ್ನು ಸ್ವೀಕರಿಸಿದ ದೇಶಗಳಲ್ಲಿ ಬಾಂಗ್ಲಾದೇಶ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಕಾಂಬೋಡಿಯಾ, ಇಂಡೋನೇಷ್ಯಾ, ಜಪಾನ್, ಕಝಾಕಿಸ್ತಾನ್, ಲಾವೋಸ್, ಮಲೇಷ್ಯಾ, ಸೆರ್ಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಟುನೀಶಿಯಾ ಸೇರಿವೆ.

 

Kishor KV