ಕಾಂತಾರ -1’ ರಿಲೀಸ್ ಡೇಟ್ ಫಿಕ್ಸ್ – ಅ.2ಕ್ಕೆ ರಿಷಬ್ ದಂತಕಥೆ ದರ್ಶನ
ಪೋಸ್ಟರ್‌ನಲ್ಲೇ ಕಥೆ ರಿವೀಲ್!?

ಕಾಂತಾರ.. ಕನ್ನಡ ಮಾತ್ರವಲ್ಲ ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಧೊಳೆಬ್ಬಿಸಿದ ಸಿನಿಮಾ. 2022 ರಲ್ಲಿ ತೆರೆ ಕಂಡ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಕ್ರಾಂತಿಯನ್ನೇ ಮಾಡಿತ್ತು.. ಅದೆಷ್ಟೋ ವರ್ಷಗಳಿಂದ ಜನರನ್ನೇ ಕಾಣದ ಥಿಯೇಟರ್‌ಗಳು ಈ ಸಿನಿಮಾದಿಂದ ಹೌಸ್ ಫುಲ್ ಆಗಿದ್ವು.. ಕರ್ನಾಟಕದ ಸಂಸ್ಕೃತಿಯನ್ನ ಈ ಸಿನಿಮಾ ಜಗತ್ತಿಗೆ ಎತ್ತಿ ತೋರಿಸಿತ್ತು. ರಿಷಬ್ ಶೆಟ್ಟಿಗೆ ದೊಡ್ಡ ಬ್ರೇಕ್ ಕೊಟ್ಟಿದ ಸಿನಿಮಾ ಇದಾಗಿತ್ತು.. ಕಾಂತಾರ ಸಿನಿಮಾ ನೋಡಿದವರು ಕಾಂತಾರ ಪ್ರೀಕ್ವೆಲ್ ಯಾವಾಗ ಬರುತ್ತೆ ಅಂತ ಕಾಯುತ್ತಿದ್ದರು.. ಅದ್ರಲ್ಲೂ ಕಾಂತಾರ -1 ಸಿನಿಮಾ ಶೂಟಿಂಗ್ ವೇಳೆ ನಡೆದ ಅವಘಡಗಳು ಸಿನಿಮಾದ ಬಗ್ಗೆ ಉಹಾಪೂಹಗಳು ಹರಡುವಂತೆ ಮಾಡಿತ್ತು. ಬಟ್ ಈಗ ಕಾಂತಾರ ಚಿತ್ರ ತಂಡ ಬಿಗ್ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟಿದ್ದು, ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ಅಕ್ಟೋಬರ್ 2ಕ್ಕೆ ಕಾಂತಾರ ರಿಲೀಸ್
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿತ್ತು. ಮೊದಲಿಗೆ ಕನ್ನಡದಲ್ಲಿ ರಿಲೀಸ್ ಆಗಿ, ನಂತರ ಬಹುಭಾಷೆಗಳಲ್ಲೂ ಈ ಸಿನಿಮಾ ತೆರೆಕಂಡಿತ್ತು. ರಿಷಬ್ ಶೆಟ್ಟಿ ಅವರ ಕಥೆ ಹಾಗೂ ಅಭಿನಯಕ್ಕೆ ಬಾಲಿವುಡ್ ಮಂದಿ ಕೂಡ ಬೆರಗಾಗಿದ್ದರು. ಕಾಂತಾರ ನಂತ್ರ ರಿಷಬ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಈ ನಡುವೆ ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬದ ಸಂಭ್ರಮದ ನಡುವೆ ಸಿನಿ ರಸಿಕರಿಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ಸೋಷಿಯಲ್ ಮೀಡಿಯಾದಲ್ಲಿ ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್‌ನವರು, ರಿಷಬ್ ಶೆಟ್ಟಿ ಅವರ ಪರಶುರಾಮನ ಅವತಾರದಲ್ಲಿರುವ ಪೋಸ್ಟರ್ ಅನ್ನು ಶೇರ್ ಮಾಡಿದೆ. ಇದರ ಜೊತೆಗೆ ಚಿತ್ರದ ರಿಲೀಸ್ ಡೇಟ್ ಅನ್ನು ಹೈಲೈಟ್ ಮಾಡಿದ್ದಾರೆ.
ದಂತಕಥೆಯ ಹಿಂದಿರುವ ಶಕ್ತಿ ರಿಷಬ್ ಶೆಟ್ಟಿ ಅವರಿಗೆ ಜನ್ಮದಿನದ ಶುಭಾಶಯಗಳು. ಕಾಂತಾರ ಅಧ್ಯಾಯ 1 ಅಕ್ಟೋಬರ್ 2, 2025ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ದಂತಕಥೆಯ ಮುನ್ನುಡಿ.. ಆ ನುಡಿಗೊಂದು ಪರಿಚಯ.. ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ ಎಂದು ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದ್ದಾರೆ.
ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡ ರಿಷಬ್
ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ರಿಷಬ್ ಶೆಟ್ಟಿ ಅವರು ಒಂದು ಕೈಯಲ್ಲಿ ಕೊಡಲಿ ಹಾಗೂ ಗುರಾಣಿ ಹಿಡಿದಿದ್ದು, ಅದಕ್ಕೆ ಬಾಣಗಳು ಚುಚ್ಚಿಕೊಂಡಿವೆ. ಬ್ಯಾಕ್‌ಗ್ರೌಂಡ್‌ನಲ್ಲಿ ಬೆಂಕಿಯಿದ್ದು, ದಪ್ಪವಾದ ಹಗ್ಗದ ಜೊತೆ ರಿಷಬ್ ಶೆಟ್ಟಿ ಆಕ್ರೋಶದ ಲುಕ್‌ನಲ್ಲಿ ಆರ್ಭಟಿಸಿದ್ದಾರೆ. ಹಾಗೇ ಬ್ಯಾಕ್‌ಗ್ರೌಂಡ್‌ನಲ್ಲಿ ಯುದ್ದ ಸನ್ನಿವೇಶ ಕೂಡ ಇದ್ದು ಕಾಂತಾರ 1 ರ ಬಗ್ಗೆ ಸಾಕಷ್ಟು ಕುತೂಹಲವನ್ನ ಮೂಡುವಂತೆ ಮಾಡಿದೆ.
ಕಾಂತಾರ: ಚಾಪ್ಟರ್ 1 ಮೇಲೆ ಬೆಟ್ಟದಷ್ಟು ನಿರೀಕ್ಷೆ
ಕಾಂತಾರ: ಚಾಪ್ಟರ್ 1 ಚಿತ್ರ ಹಲವು ವಿಶೇಷತೆಗಳಿಂದ ಕೂಡಿದ ಸಿನಿಮಾ. ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾಕ್ಕೆ ಹೋಲಿಕೆ ಮಾಡಿದರೆ, ಹಲವು ಹೊಸತನಗಳಿರುವ ಸಿನಿಮಾ. ಆಧ್ಯಾತ್ಮ ಮತ್ತು ಸಾಹಸಗಾಥೆಯ ಸಮ್ಮಿಶ್ರಣವೂ ಈ ಸಿನಿಮಾದಲ್ಲಿದೆ. ಟೀಸರ್‌ನಲ್ಲಿಯೇ ಕುತೂಹಲ ಮೂಡಿಸಿದ್ದ ಸಿನಿಮಾ ತೆರೆ ಮೇಲೆ ಅಬ್ಬರಿಸೋಕೆ ರೆಡಿಯಾಗಿದೆ. 3ಸಾವಿರಕ್ಕೂ ಅಧಿಕ ಕಲಾವಿದರು.. ಬರೋಬ್ಬರಿ 25 ಎಕ್ರೆ ಪ್ರದೇಶದಲ್ಲಿ ಬೃಹತ್ ಸೆಟ್ ಹಾಕಿ. ಕಾಲ್ಪನಿಕ ಊರಿನಲ್ಲಿ “ಕಾಂತಾರ ಚಾಪ್ಟರ್ 1” ಸಿನಿಮಾವನ್ನು ಶೂಟಿಂಗ್ ಮಾಡಲಾಗಿದೆ. ಭಾರತೀಯ ಹಾಗೂ ಅಂತಾರಾಷ್ಟ್ರೀಯ ತಂತ್ರಜ್ಞರೂ ಈ ಸಿನಿಮಾಕ್ಕೆ ಕೆಲಸ ಮಾಡಿದ್ದಾರೆ. 45 ರಿಂದ 50 ದಿನಗಳ ಕಾಲ ಸುಮಾರು 500 ತರಬೇತಿದಾರರು, 3000ಕ್ಕೂ ಹೆಚ್ಚು ಜೂನಿಯರ್ ಕಲಾವಿದರು ಈ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಈ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.

ನೋಡಿರಿ

