ಆಂಗ್ಲರ ಅಹಂಕಾರ ಅಡಗಿಸಿದ ಭಾರತ.. ಕ್ರಿಕೆಟ್ ಇತಿಹಾಸದಲ್ಲಿ ಹೊಸ ಚರಿತ್ರೆ – ಗಿಲ್ 430 ರನ್ಸ್.. ಅದೆಷ್ಟು ದಾಖಲೆ?

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿದೆ. ಲೀಡ್ಸ್ ಟೆಸ್ಟ್ನಲ್ಲಿ ಐದೈದು ಶತಕ ಗಳಿಸಿಯೂ ಸೋಲು ಕಂಡಿದ್ದ ಭಾರತ ತಂಡ ಬರ್ಮಿಂಗ್ ಹ್ಯಾಮ್ನಲ್ಲಿ ಇಂಗ್ಲೆಂಡ್ ಬ್ಯಾಟರ್ಗಳನ್ನ ಚೆಂಡಾಡಿ ಗೆದ್ದು ಬೀಗಿದೆ. ಸರಣಿ ಸಮಬಲದೊಂದಿಗೆ 3ನೇ ಪಂದ್ಯಕ್ಕೆ ರೆಡಿಯಾಗಿದೆ.
ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆ ಬಳಿಕ ಡೊನಾಲ್ಡ್ ಟ್ರಂಪ್ ವಾರ್ನಿಂಗ್ – ಅಮೆರಿಕ ವಿರೋಧಿ ನೀತಿ ಬೆಂಬಲಿಸೋ ದೇಶಕ್ಕೆ ಸುಂಕದ ಬರೆ!
ಮೊದಲ ಪಂದ್ಯದ ಸೋಲಿನೊಂದಿಗೆ ಎರಡನೇ ಪಂದಕ್ಕೆ ಕಾಲಿಟ್ಟಿದ್ದ ಟೀಂ ಇಂಡಿಯಾ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 587 ರನ್ ಕಲೆಹಾಕಿತು. ಆ ಬಳಿಕ ಇಂಗ್ಲೆಂಡ್ ತಂಡವನ್ನು 407 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ 180 ರನ್ಗಳ ದೊಡ್ಡ ಮುನ್ನಡೆ ಪಡೆದುಕೊಂಡಿತು. ಆ ನಂತರ ಎರಡನೇ ಇನ್ನಿಂಗ್ಸ್ನಲ್ಲಿ ನಾಯಕ ಶುಭ್ಮನ್ ಗಿಲ್ ಅವರ ಶತಕ, ಕೆಎಲ್ ರಾಹುಲ್, ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರ ಅರ್ಧಶತಕದ ನೆರವಿನಿಂದ ಆರು ವಿಕೆಟ್ಗಳಿಗೆ 427 ರನ್ ಬಾರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ 608 ರನ್ಗಳ ಗುರಿಯನ್ನು ನಿಗದಿಪಡಿಸಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ನಲ್ 271 ರನ್ಗಳಿಗೆ ಆಲೌಟ್ ಆಗುವ ಮೂಲಕ ಪಂದ್ಯವನ್ನು ಕಳೆದುಕೊಂಡಿದೆ.
ಎರಡೂ ಇನ್ನಿಂಗ್ಸ್ ನಲ್ಲೂ ಅದ್ಭುತ ಪ್ರದರ್ಶನ ನೀಡಿದ ಗಿಲ್!
ಎರಡನೇ ಪಂದ್ಯದಲ್ಲಿ ಭಾರತದ ಗೆಲುವಿಗೆ ಗಿಲ್ ಅವ್ರ ಪ್ರದರ್ಶನವೇ ಮುಖ್ಯ ಕಾರಣ. ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ಪರ ನಾಯಕ ಶುಭ್ಮನ್ ಗಿಲ್ 269 ರನ್ ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. 180 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಗಿಲ್ 161 ರನ್ ಬಾರಿಸಿದರು. ಎರಡೂ ಇನ್ನಿಂಗ್ಸ್ಗಳಿಂದ 430 ರನ್ಸ್ ಕಲೆ ಹಾಕಿದ್ರು. ಭಾರತದ ಗೆಲುವಿಗೆ ಇದೇ ಅತಿದೊಡ್ಡ ಬುನಾದಿ ಹಾಕಿತ್ತು. ಹೀಗಾಗಿ ಬೌಲಿಂಗ್ನಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡಿದ ಭಾರತ ಈ ಐತಿಹಾಸಿಕ ಜಯದೊಂದಿಗೆ ಎಡ್ಜ್ಬಾಸ್ಟನ್ ಮೈದಾನದಲ್ಲಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿದ ಏಷ್ಯಾದ ಮೊದಲ ನಾಯಕ ಎಂಬ ಹೆಗ್ಗಳಿಕೆಯನ್ನು ಶುಭ್ ಮನ್ ಗಿಲ್ ತಮ್ಮದಾಗಿಸಿಕೊಂಡರು. ಹಾಗೇ ಟೀಮ್ ಇಂಡಿಯಾದ ನಾಯಕನಾಗಿ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿಯವ್ರ ದಾಖಲೆಯನ್ನು ಮುರಿದರು. 2014-15ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ನಾಯಕನಾಗಿ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಒಟ್ಟು 449 ರನ್ ಗಳಿಸಿದ್ದರು, ಆದರೆ ಗಿಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೇವಲ ನಾಲ್ಕು ಇನ್ನಿಂಗ್ಸ್ನಲ್ಲಿ 585 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಹಾಗೇ ಗಿಲ್ ನಾಯಕನಾಗಿ ಟೆಸ್ಟ್ ಪಂದ್ಯ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ನಾಯಕ (430) ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಶತಕ ಗಳಿಸಿದ ಮೂರನೇ ಭಾರತೀಯ ನಾಯಕ ಎಂಬ ದಾಖಲೆ ನಿರ್ಮಿಸಿದ್ದಾರೆ.
ಎಡ್ಜ್ ಬಾಸ್ಟನ್ ಕೋಟೆಯಲ್ಲಿ ಭಾರತಕ್ಕೆ ಮೊದಲ ಗೆಲುವು!
ಹೌದು. ಇದು ಟಿಂ ಇಂಡಿಯಾದ ಪಾಲಿಗೆ ಐತಿಹಾಸಿಕ ಗೆಲುವು. 1967 ರಲ್ಲಿ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಮೈದಾನದಲ್ಲಿ ಟೀಂ ಇಂಡಿಯಾ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿತ್ತು. ಆದರೆ ಅಂದಿನಿಂದ 2025 ರವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿರಲಿಲ್ಲ. ಈ ಮೈದಾನದಲ್ಲಿ ಈ ಹಿಂದೆ ಆಡಿದ್ದ 8 ಪಂದ್ಯಗಳಲ್ಲಿ 7 ರಲ್ಲಿ ಟೀಂ ಇಂಡಿಯಾ ಸೋತಿದ್ದರೆ, 1986 ರಲ್ಲಿ ನಡೆದಿದ್ದ ಒಂದು ಟೆಸ್ಟ್ ಪಂದ್ಯ ಡ್ರಾ ಆಗಿತ್ತು. ಸ್ಟಾರ್ ಆಟಗಾರರು, ಲೆಜೆಂಡರಿ ಆಟಗಾರರು ಮತ್ತು ಬಲಿಷ್ಠ ನಾಯಕರ ಹೊರತಾಗಿಯೂ, ಟೀಂ ಇಂಡಿಯಾಗೆ ಎಡ್ಜ್ಬಾಸ್ಟನ್ ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಹೊಸ ನಾಯಕ ಶುಭ್ಮನ್ ಗಿಲ್ ಮತ್ತು ಸ್ಟಾರ್ ಆಟಗಾರರಿಲ್ಲದೆ ಈ ಪಂದ್ಯಕ್ಕಿಳಿದಿದ್ದ ಟೀಂ ಇಂಡಿಯಾ ಅಂತಿಮವಾಗಿ ಈ ಸಾಧನೆ ಮಾಡಿದೆ.
ಒಟ್ನಲ್ಲಿ ಈ ಗೆಲುವಿನೊಂದಿಗೆ, ಟೀಂ ಇಂಡಿಯಾ 2025-27 ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದಿದ್ದರೆ, ಇತ್ತ ಭಾರಿ ಅಂತರದಲ್ಲಿ ಸೋತ ಆತಿಥೇಯ ಇಂಗ್ಲೆಂಡ್ ಎರಡನೇ ಸ್ಥಾನದಿಂದ ಕುಸಿದು ಮೂರನೇ ಸ್ಥಾನಕ್ಕೆ ಬಂದಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಅದರ ಗೆಲವಿನ ಶೇಕಡಾವಾರು 100 ಇದೆ. ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾ ಎರಡು ಪಂದ್ಯಗಳಲ್ಲಿ 16 ಅಂಕಗಳನ್ನು ಹೊಂದಿದ್ದು, ಅದರ ಗೆಲುವಿನ ಶೇಕಡಾವಾರು 66.67 ಆಗಿದೆ. ಫೈನಲಿ ಭಾರತದ ಈ ಜರ್ನಿ ಹೀಗೇ ಕಂಟಿನ್ಯೂ ಆಗಲಿ. ಆಂಗ್ಲರ ಅಹಂಕಾರ ಅಡಗಿಸಿ ಸರಣಿ ಕೈವಶ ಮಾಡಿಕೊಳ್ಳಲಿ.

ನೋಡಿರಿ

