ಆಂಗ್ಲರ ಗಿರಗಿಟ್ಲೆ ಆಡಿಸಿದ ಗಿಲ್.. ಡಕೆಟ್ & ಪೋಪ್ DUCK ಶಾಕ್! – 587 ರನ್.. ಫಾಲೋ ಆನ್ ಹೇರ್ತಾರಾ?

ಆಂಗ್ಲರ ಗಿರಗಿಟ್ಲೆ ಆಡಿಸಿದ ಗಿಲ್.. ಡಕೆಟ್ & ಪೋಪ್ DUCK ಶಾಕ್! – 587 ರನ್.. ಫಾಲೋ ಆನ್ ಹೇರ್ತಾರಾ?

ಟೀಂ ಇಂಡಿಯಾದಲ್ಲಿ ಪ್ರಿನ್ಸ್​ ಹವಾ ಶುರುವಾಯ್ತು. ರಾಜಕುಮಾರನ ರೌದ್ರವತಾರಕ್ಕೆ ಬ್ರಿಟಿಷ್ ಬೌಲರ್​ಗಳು ಅಕ್ಷರಶಃ ಥಂಡಾ ಹೊಡೆದಿದ್ದಾರೆ. ಭಾರತದ ಕಪ್ತಾನನಾಗಿ ಹೊಸ ತಲೆಮಾರಿನ ಸಾಮ್ರಾಜ್ಯಕ್ಕೆ ಅಡಿಗಲ್ಲು ಹಾಕಿದ್ದ  ಮೊದಲ ಪಂದ್ಯದಲ್ಲೇ ಸೆಂಚುರಿ.. ಈಗ ಎರಡನೇ ಪಂದ್ಯದಲ್ಲಿ ಡಬಲ್ ಸೆಂಚುರಿ.. ಬ್ಯಾಟ್​ನಲ್ಲೇ ಆಂಗ್ಲರ ಸೊಕ್ಕಡಗಿಸಿದ ಶುಭ್​ಮನ್ ಗಿಲ್ ಚರಿತ್ರೆ ಸೃಷ್ಟಿಸಿದ್ದಾರೆ. ಹಾಗೇ ಬೌಲಿಂಗ್​ನಲ್ಲೂ ಇಂಗ್ಲೆಂಡ್ ಪಡೆ ಚೆಂಡಾಡಿದ್ದಾರೆ. ಎಡ್ಜ್ ಬಾಸ್ಟನ್​ನಲ್ಲಿ ನಡೆಯುತ್ತಿರೋ ಎರಡನೇ ಪಂದ್ಯದ ಎರಡನೇ ದಿನದಲ್ಲಿ ನಡೆದ ರೋಚಕ ವಿಚಾರ ಇಲ್ಲಿದೆ.

ಇದನ್ನೂ ಓದಿ: ಪ್ರತಿ ಬಾಲ್‌ಗೂ ಹ್ಯಾರಿ ಬ್ರೂಕ್ ಬ್ರೇಕ್ – ಸಿಡಿದೆದ್ದ ರಿಷಭ್ ಪಂತ್, ರವೀಂದ್ರ ಜಡೇಜಾ ವಾರ್ನಿಂಗ್

ವಾಟ್ ಎ ಕಾನ್ಫಿಡೆನ್ಸ್.. ವಾಟ್ ಎ ಪರ್ಫಾಮೆನ್ಸ್.. ಎಡ್ಜ್ ಬಾಸ್ಟನ್ ಮೈದಾನದಲ್ಲಿ ಶುಭ್​ಮನ್ ಗಿಲ್ ಇಂಗ್ಲೆಂಡ್ ಬೌಲರ್​ಗಳನ್ನ ಅಕ್ಷರಶಃ ಗಿರಗಿಟ್ಲೆ ಆಡಿಸ್ತಿದ್ರು. ಮೊದಲ ದಿನದಾಟದಲ್ಲಿ ಸೆಂಚುರಿ ಸಿಡಿಸಿ ಅಬ್ಬರಿಸಿದ್ದ ಗಿಲ್ ಎರಡನೇ ದಿನದಾಟದಲ್ಲೂ ಅದೇ ಗ್ರಿಪ್​ನಲ್ಲೇ ಬ್ಯಾಟ್ ಬೀಸಿದ್ರು. ಡಬಲ್ ಸೆಂಚುರಿ ಬಾರಿಸಿ ಆಂಗ್ಲರನ್ನ ಅಟ್ಟಾಡಿಸಿ ಹೊಡೆದ್ರು.

ಇಂಗ್ಲೆಂಡ್ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಶುಭ್ ಮನ್ ಗಿಲ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಬರ್ಮಿಂಗ್ಹ್ಯಾಮ್ ನ ಎಡ್ಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೀತಿದೆ. ಗುರುವಾರ ಪಂದ್ಯದ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ ಅಕ್ಷರಶಃ ಡಾಮಿನೇಟ್ ಮಾಡಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 587 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ. ನಾಯಕ ಶುಭ್​ಮನ್ ಗಿಲ್ ಭಾರತ ಪರ ಅದ್ಭುತ ಪ್ರದರ್ಶನ ನೀಡಿ 269 ರನ್‌ಗಳ ದಾಖಲೆಯ ಇನ್ನಿಂಗ್ಸ್ ಆಡಿದರು. ಇದು ಇಂಗ್ಲೆಂಡ್ ನೆಲದಲ್ಲಿ ಭಾರತೀಯ ಬ್ಯಾಟರ್ ಒಬ್ಬನಿಂದ ಬಂದ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ. ಗುರುವಾರ ಭಾರತ ತಂಡ 5 ವಿಕೆಟ್ ಗಳ ನಷ್ಟಕ್ಕೆ 310 ರನ್​ಗಳ ಸ್ಕೋರ್‌ನೊಂದಿಗೆ 2ನೇ ದಿನದ ಆಟ ಆರಂಭಿಸಿತು. ಗಿಲ್ 114 ಮತ್ತು ಜಡೇಜಾ 41 ರನ್‌ಗಳೊಂದಿಗೆ ತಮ್ಮ ಇನ್ನಿಂಗ್ಸ್ ಮುಂದುವರಿಸಿದರು. ಮೊದಲ ಸೆಷನ್ ವೇಳೆಗೆ ಇಬ್ಬರ ಪಾರ್ಟರ್​ಶಿಪ್​ನಿಂದ ಒಳ್ಳೆ ಸ್ಕೋರ್ ಬಂದಿತ್ತು. ಜಡೇಜಾ 137 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ 89 ರನ್​ಗಳಿಸಿ ಔಟ್ ಆದ್ರು. ಕೇವಲ 13 ರನ್​ಗಳಿಂದ ಶತಕ ಮಿಸ್ ಮಾಡಿಕೊಂಡರು. ಆದರೆ ಅವರು ನಾಯಕ ಗಿಲ್​ ಜೊತೆಗೂಡಿ 203 ರನ್​ಗಳ ಜೊತೆಯಾಟ ನಡೆಸಿದರು. ಇದು ಭಾರತ ಬೃಹತ್ ಇನ್ನಿಂಗ್ಸ್ಗೆ ಕಾರಣರಾದರು. ಜಡೇಜಾ ಔಟ್ ಆದ ಬಳಿಕವೂ ಗಿಲ್ ತಮ್ಮ ಸಿಡಿಸಲಬ್ಬರದ ಆಟವನ್ನು ಮುಂದುವರಿಸಿದರು.

ನಾಯಕ ಗಿಲ್ ಗೆ ಸಾಥ್ ನೀಡಿದ ಸುಂದರ್!

ಜಡ್ಡು ಔಟ್ ಆದ ಬಳಿಕ 7ನೇ ವಿಕೆಟ್ ಜೊತೆಯಾಟದಲ್ಲಿ ವಾಶಿಂಗ್ಟನ್ ಸುಂದರ್ ಜೊತೆಗೆ 144 ರನ್​ಗಳನ್ನ ಭರ್ಜರಿ ಜೊತೆಯಾಟ ನೀಡಿದರು. ವಾಸಿಂಗ್ಟನ್ ಸುಂದರ್ 103 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 42 ರನ್​ಗಳಿಸಿ ಜೋ ರೂಟ್​ಗೆ ವಿಕೆಟ್ ಒಪ್ಪಿಸಿದರು. ಅಷ್ಟ್ರಲ್ಲಿ 200 ರನ್​ಗಳ ಗಡಿ ದಾಟಿ ತ್ರಿಶತಕ ಸಿಡಿಸುವ ಭರವಸೆಯಲ್ಲೇ ಗಿಲ್ ಬ್ಯಾಟಿಂಗ್ ಮುಂದುವರಿಸಿದ್ರು. 311 ಎಸೆತಗಳಿಗೆ ದ್ವಿಶತಕ ಸಿಡಿಸಿದ ಗಿಲ್, ನಂತರ 86 ಎಸೆತಗಳಲ್ಲಿ 69 ರನ್​ಗಳಿಸಿದರು. ಆದರೆ 269 ರನ್​ಗಳಿಸಿದ್ದ ವೇಳೆ ಜೋಶ್ ಟಂಗ್ ಬೌಲಿಂಗ್​​​ನಲ್ಲಿ ಕ್ರಾಲೆಗೆ ಕ್ಯಾಚ್ ನೀಡಿ ಔಟ್ ಆದ್ರು. ಆ ಬಳಿಕ ಆಕಾಶ್ ದೀಪ್ 6, ಮೊಹಮ್ಮದ್ ಸಿರಾಜ್ 8 ರನ್​ಗಳಿಸಿ ಔಟ್ ಆಗುವ ಮೂಲಕ ಭಾರತದ ಇನ್ನಿಂಗ್ಸ್​ಗೆ ತೆರೆಬಿದ್ದಿತು.

ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಗೆ ಆಘಾತ!

ಭಾರತ ನೀಡಿದ್ದ 587 ರನ್​ಗಳನ್ನ ಬೆನ್ನತ್ತಿದ ಅತಿಥೇಯ ಇಂಗ್ಲೆಂಡ್ ತಂಡ ಆರಂಭದಲ್ಲೇ ವಿಕೆಟ್​ಗಳನ್ನ ಕಳ್ಕೊಂಡಿದೆ. ತಂಡದ ಮೊತ್ತ 25 ರನ್ ಆಗುವಷ್ಟರಲ್ಲಿ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಬೆನ್ ಡಕೆಟ್ ಹಾಗೂ ಓಲಿ ಪೋಪ್ ಖಾತೆಯನ್ನೇ ತೆರೆಯದೇ ಆಕಾಶ್ ದೀಪ್ ಬೌಲಿಂಗ್​​ನಲ್ಲಿ 2 ಬ್ಯಾಕ್ ಟು ಬ್ಯಾಕ್ ಎಸೆತಗಳಲ್ಲಿ ಔಟ್ ಆದರು. 30 ಎಸೆತಗಳಲ್ಲಿ 3 ಬೌಂಡರಿ ಸಹಿತ 19 ರನ್​ಗಳಿಸಿದ್ದ ಜಾಕ್ ಕ್ರಾಲೆ ಮೊಹಮ್ಮದ್ ಸಿರಾಜ್ ಬೌಲಿಂಗ್​​ನಲ್ಲಿ ಕರುಣ್ ನಾಯರ್​ಗೆ ಕ್ಯಾಚ್​ ನೀಡಿದ್ರು. ಪ್ರಸ್ತುತ ಅನುಭವಿ ಜೋ ರೂಟ್ ಅಜೇಯ 18, ಹ್ಯಾರಿ ಬ್ರೂಕ್ ಅಜೇಯ 30 ರನ್​ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.

ಸದ್ಯ 77 ರನ್​ಗಳಿಗೆ 3 ವಿಕೆಟ್ ಕಳ್ಕೊಂಡಿರೋ ಇಂಗ್ಲೆಂಡ್ ಮೂರನೇ ದಿನ ಬ್ಯಾಟಿಂಗ್ ಕಂಟಿನ್ಯೂ ಮಾಡ್ತಾರೆ. ಬಟ್ ಕಡಿಮೆ ಸ್ಕೋರ್​ಗೆ ಎಲ್ಲಾ ವಿಕೆಟ್​ಗಳು ಉರುಳಿದ್ರೆ ಟೀಂ ಇಂಡಿಯಾ ಫಾಲೋ ಆನ್​ಗೆ ಕರೆಯಬಹುದು. ಅಂದ್ರೆ ಉಳಿದಿರುವಂತ ರನ್ಸ್​ನ ಮತ್ತೆ ಚೇಸ್ ಮಾಡೋಕೆ ಹೇಳೋದು. ಆಗ ಭಾರತಕ್ಕೆ ಗೆಲ್ಲೋ ಚಾನ್ಸಸ್ ಜಾಸ್ತಿ ಇರುತ್ತೆ.

Shwetha M