ಬೆಂಗಳೂರಲ್ಲಿ ವಿಶ್ವದ ನಂಬರ್ ವನ್ ಜಾವಲಿನ್ ಪಟು – ನೀರಜ್ ಚೋಪ್ರಾ ಕೆಒಎ ಹಾಲ್ ಆಫ್ ಫೇಮ್ ಗೌರವ

ಬೆಂಗಳೂರಲ್ಲಿ ವಿಶ್ವದ ನಂಬರ್ ವನ್ ಜಾವಲಿನ್ ಪಟು – ನೀರಜ್ ಚೋಪ್ರಾ ಕೆಒಎ ಹಾಲ್ ಆಫ್ ಫೇಮ್ ಗೌರವ

ಭಾರತದ ಹೆಮ್ಮೆಯ ಜಾವಲಿನ್ ಎಸೆತಗಾರ, ವಿಶ್ವದ ನಂಬರ್ ವನ್ ಜಾವಲಿನ್ ಪಟು ನೀರಜ್ ಚೋಪ್ರಾ ಕರ್ನಾಟಕಕ್ಕೆ ಬಂದಿದ್ದಾರೆ. ಜುಲೈ 5ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಾಗಿ ನೀರಜ್ ಚೋಪ್ರಾ ಬೆಂಗಳೂರಿಗೆ ಆಗಮಿಸಿದರು. ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ನೀರಜ್ ಚೋಪ್ರಾ ಮತ್ತೊಮ್ಮೆ ವಿಶ್ವದ ನಂಬರ್ 1 – ನಾಲ್ಕನೇ ಸ್ಥಾನದಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್

ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಬೆಂಗಳೂರಿಗೆ ಆಗಮಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದರು. ಎಲ್ಲರಿಗೂ ನಮಸ್ಕಾರ, ಕರ್ನಾಟಕ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಅವರು ಬೆಂಗಳೂರಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ನೀರಜ್‌ ಚೋಪ್ರಾರನ್ನು ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಸನ್ಮಾನಿಸಿದರು.

ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ ಅವರನ್ನು ಕರ್ನಾಟಕ ಒಲಿಂಪಿಕ್‌ ಸಂಸ್ಥೆ (ಕೆಒಎ) ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಳಿಸಿ ಗೌರವಿಸಿದೆ. ಕರ್ನಾಟಕದ ಹೊರಗಿನ ಕ್ರೀಡಾಪಟುವೊಬ್ಬರನ್ನು ಹಾಲ್‌ ಆಫ್‌ ಫೇಮ್‌ಗೆ ಸೇರಿಸಿರುವುದು ಇದೇ ಮೊದಲು. ಕರ್ನಾಟಕದ ಕ್ರೀಡಾ ಸಾಧಕರನ್ನು ಗೌರವಿಸಲೆಂದೇ ಕಂಠೀರವ ಕ್ರೀಡಾಂಗಣದ ಬಳಿ ಇರುವ ಒಲಿಂಪಿಕ್ಸ್‌ ಸಂಸ್ಥೆ ಕಚೇರಿಯಲ್ಲಿ ಹಾಲ್‌ ಆಫ್‌ ಫೇಮ್‌ ಮ್ಯೂಸಿಯಂ ಇದೆ. ಇದಕ್ಕೆ ಮೊತ್ತ ಮೊದಲ ಬಾರಿ ಕರ್ನಾಟಕದ ಹೊರಗಿನ ಕ್ರೀಡಾಪಟುವಿನ ಸಾಧನೆಗಳ ವಿವರವಿರುವ ಫೋಟೋ ಸೇರಿಸಲಾಗಿದೆ. ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಅವರು ನೀರಜ್‌ರನ್ನು ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಳಿಸಿದರು. ಈ ವೇಳೆ ಕೆಒಎ ಕಾರ್ಯದರ್ಶಿ ಅನಂತರಾಜು, ಕ್ರೀಡಾ ಇಲಾಖೆ ಆಯುಕ್ತ ಚೇತನ್‌, ಕಾರ್ಯದರ್ಶಿ ನವೀನ್‌ ರಾಜ್‌ ಸಿಂಗ್‌ ಉಪಸ್ಥಿತರಿದ್ದರು. ಈ ವೇಳೆ ನೀರಜ್‌ ಚೋಪ್ರಾ ಕ್ಲಾಸಿಕ್‌ ಕೂಟದ ವಿಶೇಷ ಜೆರ್ಸಿ ಕೂಡಾ ಬಿಡುಗಡೆ ಮಾಡಲಾಯಿತು. ಬಳಿಕ ಸಂಜೆ ನೀರಜ್‌ರನ್ನು ರಾಜ್ಯ ಒಲಿಂಪಿಕ್‌ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಜೊತೆಗೆ, ವಿಶೇಷ ಫಲಕ ಹಾಗೂ ₹5 ಲಕ್ಷ ನಗದು ಹಸ್ತಾಂತರಿಸಲಾಯಿತು.

Sulekha