ಗಿಲ್ ಗಿಲಕ್ ಗೆ ಇಂಗ್ಲೆಂಡ್ ಥಂಡಾ.. ಆಂಗ್ಲರ ಬೆಂಡೆತ್ತಿ ಕ್ಯಾಪ್ಟನ್ ಇತಿಹಾಸ! -ಒಬ್ರೋ, ಇಬ್ರೋ ಆಡಿದ್ರಾ ಗೆಲ್ತಾರಾ?

25 ವರ್ಷದ ಶುಭ್ಮನ್ ಗಿಲ್ಗೆ ಟೆಸ್ಟ್ ಕ್ಯಾಪ್ಟನ್ಸಿ ವಹಿಸಿದಾಗ ಹೇಗೆ ಪರ್ಫಾಮ್ ಮಾಡ್ತಾರೆ, ಕ್ಯಾಪ್ಟನ್ಸಿ ಜವಾಬ್ದಾರಿ ಹೇಗೆ ನಿಭಾಯಿಸ್ತಾರೆ ಅನ್ನೋ ಸಾಕಷ್ಟು ಪ್ರಶ್ನೆಗಳಿದ್ವು. ಆದ್ರೆ ನಾಯಕನಾಗಿ, ಆಟಗಾರನಾಗಿ ತಂಡವನ್ನ ಸಮರ್ಥವಾಗಿ ಮುನ್ನಡೆಸ್ತಿದ್ದಾರೆ. ಆಂಗ್ಲರ ನಾಡಿನಲ್ಲಿ ಆಂಗ್ಲರನ್ನೇ ಪೇಚಾಡುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಒಂದು ವಾರಗಳ ಕಾಲ ಕರುನಾಡಿನಲ್ಲಿ ಮಳೆಯ ನರ್ತನ – ಕಟ್ಟೆಚ್ಚರ ವಹಿಸೋಕೆ IMD ಸೂಚನೆ
ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಆರಂಭಿಸಿರೋ ಭಾರತ ಆರಂಭದಲ್ಲೇ ಆಘಾತ ಎದುರಿಸಿತ್ತು. 2 ರನ್ ಗಳಿಸಿದ್ದ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದ್ರು. ಆ ಬಳಿಕ ಕರುಣ್ ನಾಯರ್ ಮತ್ತು ಯಶಸ್ವಿ ಜೈಸ್ವಾಲ್ ಕಾಂಬಿನೇಷನ್ ಚೆನ್ನಾಗಿ ವರ್ಕೌಟ್ ಆಗ್ತಿದೆ ಅನ್ನುವಾಗ್ಲೇ ಕರುಣ್ ವಿಕೆಟ್ ಕೂಡ ಉರುಳಿತ್ತು. 31 ರನ್ಗಳಿಸಿ ಸೆಟಲ್ ಆಗಿದ್ದ ಕರುಣ್ ಕ್ಯಾಚ್ ಔಟ್ ಆದ್ರು. 95 ರನ್ ಗಳಿಸುವಷ್ಟ್ರಲ್ಲೇ ಭಾರತದ ಎರಡನೇ ವಿಕೆಟ್ ಉರುಳಿಯಾಗಿತ್ತು. ಬಟ್ ಮೂರನೇ ವಿಕೆಟ್ಗೆ ಜೊತೆಯಾದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಜವಾಬ್ದಾರಿಯುತ ಆಟವಾಡಿದ್ರು. 87 ರನ್ ಗಳಿಸಿ ಶತಕದತ್ತ ನುಗ್ತಿದ್ದ ಜೈಸ್ವಾಲ್ ಬೆನ್ ಸ್ಟೋಕ್ಸ್ಗೆ ವಿಕೆಟ್ ಒಪ್ಪಿಸಿದ್ರು. ಆ ಬಳಿಕ ಬಂದ ಪಂತ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಸೆಟಲ್ ಆಗೋಕೂ ಸಾಧ್ಯವಾಗ್ಲಿಲ್ಲ. ಒಂದ್ಕಡೆ ವಿಕೆಟ್ ಉರುಳ್ತಿದ್ರೂ ಗಿಲ್ ಮಾತ್ರ ತಾಳ್ಮೆಯಿಂದಲೇ ಆಂಗ್ಲರನ್ನ ಎದುರಿಸಿದ್ದಾರೆ.
ಗಿಲ್ ಗಿಲಕ್ ಆಟಕ್ಕೆ ಥಂಡಾ ಹೊಡೆದ ಬೌಲರ್ಸ್!
ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 5 ವಿಕೆಟ್ ಕಳ್ಕೊಂಡು 310 ರನ್ ಗಳಿಸಿದೆ. ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೂ 147 ರನ್ ಬಾರಿಸಿ ಮಿಂಚಿದ್ದ ಗಿಲ್, ಇದೀಗ ಎಡ್ಜ್ಬಾಸ್ಟನ್ ಮೈದಾನದಲ್ಲಿ ಅಜೇಯ 114 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 216 ಬಾಲ್ಗಳನ್ನ ಫೇಸ್ ಮಾಡಿದ ಗಿಲ್ 12 ಫೋರ್ಗಳೊಂದಿಗೆ 114 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಈ ಎರಡು ಶತಕಗಳೊಂದಿಗೆ ಶುಭ್ಮನ್ ಗಿಲ್ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಆಂಗ್ಲರನಾಡಿನಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿದ ಕ್ಯಾಪ್ಟನ್ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ. ಅಲ್ದೇ ಟೀಮ್ ಇಂಡಿಯಾದ ನಾಯಕನ ಬ್ಯಾಟ್ನಿಂದ ಈ ಸಾಧನೆ ಮೂಡಿಬಂದಿರುವುದು ಬರೋಬ್ಬರಿ 35 ವರ್ಷಗಳ ಬಳಿಕ. ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಝರುದ್ದೀನ್ 1990 ರಲ್ಲಿ ಇಂಗ್ಲೆಂಡ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ದಾಖಲೆ ಬರೆದಿದ್ದರು.
ಗಿಲ್ ಜೊತೆ ರವೀಂದ್ರ ಜಡೇಜಾ ಕಾನ್ಫಿಡೆಂಟ್ ಆಟ!
ಟೀಂ ಇಂಡಿಯಾ ಪರ ಎಲ್ಲಾ ಆಟಗಾರರಿಂದಲೂ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಕಳೆದ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ರಿಷಭ್ ಪಂತ್ 42 ಎಸೆತಗಳಲ್ಲಿ 25 ರನ್ ಗಳಿಸಿ ಶೋಯಬ್ ಬಶೀರ್ಗೆ ವಿಕೆಟ್ ಒಪ್ಪಿಸಿದರು. ಶಾರ್ದೂಲ್ ಠಾಕೂರ್ ಬದಲಿಗೆ ತಂಡ ಸೇರಿದ್ದ ನಿತೀಶ್ ಕುಮಾರ್ ರೆಡ್ಡಿ ಕೇವಲ 6 ಎಸೆತಗಳಲ್ಲಿ ಒಂದು ರನ್ ಗಳಿಸಿ ಜೈಸ್ವಾಲ್ ಔಟ್ ಆದ ನಂತರದ ಓವರ್ನಲ್ಲೇ ವಿಕೆಟ್ ಒಪ್ಪಿಸಿದರು. ಬಟ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ರವೀಂದ್ರ ಜಡೇಜಾ, ಕಾನ್ಪಿಡೆಂಟ್ ಆಟವಾಡ್ತಿದ್ರು. ಶುಭ್ಮನ್ ಗಿಲ್ ಜೊತೆ ಸೇರಿದ ರವೀಂದ್ರ ಜಡೇಜಾ 99 ರನ್ಗಳ ಜೊತೆಯಾಟವಾಡಿದ್ದಾರೆ. ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 310 ರನ್ಗಳಿಸಿದೆ. 114 ರನ್ಗಳೊಂದಿಗೆ ಶುಭ್ಮನ್ ಗಿಲ್, 41 ರನ್ಗಳೊಂದಿಗೆ ರವೀಂದ್ರ ಜಡೇಜಾ ಇಂದಿಗೆ ಕ್ರಿಸ್ ಕಾಯ್ದುಕೊಂಡಿದ್ದಾರೆ. ಇಬ್ಬರು ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.
ಒಟ್ನಲ್ಲಿ ಗಿಲ್ ಡಿಚ್ಚಿಗೆ ಇಂಗ್ಲೆಂಡ್ ತಂಡದ ಬೌಲರ್ಸ್ ಪರದಾಡ್ತಿದ್ದಾರೆ. ಎರಡನೇ ದಿನವೂ ಅದೇ ಕಾನ್ಫಿಡೆನ್ಸ್ ಬೇಕಾಗುತ್ತೆ. ಸೆಂಚುರಿ ಸಾಕು ಅನ್ನೋದಕ್ಕಿಂತ ಡಬಲ್ ಸೆಂಚುರಿ ಕಡೆ ಫೋಕಸ್ ಮಾಡ್ತಾರಾ ನೋಡ್ಬೇಕು.

ನೋಡಿರಿ

