ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ ಫ್ಯಾನ್ಸ್‌ಗೆ ಸ್ಪೆಷಲ್ ಗಿಫ್ಟ್ – ಆಂಜನೇಯನಾಗಿ ಅವತಾರ ತಾಳಿದ ಗಣೇಶ್

ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ ಫ್ಯಾನ್ಸ್‌ಗೆ ಸ್ಪೆಷಲ್  ಗಿಫ್ಟ್ – ಆಂಜನೇಯನಾಗಿ ಅವತಾರ ತಾಳಿದ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದ ಪ್ರಯುಕ್ತ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಪೋಸ್ಟರ್ ಬಿಡುಗಡೆ ಆಗಿದೆ. ಈ ಪೋಸ್ಟರ್​ನಲ್ಲಿ ಗಣೇಶ್ ಅವರ ಗೆಟಪ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಯಾಕೆಂದರೆ, ಗಣೇಶ್ ಆಂಜನೇಯನ ವೇಷಧರಿಸಿ ವಿಶೇಷ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಐಷಾರಾಮಿ ಕಾರು ಖರೀದಿಸಿದ ರಾಖಿ ಭಾಯ್ – ರಾಕಿಂಗ್ ಸ್ಟಾರ್ ಯಶ್ ಕಾರಿನ ಬೆಲೆ 3 ಕೋಟಿ..!

ವಿಖ್ಯಾತ್ ನಿರ್ದೇಶನದ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾ ಈ ವರ್ಷಾಂತ್ಯಕ್ಕೆ ಬಿಡುಗಡೆ ಆಗಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಜನ್ಮದಿನದ ಪ್ರಯುಕ್ತ ಸಿನಿಮಾ ತಂಡ ವಿಶೇಷ ಪೋಸ್ಟರ್​ ಬಿಡುಗಡೆ ಮಾಡಿದೆ. ಹೊಸ ಪೋಸ್ಟರ್ ಗಮನ ಸೆಳೆಯುತ್ತಿದ್ದು, ಇದರಲ್ಲಿ ಗಣೇಶ್ ಅವರು ಆಂಜನೇಯನ ಗೆಟಪ್ ಧರಿಸಿದ್ದಾರೆ. ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾದಲ್ಲಿ ಗಣೇಶ್ ಮತ್ತು ರಮೇಶ್ ಅರವಿಂದ್ ಅವರು ಒಟ್ಟಿಗೆ ನಟಿಸುತ್ತಿದ್ದಾರೆ. ಇದುವರೆಗೂ ಗಣೇಶ್ ಈ ರೀತಿಯ ಗೆಟಪ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ತುಂಬ ಕ್ರಿಯೇಟಿವ್ ಆಗಿ ಈ ಪೋಸ್ಟರ್ ಮೂಡಿಬಂದಿದೆ.

ಸೈಕಲ್ ಹಿಂಬದಿಯಲ್ಲಿ ಪೋಸ್ಟ್‌ ಮ್ಯಾನ್‌ ಬ್ಯಾಗ್‌ ಧರಿಸಿ ಭಜರಂಗಿ ಕುಳಿತಿದ್ದಾನೆ. ಕೈಯಲ್ಲೊಂದು ಕಾಗದ ಕೂಡ ಇದೆ. ಪೋಸ್ಟರ್ ನೋಡುತ್ತಿದ್ದರೆ ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಮೂಡುವಂತಿದೆ. ಈ ಮೊದಲು ‘ಪುಷ್ಪಕ ವಿಮಾನ’, ‘ಇನ್ಸ್‌ಪೆಕ್ಟರ್ ವಿಕ್ರಮ್’, ‘ಮಾನ್ಸೂನ್ ರಾಗ’ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಅವರು ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾದ ಮೂಲಕ ಮೊದಲ ಬಾರಿಗೆ ನಿರ್ದೇಶಕನಾಗಿದ್ದಾರೆ. ‘ಐರಾ ಫಿಲ್ಮ್ಸ್’ ಹಾಗೂ ‘ದಿ ರಾಯಲ ಸ್ಟುಡಿಯೋಸ್’ ಮೂಲಕ ಸತ್ಯ ರಾಯಲ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದ್ಧೂರಿ ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ನವೀನ್ ಕುಮಾರ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ, ಹರೀಶ್ ಕೊಮ್ಮೆ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಜೆ. ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕೆ. ಗುಣ ಅವರು ಕಲಾ ನಿರ್ದೇಶನ ಮಾಡಿದ್ದಾರೆ.

Sulekha