ದೆಹಲಿ ಏಮ್ಸ್ ಆಸ್ಪತ್ರೆ ಸರ್ವರ್ ಹ್ಯಾಕ್ ಮಾಡಿದ್ದು ಚೀನಾ!
ನವದೆಹಲಿ: ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಕಂಪ್ಯೂಟರ್ ಸಿಸ್ಟಮ್ ಮೇಲೆ ಇತ್ತೀಚೆಗೆ ಸೈಬರ್ ದಾಳಿ ನಡೆದಿದೆ. ಈ ದಾಳಿಯ ಮೂಲ ಚೀನಾ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ 100 ಸರ್ವರ್ಗಳಲ್ಲಿ (40 ಭೌತಿಕ ಹಾಗೂ 60 ವರ್ಚುವಲ್) 5 ಭೌತಿಕ ಸರ್ವರ್ಗಳನ್ನು ಹ್ಯಾಕ್ ಮಾಡುವಲ್ಲಿ ಸೈಬರ್ ಕಳ್ಳರು ಯಶಸ್ವಿಯಾಗಿದ್ದಾರೆ. ಆದರೆ ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡಿರುವುದರಿಂದ ದೊಡ್ಡ ಹಾನಿಯನ್ನು ತಪ್ಪಿಸಲಾಗಿದೆ. ಇದೀಗ ಲಕ್ಷಾಂತರ ರೋಗಿಗಳ ವಿವರಗಳು ಸುರಕ್ಷಿತವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಭಾರತ- ಚೀನಾ ಘರ್ಷಣೆ: ಈಡೇರದ ಚರ್ಚೆಯ ಬೇಡಿಕೆ – ಸಭಾತ್ಯಾಗ ಮಾಡಿದ ವಿಪಕ್ಷಗಳು
ನವೆಂಬರ್ 23 ರಂದು ಮೊದಲ ಬಾರಿ ಏಮ್ಸ್ ಆಸ್ಪತ್ರೆಯ ಸರ್ವರ್ 9 ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಹ್ಯಾಕರ್ಗಳ ದಾಳಿಯಿಂದ ಸರ್ವರ್ ಸ್ಥಗಿತಗೊಂಡಿದೆ. ಅಲ್ಲದೇ ಸುಮಾರು 3-4 ಕೋಟಿ ರೋಗಿಗಳ ವಿವರ ಸೋರಿಕೆಯಾಗಿರುವ ಭೀತಿ ಉಂಟಾಗಿತ್ತು. ಬಳಿಕ ಹ್ಯಾಕರ್ಗಳು ಏಮ್ಸ್ನಿಂದ ಸುಮಾರು 200 ಕೋಟಿ ರೂ. ಮೌಲ್ಯದ ಕ್ರಿಪ್ಟೋಕರೆನ್ಸಿ ನೀಡುವಂತೆಯೂ ಬೇಡಿಕೆಯಿಟ್ಟಿದ್ದರು ಎಂದು ಏಮ್ಸ್ ತಿಳಿಸಿತ್ತು.
ಬಳಿಕ ಡಿಸೆಂಬರ್ 2 ರಂದು ಆಸ್ಪತ್ರೆಯ 5 ಮುಖ್ಯ ಸರ್ವರ್ಗಳು ಸೈಬರ್ ದಾಳಿಗೆ ಒಳಗಾಗಿತ್ತು. ಇದರಿಂದ ಲಕ್ಷಾಂತರ ರೋಗಿಗಳ ವೈಯಕ್ತಿಕ ಡೇಟಾಗಳಿಗೆ ಹಾನಿಯಾಗಿತ್ತು. ಈ ಸೈಬರ್ ದಾಳಿಯನ್ನು ಚೀನಾದ ಹ್ಯಾಕರ್ಗಳು ನಡೆಸಿರುವ ಶಂಕೆಯಿದೆ ಎಂದು ಮೂಲಗಳು ತಿಳಿಸಿದ್ದವು. ಡಿಸೆಂಬರ್ 4 ರಂದು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿಯೂ ಸೈಬರ್ ದಾಳಿಯಾಗಿರುವುದಾಗಿ ವರದಿಯಾಗಿದೆ. ಆದರೆ ಏಮ್ಸ್ನಲ್ಲಿ ನಡೆದಿರುವಷ್ಟು ದಾಳಿ ತೀವ್ರವಾಗಿಲ್ಲ ಎನ್ನಲಾಗಿದೆ.