ವಿದೇಶಿ ಪಿಚ್‌ನಲ್ಲಿ ಪಂತ್ ಶತಕ ಸಿಡಿಸಿದ್ರೆ, ಭಾರತಕ್ಕೆ ಸೋಲು ಖಚಿತನಾ?
ಪಲ್ಟಿ ಹೊಡೆದ್ರೆ ಉಲ್ಟಾ ಹೊಡೆಯುತ್ತಾ?

ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ವಿದೇಶದಲ್ಲಿ ಸೆಂಚುರಿ ಸಿಡಿಸಿದರೆ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ. ಹಾಗೇ ಸೆಂಚುರಿ ಹೊಡೆದು ಪಲ್ಟಿ ಹೊಡೆದ್ರೆ ಆ ಮ್ಯಾಚ್ ಗೆಲ್ಲಲ್ವಂತೆ.. ಇಂತಹದೊಂದು ವಿತಂಡ ವಾದ ಮುನ್ನಲೆಗೆ ಬರಲು ಮುಖ್ಯ ಕಾರಣ ಪಂತ್ ಶತಕ ಬಾರಿಸಿದಾಗ ಭಾರತ ತಂಡ ಈವರೆಗೆ ಗೆಲ್ಲದಿರುವುದು. ಅಂದರೆ ರಿಷಭ್ ಪಂತ್ ವಿದೇಶದಲ್ಲಿ ಟೆಸ್ಟ್ ಸೆಂಚುರಿ ಸಿಡಿಸಿದಾಗ ಟೀಮ್ ಇಂಡಿಯಾ ಒಮ್ಮೆಯೂ ಗೆದ್ದಿಲ್ಲ. ಹಾಗೇ ಪಲ್ಟಿ ಹೊಡೆದ ಮ್ಯಾಚ್ ಕೂಡ ಸೋತಿದ್ದಾರೆ.
ಪಂತ್ ಶತಕ ಭಾರತಕ್ಕೆ ಸೋಲು
ವರ್ಷ ಎದುರಾಳಿ ತಂಡ ರನ್ ಫಲಿತಾಂಶ
2018 ಇಂಗ್ಲೆಂಡ್ 114 ಸೋಲು
2019 ಆಸ್ಟ್ರೇಲಿಯಾ 159 ಡ್ರಾ
2022 ಸೌತ್ ಆಫ್ರಿಕಾ 100 ಸೋಲು
2022 ಇಂಗ್ಲೆಂಡ್ 146 ಸೋಲು
2025 ಇಂಗ್ಲೆಂಡ್ 134 + 118 ಸೋಲು
ರಿಷಭ್ ಪಂತ್ ಬ್ಯಾಟ್ನಿಂದ ಮೊದಲ ವಿದೇಶಿ ಟೆಸ್ಟ್ ಶತಕ ಮೂಡಿಬಂದಿದ್ದು 2018 ರಲ್ಲಿ. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಪಂತ್ 114 ರನ್ ಬಾರಿಸಿದರೂ ಭಾರತ ತಂಡ ಪಂದ್ಯ ಗೆದ್ದಿರಲಿಲ್ಲ. ಇದಾದ ಬಳಿಕ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಅಜೇಯ 159 ರನ್ ಬಾರಿಸಿದ್ದರು. ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಇನ್ನು 2022 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ನ್ಯೂಲಾಂಡ್ಸ್ ಮೈದಾನದಲ್ಲಿ ರಿಷಭ್ ಪಂತ್ ಅಜೇಯ ಶತಕ ಸಿಡಿಸಿದ್ದರು. ಈ ಮ್ಯಾಚ್ನಲ್ಲೂ ಟೀಮ್ ಇಂಡಿಯಾ ಸೋಲನುಭವಿಸಿತ್ತು. ಇನ್ನು 2022 ರಲ್ಲಿ ಎಡ್ಜ್ಬಾಸ್ಟನ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಪಂತ್ 146 ರನ್ಗಳ ಇನಿಂಗ್ಸ್ ಆಡಿದ್ದರು. ಈ ವೇಳೆಯೂ ಭಾರತ ತಂಡಕ್ಕೆ ಗೆಲುವು ದಕ್ಕಿರಲಿಲ್ಲ. ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದಾರೆ. ಹೆಡಿಂಗ್ಲೆ ಮೈದಾನದಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 134 ರನ್ ಬಾರಿಸಿದ್ದ ಪಂತ್, ದ್ವಿತೀಯ ಇನಿಂಗ್ಸ್‌ನಲ್ಲಿ 118 ರನ್ ಕಲೆಹಾಕಿದ್ದರು. ಹೀಗೆ ಎರಡು ಶತಕಗಳನ್ನು ಬಾರಿಸಿದರೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಿಲ್ಲ
ಅಂದರೆ ವಿದೇಶದಲ್ಲಿ ರಿಷಭ್ ಪಂತ್ ಬಾರಿಸಿದ 6 ಟೆಸ್ಟ್ ಶತಕಗಳಲ್ಲಿ 5 ವ್ಯರ್ಥವಾಗಿದೆ. ಯಾಕೆಂದರೆ ಆ ಐದು ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ. ಇನ್ನು ಪಂತ್ ಬಾರಿಸಿದ ಒಂದು ಶತಕದ ನೆರವಿನೊಂದಿಗೆ ಭಾರತ ತಂಡವು ಪಂದ್ಯವೊಂದನ್ನು ಡ್ರಾ ಮಾಡಿಕೊಂಡಿದೆ. ಅಂದರೆ ಇಲ್ಲಿ ರಿಷಭ್ ಪಂತ್ ವಿದೇಶದಲ್ಲಿ ಟೆಸ್ಟ್ ಸೆಂಚುರಿ ಸಿಡಿಸಿದಾಗ ಟೀಮ್ ಇಂಡಿಯಾ ಒಮ್ಮೆಯೂ ಗೆಲುವು ದಾಖಲಿಸಿಲ್ಲ. ಹೀಗಾಗಿಯೇ ಪಂತ್ ಸೆಂಚುರಿ ಸಿಡಿಸಿದರೆ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ವಾದವನ್ನು ಮುಂದಿಡಲಾಗುತ್ತಿದೆ.
ಸೆಂಚುರಿ ಬಾರಿಸಿ ಪಲ್ಟಿ ಹೊಡೆಯಬೇಡಿ ಎಂದ ಫ್ಯಾನ್ಸ್
ಒಂದ್ಕಡೆ ರಿಷಬ್ ಪಂತ್ ವಿದೇಶಿ ನೆಲದಲ್ಲಿ ಶತಕ ಬಾರಿಸಿದ ಪಂದ್ಯ ಗೆಲ್ಲಲ್ಲ ಅನ್ನೋ ಮಾತಿನ ನಡುವೆ ಪಲ್ಟಿ ಹೊಡೆದ್ರೂ ಆ ಪಂದ್ಯ ಗೆಲ್ಲಲ್ಲ ಅಂತ ನೆಟ್ಟಿಗರು ಹೇಳುತ್ತಿದ್ದಾರೆ. ರಿಷಭ್ ಪಂತ್ ಶತಕ ಬಾರಿಸಿದ ಬಳಿಕ ಮೈದಾನದಲ್ಲಿ ಪಲ್ಟಿ ಹೊಡೆದು ಸಂಭ್ರಮಾಚರಿಸಿದ ವೇಳೆ ತಂಡ ಎರಡು ಬಾರಿ ಸೋಲು ಕಂಡಿದೆ. ಇದೇ ಕಾರಣಕ್ಕೆ ನೆಟ್ಟಿಗರು ಪಂದ್ಯ ಸೋಲಿಗೆ ಪಂತ್ ಕಾರಣ ಎಂದಿದ್ದಾರೆ. 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಪಂತ್ ಭರ್ಜರಿ ಶತಕ ಬಾರಿಸಿ ಪಲ್ಟಿ ಹೊಡೆದಿದ್ದರು. ಈ ವೇಳೆಯೂ ಲಕ್ನೋ ತಂಡ ಸೋಲು ಕಂಡಿತ್ತು. ಇಂಗ್ಲೆಂಡ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ವೇಳೆಯೂ ಪಂತ್ ಪಲ್ಟಿ ಹೊಡೆದಿದ್ದರು. ಅದಾಗಲೇ ಭಾರತ ಸೋಲು ಕಾಣಲಿದೆ ಎಂದು ನೆಟ್ಟಿಗರು ಭವಿಷ್ಯ ನುಡಿದಿದ್ದರು. ಅದರಂತೆ ಭಾರತ ಸೋಲು ಕೂಡ ಕಂಡಿತು. ಕೆಲ ನೆಟ್ಟಿಗರು ಪಂತ್‌ಗೆ ಸಲಹೆ ನೀಡಿದ್ದು ಇನ್ನು ಮುಂದೆ ಎಷ್ಟೇ ದೊಡ್ಡ ಮೊತ್ತ ಪೇರಿಸಿದರೂ ಯಾವುದೇ ಕಾರಣಕ್ಕೂ ಪಲ್ಟಿ ಹೊಡಿಬೇಡಿ ಎಂದಿದ್ದಾರೆ. ಒಟ್ನಲ್ಲಿ ಪಂತ್ ಏನ್ ಮಾಡಿದ್ರೂ ತಪ್ಪು ಎನ್ನುವಂತಾಗಿದೆ. ಒಂದು ವೇಳೆ ಸೆಂಚುರಿ ಹೊಡೆದಿಲ್ಲ ಅಂದಿದ್ರೆ ಯಾಕೆ ಪಂತ್‌ನ ಟೀಂಗೆ ಸೇರಿಸಿಕೊಂಡ್ರಿ ಅಂತಿದ್ರು.. ರನ್ ಗಳಿಸೋಕೆ ಆಗಲ್ಲ.. ಐಪಿಎಲ್‌ನಲ್ಲೂ ಆಡಿಲ್ಲ ಟೆಸ್ಟ್‌ನಲ್ಲೂ ಆಡಿಲ್ಲ ಅಂತಿದ್ರು. ಈಗ ಮೊದಲ ಟೆಸ್ಟ್‌ನಲ್ಲೇ ಎರಡು ಸೆಂಚುರಿ ಬಾರಿಸಿದ್ದು, ಅದೇ ಸೋಲಿಗೆ ಕಾರಣ ಅಂತ ನೆಟ್ಟಿಗರು ಹೇಳುತ್ತಿದ್ದಾರೆ.

ನೋಡಿರಿ

