ಪ್ರೇಮಸೌಧದಲ್ಲಿ ಪ್ರವಾಸಿಗರ ಜೊತೆ ಕೋತಿಗಳ ಕಿರಿಕ್- ತಾಜ್‌ಮಹಲ್ ಸುತ್ತ ಮಂಗಗಳ ಸೆರೆಗೆ ಟೆಂಡರ್

ಪ್ರೇಮಸೌಧದಲ್ಲಿ ಪ್ರವಾಸಿಗರ ಜೊತೆ ಕೋತಿಗಳ ಕಿರಿಕ್- ತಾಜ್‌ಮಹಲ್ ಸುತ್ತ ಮಂಗಗಳ ಸೆರೆಗೆ ಟೆಂಡರ್

ನವದೆಹಲಿ : ಭಾರತ ಇದೇ ಮೊದಲ ಬಾರಿಗೆ ವಿಶ್ವದ ಅತ್ಯಂತ ಬಲಿಷ್ಠ ಶೃಂಗ ಜಿ20 ಸಮೂಹದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ. ಈ ಒಂದು ವರ್ಷದಲ್ಲಿ ಜಿ20 ರಾಷ್ಟ್ರಗಳ ಸಾಕಷ್ಟು ನಿಯೋಗ ಭಾರತಕ್ಕೆ ಭೇಟಿ ನೀಡಲಿವೆ. ಕರ್ನಾಟಕ, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಜಿ20 ಸಭೆ ನಡೆಯಲಿದೆ. ಮುಂದಿನ ವರ್ಷ ನವೆಂಬರ್‌ ವರೆಗೂ ನಡೆಯಲಿದ್ದು, ಈ ಅವಧಿವರೆಗೂ ವಿದೇಶದ ಸಾಕಷ್ಟು ಅಧಿಕಾರಿಗಳು, ಜನಪ್ರತಿಧಿನಿಗಳು ಭಾರತಕ್ಕೆ ಆಗಮಿಸಲಿದ್ದಾರೆ. ಹೀಗೆ ಬಂದಾಗ ತಾಜ್‌ಮಹಲ್‌ ವೀಕ್ಷಣೆ ಮಾಡುವುದು, ಅದರ ಮುಂದೆ ಚಿತ್ರಗಳನ್ನು ತೆಗೆಸಿಕೊಳ್ಳುವುದು ವಾಡಿಕೆ. ಆದರೆ, ತಾಜ್‌ಮಹಲ್‌ ಪ್ರದೇಶದಲ್ಲಿ ವಿಪರೀತ ಮಂಗಗಳ ಕಾಟ. ಹೀಗಾಗಿ ಮಂಗಗಳನ್ನು ಸೆರೆ ಹಿಡಿಯುವ ಪ್ರಯತ್ನ ಸಾಗುತ್ತಿದೆ.

ಇದನ್ನೂ ಓದಿ :  ‘ತೆನೆ’ ಇಳಿಸುವುದು ನಿಶ್ಚಿತ, ‘ಕೈ’ ಹಿಡಿಯುವುದು ಖಚಿತ – ವೈಎಸ್‌ವಿ ದತ್ತ ಸ್ಪಷ್ಟನೆ

ವಿದೇಶಿ ನಿಯೋಗ ಬಂದಾಗ ಮಂಗಗಳಿಂದ ಮುಜುಗರ ಉಂಟಾಗುವುದನ್ನು ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರ ಭಾರತೀಯ ಪುರಾತತ್ವ ಇಲಾಖೆಯ ಮೂಲಕ ಟೆಂಡರ್‌ ನೀಡಲು ನಿರ್ಧಾರ ಮಾಡಿದೆ. ತಾಜ್‌ಮಹಲ್‌ ಆಸುಪಾಸಿನಲ್ಲಿ ಇರುವ 250 ಮಂಗಗಳು ಹಾಗೂ ನಾಯಿಗಳನ್ನು ಹಿಡಿಯಲು ಎಎಸ್‌ಐ ಟೆಂಡರ್‌ ಕರೆಯಲು ತೀರ್ಮಾನಿಸಿದೆ. ಮಂಗಗಳನ್ನು ಹಿಡಿಯಲು ವನ್ಯಜೀವಿ ಇಲಾಖೆಯಿಂದಲೂ ಅನುಮತಿ ಪಡೆಯಲಾಗಿದೆ. ಮಹಾನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ಮಂಗಗಳನ್ನು ಮತ್ತು ನಾಯಿಗಳನ್ನು ಹಿಡಿಯುವ ಕೆಲಸ ಮಾಡಲಿದೆ. ಇನ್ನು ತಾಜ್ ಮಹಲ್ ನಲ್ಲಿ ಮಂಗಗಳ ಕಾರಣಕ್ಕಾಗಿಯೇ ಪ್ರವಾಸಿಗರು ಬರಲು ಹೆದರುತ್ತಾರೆ. ಮಂಗಗಳು ಪ್ರತಿದಿನ ಪ್ರವಾಸಿಗರನ್ನು ಬೆದರಿಸುತ್ತವೆ. ಕೋತಿಗಳನ್ನು ಹಿಡಿಯುವಂತೆ ಹಲವು ಬಾರಿ ಎಎಸ್ ಐ ಹಾಗೂ ಸಿಐಎಸ್ ಎಫ್ ಆಯುಕ್ತರು ಹಾಗೂ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದರು. ಇದೀಗ ಕೊನೆಗೂ ಕೋತಿಗಳನ್ನು ಸೆರೆಹಿಡಿಯಲು ತಯಾರಿ ಜೋರಾಗಿಯೇ ಸಾಗುತ್ತಿದೆ.

suddiyaana