ಪತ್ನಿಗೆ ಭಾವನಾತ್ಮಕ ಸಂದೇಶ ಕಳಿಸಿದ ಶುಭಾಂಶು ಶುಕ್ಲಾ– ನನ್ನ ಮಗು ಹಾರುವ ಸಮಯ ಬಂದಿದೆ ಎಂದು ಹೆಮ್ಮೆ ಪಟ್ಟ ತಾಯಿ

ಪತ್ನಿಗೆ ಭಾವನಾತ್ಮಕ ಸಂದೇಶ  ಕಳಿಸಿದ ಶುಭಾಂಶು ಶುಕ್ಲಾ– ನನ್ನ ಮಗು ಹಾರುವ ಸಮಯ ಬಂದಿದೆ ಎಂದು ಹೆಮ್ಮೆ ಪಟ್ಟ ತಾಯಿ

ಭಾರತದ ಹೆಮ್ಮೆಯ ಪುತ್ರ ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಯಾನ ಆರಂಭವಾಗಿದೆ. ಗಗನಯಾನ ಮಾಡುವ ಮೊದಲು ತಮ್ಮ ಪತ್ನಿ ಕಾಮ್ನಾ ಶುಕ್ಲಾ ಅವರಿಗೆ ಶುಭಾಂಶು ಶುಕ್ಲಾ ವಿಶೇಷ ಸಂದೇಶವನ್ನು ಬರೆದಿದ್ದಾರೆ. ಜೊತೆಗೆ ಶುಭಾಂಶು ಶುಕ್ಲಾ ಹೆತ್ತವರು ಮಗನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

ಇದನ್ನೂ ಓದಿ: ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ – 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿವಿಧ ಪ್ರಯೋಗ

ಇಸ್ರೋ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು ಹೊತ್ತ ಆಕ್ಸಿಯಮ್ 4 ಮಿಷನ್ ಬುಧವಾರ ಮಧ್ಯಾಹ್ನ 12.01ಕ್ಕೆ ಸರಿಯಾಗಿ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ಪ್ರಯಾಣ ಬೆಳೆಸಿದೆ. ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಹೋಗುವ ಮೊದಲು ತಮ್ಮ ಪತ್ನಿ ಕಾಮ್ನಾ ಶುಕ್ಲಾ ಅವರಿಗೆ ವಿಶೇಷ ಸಂದೇಶವನ್ನು ಬರೆದಿದ್ದಾರೆ. ಶುಭಾಂಶು ಶುಕ್ಲಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ನಾವು 25 ನೇ ತಾರೀಖಿನ ಮುಂಜಾನೆ ಈ ಗ್ರಹವನ್ನು ಬಿಡಲು ಯೋಜಿಸಿದ್ದೇವೆ, ಆದ್ದರಿಂದ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಲ್ಲ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಮನೆಯಲ್ಲಿರುವ ಎಲ್ಲರಿಗೂ ಅವರ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ಧನ್ಯವಾದಗಳು. ಉತ್ತಮ ಒಡನಾಡಿಯಾಗಿದ್ದಕ್ಕಾಗಿ ಕಾಮ್ನಾಗೆ ವಿಶೇಷ ಧನ್ಯವಾದಗಳು. ಯಾವುದೇ ವ್ಯಕ್ತಿ ಒಬ್ಬಂಟಿಯಾಗಿ ಬಾಹ್ಯಾಕಾಶಕ್ಕೆ ಪ್ರಯಾಣಿಸುವುದಿಲ್ಲ. ನಾವು ಇದನ್ನು ಅನೇಕ ಜನರ ಹೆಗಲ ಮೇಲೆ ಕುಳಿತು ಮಾಡುತ್ತೇವೆ. ನಾನು ನಿಮ್ಮೆಲ್ಲರಿಗೂ ಕೃತಜ್ಞನಾಗಿದ್ದೇನೆ. ಧನ್ಯವಾದಗಳು’ ಎಂದು ಬರೆದಿದ್ದಾರೆ.

ಅತ್ತ ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಯಾನ ಆರಂಭವಾಗುತ್ತಿದ್ದಂತೆ ಇತ್ತ ಕುಟುಂಬದಲ್ಲಿ ಸಂತೋಷದ ವಾತಾವರಣ ಕಂಡು ಬಂದಿದೆ. ಮಗನ ಸಾಧನೆಗೆ ಹೆತ್ತವರು ಸಂತೋಷ ವ್ಯಕ್ತಪಡಿಸಿದ್ದಾರೆ. ನಮ್ಮ ಮಗನ ಬಗ್ಗೆ ನಮಗೆ ಹೆಮ್ಮೆಯಿದೆ, ಅವನ ಕಾರಣದಿಂದಾಗಿ ಇಂದು ನಮ್ಮ ಎದೆ ಹೆಮ್ಮೆಯಿಂದ ತುಂಬಿದೆ ಎಂದು ಶುಭಾಂಶು ಅವರ ತಂದೆ ಹೇಳಿದರು. ‘ನನ್ನ ಮಗುವಿಗೆ ಶುಭ ಹಾರೈಸುತ್ತೇನೆ. ಇಂದು ನನ್ನ ಮಗು ಒಂದು ಕಾರ್ಯಕ್ಕೆ ಹೋಗುತ್ತಿದೆ. ಅವನು ಮಾಡುತ್ತಿರುವ ಕಾರ್ಯ ಪೂರ್ಣಗೊಳ್ಳಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ. ನನ್ನ ಮಗನ ಕಾರ್ಯ ಖಂಡಿತವಾಗಿಯೂ ಪೂರ್ಣಗೊಳ್ಳುತ್ತದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ’ ಎಂದು ಶುಭಾಂಶು ತಂದೆ ಹೇಳಿದ್ದಾರೆ.

ಶುಭಾಂಶು ಶುಕ್ಲಾ ಅವರ ತಾಯಿ, ‘ಇಂದು ನಾನು ತುಂಬಾ ಸಂತೋಷವಾಗಿದ್ದೇನೆ. ನನ್ನ ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನಾವೆಲ್ಲರೂ ಈ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದ್ದೆವು. ನನ್ನ ಮಗು ಹಾರುವ ಸಮಯ ಬಂದಿದೆ. ಎಲ್ಲರೂ ನನ್ನ ಮಗುವಿಗೆ ಶುಭ ಹಾರೈಸುತ್ತಿದ್ದಾರೆ’ ಎಂದು ಹೇಳಿದರು. ಆದರೆ ಆಕ್ಸಿಯಮ್ -4 ಮಿಷನ್‌ ಉಡ್ಡವಣೆಗೆ ಕೆಲವೇ ಸೆಕೆಂಡ್‌ಗಳು ಬಾಕಿ ಇರುವಾಗ ಶುಭಾಂಶು ಅವರ ತಾಯಿ ತನ್ನ ಮಗನನ್ನು ನೆನೆದು ಭಾವುಕರಾದ ಪ್ರಸಂಗವೂ ನಡೆಯಿತು. ಶುಭಾಂಶು ಶುಕ್ಲಾ ಅವರ ಸಹೋದರಿ ಶುಚಿ ಮಿಶ್ರಾ ಕೂಡ ತಮ್ಮ ಸಹೋದರನ ಸಾಧನೆಗೆ ಸಂತೋಷ ವ್ಯಕ್ತಪಡಿಸಿದರು. ನನಗೆ ತುಂಬಾ ಸಂತೋಷವಾಗಿದೆ. ಅವರು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಅವರು ಯಶಸ್ವಿಯಾಗಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ. ಅವರು ಖಂಡಿತವಾಗಿಯೂ ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗುತ್ತಾರೆ ಎಂಬ ಸಂಪೂರ್ಣ ನಂಬಿಕೆ ನಮಗಿದೆ. ಅವರು ಇಲ್ಲಿಗೆ ತಲುಪಲು ತುಂಬಾ ಶ್ರಮಿಸಿದ್ದಾರೆ ಎಂದು ಅವರು ಹೇಳಿದರು.

Sulekha