ಭಾರತ- ಚೀನಾ ಘರ್ಷಣೆ: ಈಡೇರದ ಚರ್ಚೆಯ ಬೇಡಿಕೆ – ಸಭಾತ್ಯಾಗ ಮಾಡಿದ ವಿಪಕ್ಷಗಳು

ಭಾರತ- ಚೀನಾ ಘರ್ಷಣೆ: ಈಡೇರದ ಚರ್ಚೆಯ ಬೇಡಿಕೆ – ಸಭಾತ್ಯಾಗ ಮಾಡಿದ ವಿಪಕ್ಷಗಳು

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ನಡೆದ ಘರ್ಷಣೆಯ ಬಗ್ಗೆ ಚರ್ಚೆ ನಡೆಸಲು ವಿಪಕ್ಷಗಳು ಸಂಸತ್ ಕಲಾಪದಲ್ಲಿ ಆಗ್ರಹಿಸಿದ್ದವು. ಈ ವಿಷಯವಾಗಿ ರಾಜ್ಯಸಭೆ ಕಲಾಪದಲ್ಲಿ ಕೋಲಾಹಲ ಉಂಟಾಗಿ ಚರ್ಚೆಯ ಬೇಡಿಕೆ ಈಡೇರದ ಹಿನ್ನೆಲೆ ವಿಪಕ್ಷಗಳು ಸಭಾತ್ಯಾಗ ಮಾಡಿವೆ.

ಇದನ್ನೂ ಓದಿ: ಅಪ್ಪನ ಕ್ಯಾಬಿನೆಟ್ ಸೇರಿದ ತಮಿಳು ನಟ ಉದಯನಿಧಿ

ರಾಜ್ಯಸಭೆಯ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷಗಳು ಭಾರತದ ನೆಲದಲ್ಲಿ ಚೀನಾ ಆಕ್ರಮಣಶೀಲತೆ ಮತ್ತು ಅತಿಕ್ರಮಣದ ವಿಷಯವಾಗಿ ಸಂಸತ್ ನಲ್ಲಿ ಚರ್ಚೆ ನಡೆಸಲು ಒತ್ತಾಯಿಸಿದ್ದವು. ಆದರೆ ಉಪಸಭಾಪತಿ ಹರಿವಂಶ್ ಅವರು ಚರ್ಚೆಗೆ ಸಂಬಂಧಿಸಿದಂತೆ ತಮಗೆ ಯಾವುದೇ ನೊಟೀಸ್ ಬಂದಿಲ್ಲ. ಆದ್ದರಿಂದ ಚರ್ಚೆಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ, ಎನ್ ಸಿಪಿ, ಆರ್ ಜೆಡಿ, ಎಸ್ ಪಿ, ಜೆಎಂಎಂ, ಶಿವಸೇನೆ ಸೇರಿದಂತೆ 17 ವಿಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದರು.

“ತವಾಂಗ್ ಸೆಕ್ಟರ್ ನಲ್ಲಿ ನಡೆದ ಭಾರತ-ಚೀನಾ ಸಿಬ್ಬಂದಿಗಳ ಘರ್ಷಣೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಹೇಳಿಕೆಯಲ್ಲಿ ಗಡಿಗೆ ಸಂಬಂಧಿಸಿದ ವಾಸ್ತವ ಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ, ಘರ್ಷಣೆಯ ವಿಷಯದ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆ ನಡೆಯಬೇಕಿದೆ. ಚೀನಾ ಖಾಲಿ ಜಾಗದಲ್ಲಿ ಸೇತುವೆಗಳನ್ನು ನಿರ್ಮಿಸಿದೆ ಎಂಬ ಮಾಹಿತಿ ಇದೆ. ಆರಂಭದಿಂದಲೂ ಪೂರ್ಣ ಮಾಹಿತಿ ಪಡೆಯುವುದಕ್ಕೆ ನಾವು ಶ್ರಮಿಸುತ್ತಿದ್ದೇವೆ. ದೇಶಕ್ಕೆ ಗಡಿಯಲ್ಲಿನ ಸ್ಥಿತಿ ಬಗ್ಗೆ ಮಾಹಿತಿ ನೀಡಬೇಕು” ಎಂದು ” ಎಂದು ವಿಪಕ್ಷ ನಾಯಕ ಖರ್ಗೆ ಆಗ್ರಹಿಸಿದ್ದಾರೆ.

ಬಳಿಕ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 12 ಗಂಟೆಗೆ ಈ ಬಗ್ಗೆ ಹೇಳಿಕೆ ನೀಡಲಿದ್ದಾರೆ ಎಂದರು. ಆದರೆ, ಕೂಡಲೇ ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳ ಸಂಸದರು ಒತ್ತಾಯಿಸಿದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು. ಬಳಿಕ 12 ಗಂಟೆಗೆ ಸದನವನ್ನು ಮುಂದೂಡಲಾಯಿತು.

suddiyaana