ಟೀಂ ಇಂಡಿಯಾ ಆಪತ್ಬಾಂಧವ KL – ರಾಹುಲ್ ತಾಳ್ಮೆಗೆ ಆಂಗ್ಲರು ಥಂಡಾ 
ಕನ್ನಡಿಗನ ಮೇಲೆ RO-KO ಜವಾಬ್ದಾರಿ!

ಟೀಂ ಇಂಡಿಯಾ ಆಪತ್ಬಾಂಧವ KL – ರಾಹುಲ್ ತಾಳ್ಮೆಗೆ ಆಂಗ್ಲರು ಥಂಡಾ ಕನ್ನಡಿಗನ ಮೇಲೆ RO-KO ಜವಾಬ್ದಾರಿ!

ಬಹುಶಃ ಟೀಂ ಇಂಡಿಯಾದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅನುಭವಿಸಿದಷ್ಟು ಟೀಕೆ ಮತ್ಯಾವ ಪ್ಲೇಯರ್ ಕೂಡ ಅನುಭವಿಸಿಲ್ಲ. ರನ್ಸ್ ಬಂದ್ರೂ ಲೇವಡಿ.. ಬರದೇ ಇದ್ರೂ ವ್ಯಂಗ್ಯ. ರಾಹುಲ್ ಜಾಗದಲ್ಲಿ ಮತ್ಯಾವ ಆಟಗಾರ ಇದ್ರೂ ಅಗ್ರೆಸ್ಸಿವ್ ಆಗಿ ರಿಯಾಕ್ಟ್ ಮಾಡಿಬಿಡ್ತಿದ್ರೋ ಏನೋ. ಬಟ್ ರಾಹುಲ್ ಯಾವತ್ತೂ ಹಂಗ್ ಮಾಡಲಿಲ್ಲ. ಯಾರ್ ಏನೇ ಅಂದ್ರೂ ಅದೆಷ್ಟೇ ಟೀಸ್ ಮಾಡಿದ್ರೂ ಬ್ಯಾಟ್ ಮೂಲಕವೇ ಉತ್ತರ ಕೊಡ್ತೇನೆ ಅನ್ನೋ ಮನೋಭಾವದಲ್ಲೇ ಅಡಿದವ್ರು ರಾಹುಲ್. ಇದೀಗ ಇಂಗ್ಲೆಂಡ್ ನೆಲದಲ್ಲೂ ಅದನ್ನೇ ಪ್ರೂವ್ ಮಾಡಿದ್ದಾರೆ. ಕವರ್ ಡ್ರೈವ್, ಸ್ವೀಪ್ ಶಾಟ್ ಅಂತಾ ತಮ್ಮಲ್ಲಿರೋ ಟ್ಯಾಲೆಂಟ್​ನ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ ಪಂತ್ ಮತ್ತು ಕೆ.ಎಲ್. ರಾಹುಲ್ ಶತಕ – ಇಂಗ್ಲೆಂಡ್‌ಗೆ 371 ರನ್‌ಗಳ ಬೃಹತ್ ಗುರಿ

ಲೀಡ್ಸ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕದಂಚಿನಲ್ಲಿ ಎಡವಿದ್ದ ಕನ್ನಡಿಗ ಕೆಎಲ್ ರಾಹುಲ್ 42 ರನ್ ಗಳಿಸಿ ಔಟಾಗಿದ್ರು. ಆದ್ರೆ ಎರಡನೇ ಇನ್ನಿಂಗ್ಸ್‌ನಲ್ಲಿ ಆ ಮಿಸ್ಟೇಕ್ ಮಾಡ್ಲಿಲ್ಲ. ಪ್ರಮುಖ 3 ವಿಕೆಟ್​ಗಳನ್ನ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಪತ್ಬಾಂಧವನಾಗಿ ನಿಂತ್ರು. ಲೀಡ್ಸ್‌ನ ಕಠಿಣ ಪಿಚ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿದ್ರು. ಆರಂಭದಿಂದಲೂ ತಾಳ್ಮೆಯುತವಾಗಿ ಬ್ಯಾಟ್ ಬೀಸಿದ ರಾಹುಲ್ 202 ಎಸೆತಗಳಲ್ಲಿ ಶತಕ ಪೂರೈಸಿದ ರಾಹುಲ್ ವಿಶೇಷ ದಾಖಲೆ ಬರೆದರು. ಅದು ಕೂಡ ಲೆಜೆಂಡ್‌ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು ಮುರಿಯುವ ಮೂಲಕ. ಟೆಸ್ಟ್‌ ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದು 2 ಶತಕ ಬಾರಿಸಿದ ಏಷ್ಯನ್ ಬ್ಯಾಟರ್ ಎಂಬ ದಾಖಲೆಯೊಂದು ರಾಹುಲ್ ದ್ರಾವಿಡ್ ಹೆಸರಿನಲ್ಲಿತ್ತು. ಈ ದಾಖಲೆಯನ್ನು ಇದೀಗ ಕೆಎಲ್​ಆರ್​ ಮುರಿದಿದ್ದಾರೆ. ಹಾಗೇ ಆಂಗ್ಲರ ನಾಡಿನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಈವರೆಗೆ 3 ಸೆಂಚುರಿ ಸಿಡಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ 247 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 18 ಫೋರ್​ಗಳೊಂದಿಗೆ 137 ರನ್ ಬಾರಿಸಿದರು. ಈ ಆಕರ್ಷಕದ ಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್​ನಲ್ಲಿ 364 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಆತಿಥೇಯ ಇಂಗ್ಲೆಂಡ್ ತಂಡಕ್ಕೆ 371 ರನ್​ಗಳ ಗುರಿ ನೀಡಿದೆ.

ರಾಹುಲ್ ಇಂಗ್ಲೆಂಡ್‌ನಲ್ಲಿ ಆರಂಭಿಕರಾಗಿ 9 ನೇ ಬಾರಿಗೆ ಐವತ್ತಕ್ಕೂ ಹೆಚ್ಚು ರನ್ ಕಲೆಹಾಕಿದ್ದು, ಈ ಮೂಲಕ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು ಹಿಂದಿಕ್ಕಿದ್ದಾರೆ. ರಾಹುಲ್ ಕೇವಲ 42 ಇನ್ನಿಂಗ್ಸ್‌ಗಳಲ್ಲಿ ಇಂಗ್ಲೆಂಡ್‌ನಲ್ಲಿ 9 ನೇ ಬಾರಿಗೆ ಐವತ್ತಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ವೀರೇಂದ್ರ ಸೆಹ್ವಾಗ್ 49 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಬಾರಿ ಐವತ್ತಕ್ಕೂ ಹೆಚ್ಚು ರನ್ ಗಳಿಸಿದ ಭಾರತೀಯ ಆರಂಭಿಕ ಆಟಗಾರರ ಪಟ್ಟಿಯಲ್ಲಿ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಅವರು 57 ಇನ್ನಿಂಗ್ಸ್‌ಗಳಲ್ಲಿ 19 ಬಾರಿ ಈ ಸಾಧನೆ ಮಾಡಿದ್ದಾರೆ. ಅವರ ನಂತರ, ಮುರಳಿ ವಿಜಯ್ ಮತ್ತು ಕೆಎಲ್ ರಾಹುಲ್ ತಲಾ 42 ಇನ್ನಿಂಗ್ಸ್‌ಗಳಲ್ಲಿ 9 ಬಾರಿ ಐವತ್ತಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಕೆಎಲ್ ರಾಹುಲ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 75 ಬಾರಿ ಐವತ್ತಕ್ಕೂ ಹೆಚ್ಚು ರನ್ ಕಲೆ ಹಾಕಿದ್ದಾರೆ. ಟೆಸ್ಟ್‌ನಲ್ಲಿ 26 ಬಾರಿ ಐವತ್ತಕ್ಕೂ ಹೆಚ್ಚು ರನ್, ಏಕದಿನದಲ್ಲಿ 25 ಮತ್ತು ಟಿ20ಯಲ್ಲಿ 24 ಬಾರಿ ಈ ಸಾಧನೆ ಮಾಡಿದ್ದಾರೆ.

ಪ್ರಸ್ತುತ ಭಾರತ ತಂಡದಲ್ಲಿರುವ ಅನುಭವಿ ಬ್ಯಾಟರ್ ಕೆಎಲ್ ರಾಹುಲ್. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯ ನಂತರ, ಕೆಎಲ್ ರಾಹುಲ್ ಮೇಲೆ ಈಗ ದೊಡ್ಡ ಜವಾಬ್ದಾರಿ ಇದೆ. ಪ್ರಸ್ತುರ ರಾಹುಲ್ ಒಳ್ಳೆ ಫಾರ್ಮ್​ನಲ್ಲಿದ್ದು ಇಂಗ್ಲೆಂಡ್‌ನಲ್ಲಿ ಯಶಸ್ವಿಯಾಗಿ ಬ್ಯಾಟಿಂಗ್ ಜವಾಬ್ದಾರಿ ನಿರ್ವಹಿಸ್ತಿದ್ದಾರೆ. ಲೀಡ್ಸ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಾಲ ಕಳೆದಿದ್ದು, ತಂಡದ ಇನ್ನಿಂಗ್ಸ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.  ಕೆಎಲ್ ರಾಹುಲ್ ಮೇಲೆ ಟೀಂ ಇಂಡಿಯಾದ ಮಾಜಿ ಆಟಗಾರರು ಕೂಡ ಸಾಕಷ್ಟು ಹೋಪ್ಸ್ ಇಟ್ಕೊಂಡಿದ್ದಾರೆ.  ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಅಂತೂ ರಾಹುಲ್ ಬಗ್ಗೆ ವಿಶೇಷ ಭವಿಷ್ಯ ನುಡಿದಿದ್ದಾರೆ. ಕೆ.ಎಲ್. ರಾಹುಲ್ ಅವರಿಗೆ ತಾನೆಷ್ಟು ಉತ್ತಮ ಬ್ಯಾಟರ್ ಅನ್ನೋದು ಅವರಿಗೇ ತಿಳಿದಿಲ್ಲ ಎಂದಿದ್ದಾರೆ. ರಾಹುಲ್ ಅವರಲ್ಲಿ ಬಹಳಷ್ಟು ಪ್ರತಿಭೆ ಇದೆ. ಆಫ್ ಸೈಡ್, ಲೆಗ್ ಸೈಡ್, ಫ್ಲಿಕ್ ಎಲ್ಲ ರೀತಿಯ ಹೊಡೆತಗಳನ್ನು ಅವರು ಬಾರಿಸುತ್ತಾರೆ. ಆದರೆ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಲ್ಲ. ಬೆಂಗಳೂರಿನ ಆಟಗಾರರು ತಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇರಬಹುದು. ಆದ್ರೆ ರಾಹುಲ್​ ಕಂಪ್ಲೀಟ್ ಟೀಂ ಪ್ಲೇಯರ್ ಎಂದು ಬಣ್ಣಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಗವಾಸ್ಕರ್ ಈ ಸರಣಿಯಲ್ಲಿ ರಾಹುಲ್ 500ರಿಂದ 700 ರನ್ ಕಲೆ ಹಾಕುತ್ತಾರೆ ಎಂದು ಪ್ರೆಡಿಕ್ಟ್ ಮಾಡಿದ್ದಾರೆ. ಹಾಗೇ ಚೇತೇಶ್ವರ ಪೂಜಾರ ಕೂಡ ರಾಹುಲ್​ರನ್ನ ಗುಣಗಾನ ಮಾಡಿದ್ದಾರೆ. ಭಾರತ ತಂಡದಲ್ಲಿ ಕೆಎಲ್‌ ರಾಹುಲ್ ಅತ್ಯಂತ ಹೆಚ್ಚು ತಂತ್ರಗಾರಿಕೆಯ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಯಾವುದೇ ಸನ್ನಿವೇಶದಲ್ಲಿ ಆಡುವ ಪರಿಪೂರ್ಣ ಟೆಸ್ಟ್‌ ಬ್ಯಾಟ್ಸ್‌ಮನ್‌ ಎಂದು ಹೊಗಳಿದ್ದಾರೆ.

ರಾಹುಲ್ ಅದೆಂಥಾ ಡೆಡಿಕೇಟೆಡ್ ಪ್ಲೇಯರ್ ಅಂದ್ರೆ ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ತಂಡ ಅನೌನ್ಸ್ ಆದಾಗ ರಾಹುಲ್ ಹೆಸರು ಟೀಮ್​ನಲ್ಲಿ ಇರಲಿಲ್ಲ. ಬಟ್ ರಾಹುಲ್ ಅವ್ರೇ ಬಿಸಿಸಿಐ ಮ್ಯಾನೇಜ್​ಮೆಂಟ್ ಬಳಿ ಎರಡನೇ ಪಂದ್ಯದಲ್ಲಿ ಆಡೋದಾಗಿ ಮನವಿ ಮಾಡಿ ಕಣಕ್ಕಿಳಿದಿದ್ರು. ಸಿಕ್ಕ ಅವಕಾಶವನ್ನ ಸದುಪಯೋಗ ಪಡಿಸಿಕೊಂಡ ರಾಹುಲ್ ಈ ಪಂದ್ಯದಲ್ಲೂ ಆರಂಭಿಕನಾಗಿ ಕಣಕ್ಕಿಳಿದು ಅದ್ಭುತ ಶತಕ ಗಳಿಸಿದರು. 168 ಎಸೆತಗಳಲ್ಲಿ 116 ರನ್ ಗಳಿಸುವ ಮೂಲಕ ಅದ್ಭುತ ಇನ್ನಿಂಗ್ಸ್ ಆಡಿದರು. ಇದಾದ ನಂತರ, ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿಯೂ ರಾಹುಲ್ 64 ಎಸೆತಗಳಲ್ಲಿ 51 ರನ್ ಗಳಿಸಿದರು. ಈ ಪಂದ್ಯದಲ್ಲಿ ರಾಹುಲ್ ಕಣಕ್ಕಿಳಿದಿದ್ದು ಇಂಗ್ಲೆಂಡ್ ಪಿಚ್​ಗೆ ಹೊಂದಿಕೊಳ್ಳೋಕೆ ಒಂದೊಳ್ಳೆ ಅವಕಾಶ ನೀಡಿದಂತಾಗಿತ್ತು.

Shantha Kumari