ಟೇಕ್ಆಫ್ ಆಗುತ್ತಿದ್ದಂತೆ ಟರ್ಮಿನಲ್‌ಗೆ ವಾಪಸ್ – ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರು ಜಸ್ಟ್ ಮಿಸ್

ಟೇಕ್ಆಫ್  ಆಗುತ್ತಿದ್ದಂತೆ ಟರ್ಮಿನಲ್‌ಗೆ ವಾಪಸ್ – ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರು ಜಸ್ಟ್ ಮಿಸ್

ಇಂದೋರ್‌ನಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ಟೇಕ್‌ಆಫ್‌ಗೆ ಸಿದ್ಧವಾಗುತ್ತಿದ್ದಾಗ ಇದ್ದಕ್ಕಿದ್ದಂತೆ ರನ್‌ವೇಯಿಂದ ಟರ್ಮಿನಲ್‌ಗೆ ಹಿಂತಿರುಗಿದೆ. ಈ ಬೆನ್ನಲ್ಲೇ ಪ್ರಯಾಣಿಕರಲ್ಲಿ ಗದ್ದಲ ಉಂಟಾಗಿದ್ದು, ವಿಮಾನಯಾನ ಸಂಸ್ಥೆ ದೋಷಗಳ ಬಗ್ಗೆ ಮಾಹಿತಿ ನೀಡಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಯಾಣಿಕರಿಗೆ ತಿಳಿಸಿದೆ. ವಿಮಾನ ಟೇಕ್​​ ಆಫ್​ಗೂ ಮುನ್ನ ವಾಪಾಸ್​ ಆಗಿದ್ದಕ್ಕೆ ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಉಂಟಾದರೂ, ಇಂಡಿಗೋ ವಿಮಾನಯಾನ ಸಂಸ್ಥೆ ಮತ್ತು ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ತ್ವರಿತವಾಗಿ ಕ್ರಮ ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ.

ಇಂಡಿಗೋ ವಿಮಾನ 6E 6332 ಬೆಳಗ್ಗೆ ಇಂದೋರ್‌ನಿಂದ ಭುವನೇಶ್ವರಕ್ಕೆ ಟೇಕ್‌ಆಫ್ ಆಗಬೇಕಿತ್ತು ಮತ್ತು 10:55ಕ್ಕೆ ಭುವನೇಶ್ವರದ ಬಿಜು ಪಟ್ನಾಯಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಬೇಕಿತ್ತು. ಆದರೆ, ಟೇಕ್‌ಆಫ್‌ಗೆ ಸಿದ್ಧತೆ ನಡೆಸುತ್ತಿದ್ದಾಗ ಪೈಲಟ್‌ಗೆ ವಿಮಾನದಲ್ಲಿ ತಾಂತ್ರಿಕ ದೋಷವಿರುವುದು ಗೊತ್ತಾಯಿತು. ತಕ್ಷಣವೇ ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ರನ್‌ವೇಯಿಂದ ಟರ್ಮಿನಲ್‌ಗೆ ಹಿಂತಿರುಗಿಸಲಾಯಿತು. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕೆಲವು ಪೋಸ್ಟ್‌ಗಳು, ನೆಲದ ಸಿಬ್ಬಂದಿ ಮತ್ತು ಪೈಲಟ್‌ನೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿವೆ.

ಇಂದೋರ್ ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ವಿಮಾನದಲ್ಲಿ ಸಣ್ಣ ತಾಂತ್ರಿಕ ದೋಷ ಕಂಡುಬಂದಿತು ಎಂದು ದೃಢಪಡಿಸಿದೆ. ಈ ದೋಷವನ್ನು ಸರಿಪಡಿಸಲು ತಾಂತ್ರಿಕ ತಂಡವು ತಕ್ಷಣವೇ ಕಾರ್ಯಪ್ರವೃತ್ತವಾಯಿತು. ದೋಷವನ್ನು ಸರಿಪಡಿಸಿದ ನಂತರ, ವಿಮಾನವನ್ನು ಬೆಳಗ್ಗೆ 8:49ಕ್ಕೆ ಭುವನೇಶ್ವರಕ್ಕೆ ಕಳುಹಿಸಲಾಯಿತು ಎಂದು ವರದಿಯಾಗಿದೆ

 

Kishor KV