ಮೊದಲ ಪಂದ್ಯದಲ್ಲೇ ಭಾರತದ 3 ಶತಕ – ಭರ್ಜರಿ ಸೆಂಜುರಿ ಸಿಡಿಸಿ ಪಲ್ಟಿ ಹೊಡೆದ ರಿಷಭ್ ಪಂತ್

ಮೊದಲ ಪಂದ್ಯದಲ್ಲೇ ಭಾರತದ 3 ಶತಕ – ಭರ್ಜರಿ ಸೆಂಜುರಿ ಸಿಡಿಸಿ ಪಲ್ಟಿ ಹೊಡೆದ ರಿಷಭ್ ಪಂತ್

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಲೀಡ್ಸ್‌ನಲ್ಲಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿತ್ತಿರುವ ಟೀಂ ಇಂಡಿಯಾ, ಆಂಗ್ಲರನಾಡಲ್ಲಿ ಅಬ್ಬರಿಸುತ್ತಿದೆ.  ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 359 ರನ್ ಬಾರಿಸಿದ್ದ ಭಾರತ, ಎರಡನೇ ದಿನದಾಟವನ್ನು ಸಹ ಉತ್ತಮವಾಗಿ ಆರಂಭಿಸ್ತು. ಮೊದಲ ದಿನದಾಟದಲ್ಲಿ ಅಜೇಯರಾಗಿ ಉಳಿದಿದ್ದ ನಾಯಕ ಶುಭ್​ಮನ್ ಗಿಲ್  ಹಾಗೂ ರಿಷಭ್ ಪಂತ್  ಎರಡನೇ ದಿನವೂ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ಅದರಲ್ಲೂ ಉಪನಾಯಕ ರಿಷಭ್ ಪಂತ್ ಎಂದಿನಂತೆ ತಮ್ಮ ಹೊಡಿಬಡಿ ಆಟದ ಮೂಲಕ ಆಂಗ್ಲರ ಹೆಡೆಮುರಿ ಕಟ್ಟಿದ್ದು, ಎರಡನೇ ದಿನದಾಟದ ಮೊದಲ ಸೆಷನ್​ನಲ್ಲೇ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ರಿಷಭ್ ಪಂತ್ ದಾಖಲೆಯ ಶತಕ

ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 146 ಎಸೆತಗಳನ್ನು ತೆಗೆದುಕೊಂಡ ಪಂತ್ 10 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ ತಮ್ಮ ಟೆಸ್ಟ್ ವೃತ್ತಿಜೀವನದ ಏಳನೇ ಶತಕವನ್ನು ದಾಖಲಿಸಿದ್ದಲ್ಲದೆ, ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಶತಕ ಸಿಡಿಸಿದ ದಾಖಲೆಯನ್ನು ನಿರ್ಮಿಸಿದರು. ಅಲ್ಲದೆ 2025 ರಲ್ಲಿ ರಿಷಭ್ ಬ್ಯಾಟ್​ನಿಂದ ಟೆಸ್ಟ್ ಕ್ರಿಕೆಟ್​ನಲ್ಲಿ ದಾಖಲಾದ ಮೊದಲ ಶತಕ ಇದಾಗಿದೆ. ಶೋಯೆಬ್ ಬಶೀರ್ ಎಸೆತದಲ್ಲಿ ಪಂತ್ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದರು.

ಧೋನಿಯನ್ನು ಹಿಂದಿಕ್ಕಿದ ಪಂತ್

ರಿಷಭ್ ಪಂತ್ 7 ಶತಕಗಳನ್ನು ಪೂರೈಸುವುದರೊಂದಿಗೆ ಭಾರತ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​​ಗಳ ಪಟ್ಟಿಯಲ್ಲಿ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ಧೋನಿ ಟೆಸ್ಟ್‌ನಲ್ಲಿ 6 ಶತಕಗಳನ್ನು ಬಾರಿಸಿದ್ದಾರೆ. ಅವರನ್ನು ಹೊರತುಪಡಿಸಿ, ಬೇರೆ ಯಾವುದೇ ಭಾರತೀಯ ವಿಕೆಟ್‌ಕೀಪರ್ ಟೆಸ್ಟ್‌ನಲ್ಲಿ 3 ಕ್ಕಿಂತ ಹೆಚ್ಚು  ಶತಕಗಳನ್ನು ಬಾರಿಸಲು ಸಾಧ್ಯವಾಗಿಲ್ಲ.

Kishor KV