ನೀವು ಜಾಸ್ತಿ ಹೆಡ್‌ಫೋನ್‌ ಬಳಕೆ ಮಾಡ್ತೀರಾ? ಹಾಗಾದ್ರೆ ನಿಮ್ಮ ಕಿವಿ ಜಾಗ್ರತೆ
430 ದಶಲಕ್ಷ ಮಂದಿಗೆ ಕಿವುಡುತನ – ಬಹಿರಂಗವಾಯ್ತು ಆತಂಕಕಾರಿ ಮಾಹಿತಿ

ನೀವು ಜಾಸ್ತಿ ಹೆಡ್‌ಫೋನ್‌ ಬಳಕೆ ಮಾಡ್ತೀರಾ? ಹಾಗಾದ್ರೆ ನಿಮ್ಮ ಕಿವಿ ಜಾಗ್ರತೆ430 ದಶಲಕ್ಷ ಮಂದಿಗೆ ಕಿವುಡುತನ – ಬಹಿರಂಗವಾಯ್ತು ಆತಂಕಕಾರಿ ಮಾಹಿತಿ

ದಿನವೆಲ್ಲಾ ಹೆಡ್‌ಫೋನ್‌ ಅಥವಾ ಇಯರ್‌ಬಡ್‌ಗಳನ್ನು ಹಾಕಿಕೊಂಡಿರುವುದು ಇಂದಿನ ಯುವಕರ ಜಾಯಮಾನ. ಅಲ್ಲದೇ ಹೆಡ್‌ಫೋನ್‌ ಹಾಕಿಕೊಂಡು ಸಂಗೀತ ಕೇಳುವುದು ಹವ್ಯಾಸವಾಗಿ ಬಿಟ್ಟಿದೆ. ಈ ವರ್ತನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಂತಾರಾಷ್ಟ್ರೀಯ ತಜ್ಞರ ಗುಂಪು, ಇದರಿಂದಲೇ 1 ಶತಕೋಟಿ ಜನರು ಕಿವಿ ಡ್ಯಾಮೇಜ್‌ ಮಾಡಿಕೊಳ್ಳಲಿದ್ದಾರೆ ಎಂಬ ಅತಂಕಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆ ವರದಿಯಲ್ಲಿ ಸ್ಪೋಟಕ ಮಾಹಿಯೊಂದನ್ನು ಹೊರಹಾಕಿದ್ದಾರೆ. ಜಗತ್ತಿನ 430 ದಶಲಕ್ಷ ಮಂದಿಗೆ ಕಿವಿ ಕೇಳಿಸುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣವೇ ಅತಿಯಾಗಿ  ಹೆಡ್‌ಫೋನ್‌ ಅಥವಾ ಇಯರ್‌ಬಡ್ಸ್​ನ್ನು ಬಳಸುವುದು ಎಂದು ತಿಳಿಸಿದೆ.

ಇದನ್ನೂ ಓದಿ: ಕೃತಕ ಬೆಳಕಿನಿಂದ ಜಗತ್ತು ಸುಂದರ – ಮಧುಮೇಹದ ಅಪಾಯವಿದೆ ಎಚ್ಚರ..!

ಜನರು ಅತಿಯಾಗಿ ಹೆಡ್‌ಫೋನ್‌ ಅಥವಾ ಇಯರ್‌ಫೋನ್‌ ಹಾಕಿ ಹಾಡು ಕೇಳುತ್ತಿದ್ದಾರೆ. ಅಧಿಕ ವಾಲ್ಯೂಮ್ ಇಟ್ಟು ಸಂಗೀತ ಕೇಳುವುದರಿಂದ ಕಿವಿಯ ತಮಟೆಗೆ ಹಾನಿಯಾಗುತ್ತಿದೆ. ಅಲ್ಲದೇ ಹೆಚ್ಚಿನ ಅವಧಿಯವರೆಗೆ ಜಾಸ್ತಿ ವಾಲ್ಯೂಮ್ ಇಟ್ಟು​ ಇಯರ್​ಫೊನ್​ ಬಳಸಿದರೆ ಇಯರ್​ ಲೋಬ್​ಗಳು ಹೆಚ್ಚಿನ ಕಂಪನಗಳನ್ನು ಅನುಭವಿಸುತ್ತದೆ. ಆರಂಭದಲ್ಲಿ ಕೇವಲ ನೋವು ಉಂಟು ಮಾಡಿದರೂ, ಬಳಿಕ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೇ, ಶ್ರವಣದೋಷ, ಮೂರ್ಛೆ ರೋಗ ಸೇರಿದಂತೆ ಹಲವಾರು ಸಮಸ್ಯೆಗಳನ್ನು ತಂದೊಡ್ಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.  ಅತಿಯಾಗಿ ಇಯರ್​ಫೋನ್​ ಬಳಸಿದರೆ ಯಾವ ಯಾವ ಸಮಸ್ಯೆಗಳು ನಮ್ಮನ್ನು ಕಾಡಬಹುದು ಎನ್ನುವ ವಿವರ ಇಲ್ಲಿದೆ…

ಕಿವಿಯ ಸೋಂಕು ಸಮಸ್ಯೆ ಕಾಡುತ್ತದೆ

ಇಯರ್​ ಫೋನ್​ಗಳನ್ನು ನೇರವಾಗಿ ನಮ್ಮ ಕಿವಿಗೆ ಹಾಕುವುದು, ಹಾಗೂ ಅತಿ ಹೆಚ್ಚು ಸಮಯ ಬಳಸುವುದರಿಂದ ನಮ್ಮ ಕಿವಿಗಳಿಗೆ ಗಾಳಿಯ ಹರಿವನ್ನು ತಡೆಯುತ್ತವೆ. ಇದರಿಂದ ಕಿವಿಯ ಸೋಂಕು ಸಮಸ್ಯೆ ಕಾಡಬಹುದು. ಅಲ್ಲದೆ ನಾವು ಬಳಸಿದ ಇಯರ್​ ಫೋನ್​​ ಅನ್ನು ಇತರರು ಬಳಸಿದರೆ ಅವರಿಗೂ ನಮ್ಮಲ್ಲಿರುವ ಸೋಂಕು ಹರಡಬಹುದು.

ಇಯರ್ ವ್ಯಾಕ್ಸ್ ತಡೆಗಟ್ಟುವಿಕೆ

ಇಯರ್ ಫೋನ್ ಅನ್ನು ಹೆಚ್ಚಿನ ಅವಧಿ ಇಟ್ಟುಕೊಳ್ಳುವುದರಿಂದ ಕಿವಿಯಲ್ಲಿ ವ್ಯಾಕ್ಸ್ ಕೊಳೆಯು ನೈಸರ್ಗಿಕವಾಗಿ ಹರಿಯುವುದನ್ನು ತಡೆಯುತ್ತದೆ. ಕಿವಿಯಲ್ಲಿ ವ್ಯಾಕ್ಸ್ ಅತಿಯಾದ ಶೇಖರಣೆಯಿಂದ ತಲೆತಿರುಗುವಿಕೆ, ನೋವು, ತುರಿಕೆ, ವರ್ಟಿಗೋ ಮತ್ತು ಟಿನ್ನಿಟಸ್ ಸಮಸ್ಯೆ ಉಂಟಾಗುತ್ತದೆ.

ಹೈಪರಾಕ್ಯುಸಿಸ್

ಹೈಪರಾಕ್ಯುಸಿಸ್ ಎನ್ನುವುದು ಧ್ವನಿಯ ಗ್ರಹಿಕೆಯಲ್ಲಿನ ಅಸ್ವಸ್ಥತೆಯಾಗಿದೆ. ಹೈಪರಾಕ್ಯುಸಿಸ್‌ನಿಂದ ಬಳಲುತ್ತಿರುವ ರೋಗಿಗಳು ಕೆಲ ಶಬ್ದಗಳಿಗೆ ಅತಿಯಾಗಿ ಸಂವೇದನಾಶೀಲರಾಗಿ ಕಾಣಿಸಿಕೊಳ್ಳಬಹುದು. ಕೆಲ ಶಬ್ದಗಳನ್ನು ಕೇಳಿದಾಗ ಕಿವಿಯಲ್ಲಿ ಅತಿಯಾದ ನೋವು ಉಂಟಾಗುತ್ತದೆ. ಹೈಪರಾಕ್ಯುಸಿಸ್ ಅನ್ನು ಕಡೆಗಣಿಸಿದರೆ ಕಿವುಡುತನ ಉಂಟಾಗುವ ಸಾಧ್ಯತೆ ಹೆಚ್ಚು ಎಂದು ತಜ್ಞರು ತಿಳಿಸಿದ್ದಾರೆ.

ತಲೆತಿರುಗುವಿಕೆ

ಇಂದಿನ ಜೀವನ ಶೈಲಿಯಿಂದಾಗಿ ಪದೇ ಪದೇ ತಲೆತಿರುಗುವಿಕೆ ಬರುತ್ತಿದೆ ಎಂದು ಎಲ್ಲರೂ ಭಾವಿಸುವುದು ಸಾಮಾನ್ಯ. ಆದರೆ ತಲೆಸುತ್ತು ಬರುವುದು ಅತಿಯಾದ ಇಯರ್​ಫೋನ್​ಗಳನ್ನು ಬಳಸುವುದರಿಂದ ಉಂಟಾಗುವ ಅಡ್ಡಪರಿಣಾಮದಿಂದ. ನಾವು ಏರು ಧ್ವನಿಯಲ್ಲಿ ಹಾಡುಗಳನ್ನು ಕೇಳಿದಾಗ ಕಿವಿಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದರಿಂದಾಗಿ ತಲೆಸುತ್ತು ಬರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಎಷ್ಟಿರಬೇಕು ಶಬ್ದ ಪ್ರಮಾಣ?

ಸದ್ಯ ಯುವಜನತೆ 104ರಿಂದ 112 ಡಿಬಿ ಮೌಲ್ಯದ ಶಬ್ದದಲ್ಲಿ ಸಂಗೀತ ಕೇಳುತ್ತಿದ್ದಾರೆ. ಇದು ತೀರಾ ಹೆಚ್ಚಿನ ಪ್ರಮಾಣವಾಗಿದೆ. ಸಾಮಾನ್ಯವಾಗಿ ವಯಸ್ಕರು 80 ಡಿಬಿ, ಮಕ್ಕಳು 75 ಡಿಬಿ ವ್ಯಾಲ್ಯೂಮ್‌ ಸೌಂಡ್‌ ಇರಿಸಿಕೊಳ್ಳಬೇಕು. ಆದರೆ ಹೆಚ್ಚಿನ ಸೌಂಡ್‌ನಲ್ಲಿ ಸಂಗೀತ ಕೇಳುತ್ತಿರುವುದರಿಂದ ಕಿವಿಗೆ ಭಾರೀ ಪ್ರಮಾಣದ ಹಾನಿಯಾಗುತ್ತಿದೆ.

suddiyaana