ಕಮಾಲ್ ಹಾಸನ್ ಥಗ್ ಲೈಫ್ ಚಿತ್ರಕ್ಕೆ ಗುಡ್ನ್ಯೂಸ್ – ಕರ್ನಾಟಕದಲ್ಲಿ ಸಿನಿಮಾ ರಿಲೀಸ್ಗೆ ಸುಪ್ರೀಂ ಅಸ್ತು

ವಿವಾದಿತ ಹೇಳಿಕೆ ನೀಡಿ ಥಗ್ ಲೈಫ್ ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಅಡ್ಡಿಯಾಗಿದ್ದ ಕಮಲ್ ಹಾಸನ್ ಮತ್ತು ಚಿತ್ರತಂಡಕ್ಕೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ. ಪ್ರಕರಣಕ್ಕೆ ಮುಕ್ತಿ ಸಿಕ್ಕಿದ್ದು, ಅವರ ಥಗ್ ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಮಂಗಳವಾರ ಹಸಿರು ನಿಶಾನೆ ತೋರಿಸಿದೆ.
ಗುಂಪು, ಗೂಂಡಾಗಿರಿ ಬೀದಿಗೆ ಬಂದು ಆಕ್ರಮಣ ಮಾಡಲು ಸಾಧ್ಯವಿಲ್ಲ, ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬೇಕು. ಸಿಬಿಎಫ್ಸಿ ಸರ್ಟಿಫಿಕೇಟ್ ಇದ್ದ ಚಿತ್ರವನ್ನು ಪ್ರತಿ ರಾಜ್ಯದಲ್ಲೂ ಬಿಡುಗಡೆ ಮಾಡಬೇಕು ಎಂದು ಕಾನೂನಿನ ನಿಯಮ ಹೇಳುತ್ತದೆ. ಚಿತ್ರ ಬಿಡುಗಡೆಗೆ ತಡೆ ನೀಡಿ ಜನರನ್ನು ಭಯಭೀತರನ್ನಾಗಿ ಮಾಡುವುದು, ಚಿತ್ರಮಂದಿರಗಳನ್ನು ಸುಡುವ ಬೆದರಿಕೆಗೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕರ್ನಾಟಕ ಹೈಕೋರ್ಟ್ ಕಮಲ್ ಹಾಸನ್ ಅವರಿಂದ ಕ್ಷಮೆಯಾಚನೆ ಕೇಳಬಾರದಿತ್ತು ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿದೆ. ‘ಥಗ್ ಲೈಫ್’ ಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ಗೆ ವರ್ಗಾಯಿಸಿದ್ದಕ್ಕೆ ಕೂಡ ಆಕ್ಷೇಪ ವ್ಯಕ್ತಪಡಿಸಿದೆ.
ಸಿಬಿಎಫ್ಸಿ ಪ್ರಮಾಣೀಕರಣದ ಹೊರತಾಗಿಯೂ, ಹಲವು ಖಾಸಗಿ ಗುಂಪುಗಳ ಬೆದರಿಕೆಯಿಂದಾಗಿ ಥಗ್ ಲೈಫ್ ಕರ್ನಾಟಕದಲ್ಲಿ ನಿಷೇಧವನ್ನು ಎದುರಿಸುತ್ತಿದೆ ಎಂದು ಚಿತ್ರದ ನಿರ್ಮಾಪಕರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ರಾಜ್ಯದ ಆಡಳಿತ ಮುಖ್ಯಸ್ಥರು ಈ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸಿ ವಿವಾದ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕೂಡ ಅರ್ಜಿಯಲ್ಲಿ ಆರೋಪಿಸಲಾಗಿತ್ತು.