ಬೈಕ್ ಖರೀದಿಗೆ ತಂದಿದ್ದು1 ರೂಪಾಯಿ ನಾಣ್ಯಗಳ 112 ಬ್ಯಾಗ್ – ಯುವಕನ ಕನಸು ನನಸು

ಬೈಕ್ ಖರೀದಿಗೆ ತಂದಿದ್ದು1 ರೂಪಾಯಿ ನಾಣ್ಯಗಳ 112 ಬ್ಯಾಗ್ – ಯುವಕನ ಕನಸು ನನಸು

ತೆಲಂಗಾಣ: ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ಬಳ್ಳ ಎಂಬ ಗಾದೆ ಮಾತು ಎಷ್ಟೊಂದು ಅರ್ಥಗರ್ಭಿತವಾಗಿದೆ ಎಂಬುದಕ್ಕೆ ಇಲ್ಲೊಬ್ಬ ಯುವಕ ಸಾಕ್ಷಿಯಾಗಿದ್ದಾನೆ. ತನ್ನ ಕನಸಿನ ಬೈಕನ್ನು ತನ್ನದಾಗಿಸಿಕೊಳ್ಳಲು, ಮಾಡಿರುವ ಕಾರ್ಯ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ. ಆತ ಬೈಕ್ ಖರೀದಿಸಲು ಹೇಗೆ ಉಳಿತಾಯ ಮಾಡಿದ್ದಾನೆ ಅನ್ನುವ ಇಂಟರೆಸ್ಟಿಂಗ್ ಇಲ್ಲಿದೆ.

ತೆಲಂಗಾಣದ ಯುವಕನೋರ್ವ ತನ್ನ ಕನಸನ್ನು ನನಸು ಮಾಡಿದ್ದಾನೆ. ಅದೂ ವಿಭಿನ್ನವಾಗಿ ಹಣ ಕೂಡಿಸುವ ಮೂಲಕ. ಕೇವಲ ಒಂದು ರೂಪಾಯಿ ನಾಣ್ಯಗಳನ್ನು ಕೂಡಿಸಿ ಈತ 2.85 ಲಕ್ಷ ಮೌಲ್ಯದ ಕೆಟಿಎಂ ಸ್ಪೋಟ್ಸ್ ಬೈಕ್ ಖರೀದಿಸಿದ್ದು, ಈ ಮೂಲಕ ತನ್ನ ಬಹುಕಾಲದ ಕನಸನ್ನು ಈಡೇರಿಸಿಕೊಂಡಿದ್ದಾನೆ.

ಇದನ್ನೂ ಓದಿ: ನೀರಿನ ಮಹತ್ವ ಸಾರಲು ಕನ್ಯಾಕುಮಾರಿಯಿಂದ ಬಾಂಗ್ಲಾದೇಶಕ್ಕೆ ಪ್ರಯಾಣ- ಯುವಕನ ಶ್ರಮಕ್ಕೆ ಹ್ಯಾಟ್ಸಾಪ್

ತೆಲಂಗಾಣದ ಮಂಚೆರಿಯಲ್ ಜಿಲ್ಲೆಯ ರಾಮಕೃಷ್ಣಪುರದ ತಾರಕರಾಮ ಕಾಲೋನಿ ನಿವಾಸಿಯಾಗಿರುವ ವೆಂಕಟೇಶ್ ಪ್ರಸ್ತುತ ಪಾಲಿಟೆಕ್ನಿಕ್ ಕೋರ್ಸ್ ಅಧ್ಯಯನ ಮಾಡುತ್ತಿದ್ದಾನೆ.  ತನ್ನ ಕನಸಿನ ಬೈಕ್ ಖರೀದಿಗಾಗಿ ಈತ 112 ಬ್ಯಾಗ್‌ಗಳಲ್ಲಿ ಒಂದು ರೂಪಾಯಿ ನಾಣ್ಯಗಳನ್ನು ಹೊತ್ತು ತಂದಿದ್ದಾನೆ.

ತನ್ನ ಸ್ವಂತ ಹಣದಿಂದ ತನ್ನಿಷ್ಟದ ಸ್ಪೋರ್ಟ್ಸ್ ಬೈಕ್ ಖರೀದಿಸಿ ತನ್ನೂರಲ್ಲಿ ಸುತ್ತಾಡಬೇಕು ಎಂಬುದು ವೆಂಕಟೇಶ್‌ನ ಬಹುಕಾಲದ ಕನಸಾಗಿತ್ತು. ಅದಕ್ಕಾಗಿ 112 ಬ್ಯಾಗ್‌ಗಳಲ್ಲಿ ಒಂದು ರೂಪಾಯಿ ಕಾಯಿನ್‌ಗಳನ್ನು ತುಂಬಿಕೊಂಡು ಕೆಟಿಎಂ ಶೋ ರೂಮ್‌ಗೆ ತೆರಳಿ ಅಲ್ಲಿ ಬೈಕ್ ಖರೀದಿಸಲು ಬಂದಿರುವುದಾಗಿ ಹೇಳಿದ್ದಾನೆ. ಆದರೆ ಆರಂಭದಲ್ಲಿ ಶೋ ರೂಮ್‌ನವರು ಇಷ್ಟೊಂದು ಮೊತ್ತದ ಹಣವನ್ನು ಕೇವಲ ಬರೀ ನಾಣ್ಯಗಳಲ್ಲಿ ಪಡೆಯಲು ನಿರಾಕರಿಸಿದ್ದಾರೆ. ಆದರೆ ನಂತರದಲ್ಲಿ ಈತ ಅವರ ಮನವೊಲಿಸಿದ್ದು, ಅವರು ಈ ಚಿಲ್ಲರೆ ರೂಪದಲ್ಲಿ 2.85 ಲಕ್ಷ ಹಣವನ್ನು ಪಡೆದು ಆತನ ಬಹುದಿನ ಕನಸು ಕೆಟಿಎಂ ಬೈಕ್ ಖರೀದಿಸಲು ನೆರವಾಗಿದ್ದಾರೆ.

ಇತ್ತ ಶೋ ರೂಮ್‌ನವರಿಗೆ ಒಂದು ರೂಪಾಯಿ ನಾಣ್ಯದ ರೂಪದಲ್ಲಿದ್ದ 2.85 ಲಕ್ಷ ರೂಪಾಯಿಯನ್ನು ಲೆಕ್ಕ ಮಾಡಲು ಬರೋಬ್ಬರಿ ಅರ್ಧ ದಿನವೇ ಹಿಡಿದಿದೆ. ಇಷ್ಟೊಂದು ಮೊತ್ತದ ನಾಣ್ಯವನ್ನು ಎಣಿಸುವುದು ಅವರಿಗೆ ಕಷ್ಟವೆನಿಸಿದರೂ ಶೋ ರೂಮ್‌ನವರು ಅದರ ಹಿಂದಿರುವ ಈ ಯುವಕನ ಶ್ರಮ ಹಾಗೂ ಬೈಕ್ ಮೇಲಿರುವ ಪ್ರೀತಿಯನ್ನು ನೋಡಿ ಈ ಕಾಯಿನ್‌ಗಳನ್ನು ಎಣಿಸಿ, ನಂತರ ಯುವಕನಿಗೆ ಬೈಕ್ ಹಸ್ತಾಂತರಿಸಿದ್ದಾರೆ.

suddiyaana