ನಿಲ್ಲದ ಉಕ್ರೇನ್ ರಷ್ಯಾ ಯುದ್ಧ – ಉಕ್ರೇನ್ ಡ್ರೋನ್ ದಾಳಿಗೆ ರಷ್ಯಾದ 40 ಕ್ಕೂ ಹೆಚ್ಚು ವಿಮಾನ ನಾಶ

ಉಕ್ರೇನ್ ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ ರಷ್ಯಾದ 40 ಕ್ಕೂ ಹೆಚ್ಚು ಸೇನಾ ವಿಮಾನಗಳು ನಾಶವಾಗಿವೆ. ರಷ್ಯಾದಿಂದ ನಿರಂತರ ದಾಳಿಗೆ ಗುರಿಯಾಗುತ್ತಿದ್ದ ಉಕ್ರೇನ್ ತಾನು ಕೂಡ ರಷ್ಯಾದ ಮೇಲೆ ದಾಳಿ ಮಾಡುತ್ತಿತ್ತು. ಆದರೆ ರಷ್ಯಾದ ಪವರ್ ಮುಂದೆ ಉಕ್ರೇನ್ ಯಾವಾಗಲೂ ಕುಂಠಿತವಾಗುತ್ತಿತ್ತು. ಹೀಗಾಗಿ ಒಂದಲ್ಲ ಒಂದು ದಿನ ರಷ್ಯಾಗೆ ತಕ್ಕ ಪಾಠ ಕಲಿಸಲೇಬೇಕು ಎಂದು ನಿರ್ಧರಿಸಿದ್ದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಬಾರಿ ನೀಡಿರುವ ಹೊಡೆತ ರಷ್ಯಾ ನಿರೀಕ್ಷೆಯೇ ಮಾಡಿರಲಿಲ್ಲ.
ರಷ್ಯಾದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ಪ್ರಬಲ ದಾಳಿ ಮಾಡಿದೆ. ಉಕ್ರೇನ್ ದಾಳಿಗೆ ತತ್ತರಿಸಿರುವ ರಷ್ಯಾ ತುಂಬಲಾರದ ನಷ್ಟವನ್ನು ಎದುರಿಸಿದೆ. ತಮ್ಮ ದಾಳಿಯ ಬಗ್ಗೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಉಕ್ರೇನಿಯನ್ ಮಿಲಿಟರಿ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಉಕ್ರೇನ್ ಸುಮಾರು ಒಂದೂವರೆ ವರ್ಷಗಳ ಹಿಂದೆಯೇ ಈ ದಾಳಿಯನ್ನು ಯೋಜಿಸಲು ಪ್ರಾರಂಭಿಸಿತ್ತು ಎಂದು ಝೆಲೆನ್ಸ್ಕಿ ಹೇಳಿದ್ದು, ಕೊನೆಗೂ ರಷ್ಯಾದ ವಾಯುನೆಲೆಯ ಮೇಲೆ ಉಕ್ರೇನ್ ದಾಳಿ ಮಾಡಿತು ಎಂದು ಹೇಳಿದ್ದಾರೆ.
ಉಕ್ರೇನಿಯನ್ ಡ್ರೋನ್‌ಗಳು ರಷ್ಯಾದ ಐದು ವಾಯುನೆಲೆಗಳ ಮೇಲೆ ದಾಳಿ ಮಾಡಿ, ಲೆಕ್ಕವಿಲ್ಲದಷ್ಟು ವಿಮಾನಗಳಿಗೆ ಹಾನಿ ಮಾಡಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ. ಇದಕ್ಕೂ ಮೊದಲು, ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ರಷ್ಯಾದ ನೆಲೆಗಳ ಮೇಲೆ ಬೃಹತ್ ಡ್ರೋನ್ ದಾಳಿ ನಡೆಸುವ ಮೂಲಕ ಸುಮಾರು 40 ರಷ್ಯಾದ ವಿಮಾನಗಳನ್ನು ನಾಶಪಡಿಸಿರುವುದಾಗಿ ಉಕ್ರೇನ್ ಹೇಳಿಕೊಂಡಿತ್ತು. ಈ ಕಾರ್ಯಾಚರಣೆಯಲ್ಲಿ ಒಟ್ಟು 117 ಡ್ರೋನ್‌ಗಳನ್ನು ಬಳಸಲಾಗಿದ್ದು, ಅಷ್ಟೇ ಸಂಖ್ಯೆಯ ಡ್ರೋನ್ ಆಪರೇಟರ್‌ಗಳು ಭಾಗಿಯಾಗಿದ್ದರು