ವೇಸ್ಟ್ ಅಲ್ಲ ಬೆಸ್ಟ್ ಬೌಲರ್ – ಕೈಹಿಡಿದ RCBಗೆ ವಿಕೆಟ್‌ಗಳ ಗಿಫ್ಟ್
ಹೇಗಿರುತ್ತೆ ಸುಯಾಶ್ ಫೈನಲ್ ಫೈಟ್?

ವೇಸ್ಟ್ ಅಲ್ಲ ಬೆಸ್ಟ್ ಬೌಲರ್  – ಕೈಹಿಡಿದ RCBಗೆ ವಿಕೆಟ್‌ಗಳ ಗಿಫ್ಟ್ಹೇಗಿರುತ್ತೆ ಸುಯಾಶ್ ಫೈನಲ್ ಫೈಟ್?

ಆರ್‌ಸಿಬಿ ಬರೋಬ್ಬರಿ 9 ವರ್ಷದ ಬಳಿಕ ಐಪಿಎಲ್ ಫೈನಲ್‌ಗೆ ಎಂಟ್ರಿಕೊಟ್ಟಿದೆ. ಮೊದಲ ಕ್ವಾಲಿಪೈಯರ್ ಪಂದ್ಯದಲ್ಲಿ 101 ರನ್‌ಗೆ ಆರ್‌ಸಿಬಿ ಬೌಲರ್ ಪಂಜಾಬ್‌ನ್ನ ಕಟ್ಟಿ ಹಾಕಿದ್ರು. ಅದ್ರಲ್ಲೂ ಯಾರನ್ನ ವೆಸ್ಟ್ ಅಂದ್ರೂ ಅದೇ ಪ್ಲೇಯರ್ 3 ವಿಕೆಟ್ ಪಡೆದು ಮಿಂಚಿದ್ರು.. ಹೌದು ಆರ್‌ಸಿಬಿ ಯ ಯುವ ಲೆಗ್‌ಸ್ಪಿನ್ನರ್ ಸುಯಾಶ್ ಶರ್ಮಾ ಬೆಂಕಿ ಬೌಲಿಂಗ್ ಮಾಡಿ ತನ್ನ ತಾಕತ್ತು ತೋರಿಸಿದ್ರು.. ಅದ್ರಲ್ಲೂ ಮೂರು ಇಂಪಾರ್ಡೆಂಟ್‌ ದ ವಿಕೆಟ್‌ಗಳನ್ನು ಪಡೆದು ಎದುರಾಳಿ ತಂಡದ ಮಧ್ಯಮ ಕ್ರಮಾಂಕವನ್ನು ಧ್ವಂಸ ಮಾಡಿದರು.  11ನೇ ಓವರ್‌ನಲ್ಲಿ ಮಾರ್ಕಸ್ ಸ್ಟೋಯ್ನಿಸ್ ಲೆಗ್‌ಸೈಡ್‌ಗೆ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದಾಗ, ಸುಯಶ್ ಎಸೆದ ಚೆಂಡು ಲೆಗ್‌ಸ್ಟಂಪ್ ಅನ್ನು ಉರುಳಿಸಿತು. ಇದು ಸುಯಶ್‌ಗೆ ಈ ಇನ್ನಿಂಗ್ಸ್‌ನಲ್ಲಿ ಮೂರನೇ ವಿಕೆಟ್. ಇದಕ್ಕೂ ಮೊದಲು ಸುಯಶ್ ಶರ್ಮ ಉತ್ತಮ ಫಾರ್ಮ್‌ನಲ್ಲಿದ್ದ ಶಶಾಂಕ್ ಸಿಂಗ್ ಅವರನ್ನು 3 ರನ್‌ಗಳಿಗೆ ಔಟ್ ಮಾಡಿದರು. ಹಾಗೇ ಈ ಪಂದ್ಯದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಇಂಪ್ಯಾಕ್ಟ್ ಸಬ್ ಆಗಿ ಬಂದ ಮುಶೀರ್ ಖಾನ್ ಅವರನ್ನು ಖಾತೆ ತೆರೆಯದಂತೆಯೇ ಪೆವಿಲಿಯನ್‌ಗೆ ಕಳುಹಿಸಿದರು. ಸುಯಶ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಆರ್‌ಸಿಬಿ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು.

: ಯಾರು ಈ ಸುಯಾಶ್ ಶರ್ಮಾ?

ಸುಯಶ್ ಶರ್ಮಾ 2003ರ ಮೇ 15 ರಂದು ದೆಹಲಿಯ ಭಜನ್‌ಪುರದಲ್ಲಿ ಜನಿಸಿದರು. ಅವರ ಅದ್ಭುತ ಕ್ರಿಕೆಟ್ ಪ್ರದರ್ಶನದಿಂದ ಪ್ರಥಮ ದರ್ಜೆ ಕ್ರಿಕೆಟ್, ಲಿಸ್ಟ್ ಎ ಪಂದ್ಯಗಳನ್ನು ಆಡದೆಯೇ ಐಪಿಎಲ್‌ನಲ್ಲಿ ಸ್ಥಾನ ಪಡೆದರು. 2023ರಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್ ಪರ 19ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಸುಯಶ್ ಶರ್ಮ, ಆರ್‌ಸಿಬಿ ವಿರುದ್ಧ 3/30 ಬೌಲಿಂಗ್ ಪ್ರದರ್ಶನ ನೀಡಿದ್ದರು. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ 2.60 ಕೋಟಿ ರೂ.ಗಳಿಗೆ ಆರ್‌ಸಿಬಿ ಸುಯಾಶ್ ಅವರನ್ನು ಖರೀದಿಸಿತು. ಇದು ಅವರಿಗೆ ಅತಿ ಹೆಚ್ಚು ಬೆಲೆ ಪಡೆದ ಸ್ಪಿನ್ನರ್ ಎಂಬ ಹೆಗ್ಗಳಿಕೆ ತಂದುಕೊಟ್ಟಿತು. ಇಲ್ಲಿಯವರೆಗೆ 26 ಐಪಿಎಲ್ ಪಂದ್ಯಗಳಲ್ಲಿ 18 ವಿಕೆಟ್ ಪಡೆದಿರುವ ಸುಯಶ್, ಭವಿಷ್ಯದಲ್ಲಿ ಭಾರತ ತಂಡದ ಪ್ರಮುಖ ಬೌಲರ್ ಆಗಿ ಹೊರಹೊಮ್ಮುವ ಸಾಧ್ಯತೆಗಳಿವೆ.

ಸುಯಾಶ್ ಶರ್ಮ ಅವರ ಆದಾಯ ಎಷ್ಟು?

2025ರ ವೇಳೆಗೆ ಸುಯಶ್ ಶರ್ಮ ಅವರ ನಿವ್ವಳ ಆಸ್ತಿ ಸುಮಾರು 7.7 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಆದಾಯವು ಹೆಚ್ಚಾಗಿ ಐಪಿಎಲ್ ಒಪ್ಪಂದಗಳು, ದೇಶೀಯ ಕ್ರಿಕೆಟ್ ಮತ್ತು ಬ್ರ್ಯಾಂಡ್ ಪ್ರಚಾರಗಳಿಂದ ಬರುತ್ತದೆ.

ಆರ್‌ಸಿಬಿಗೆ ಕಪ್ ಗೆಲ್ಲಿಸುವುದೇ ಸುಯಾಶ್ ಗುರಿ

ವಿಶೇಷ ಎಂದರೆ ಈ ಬಾರಿಯ ಐಪಿಎಲ್​ಗೆ ಆಯ್ಕೆಯಾಗಿದ್ದ ಸುಯಾಶ್ ಶರ್ಮಾ ಟೂರ್ನಿಗೆ ಅಲಭ್ಯರಾಗುವ ಸ್ಥಿತಿಯಲ್ಲಿದ್ದರು. ಏಕೆಂದರೆ ಐಪಿಎಲ್ ಆರಂಭಕ್ಕೂ ಕೆಲ ತಿಂಗಳುಗಳ ಮುಂಚೆ ಸುಯಾಶ್ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ಈ ಬಾರಿಯ ಐಪಿಎಲ್​ನಿಂದ ಹೊರಗುಳಿಯಲು ನಿರ್ಧರಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಆರ್​ಸಿಬಿ ಫ್ರಾಂಚೈಸಿ ಸುಯಾಶ್ ಶರ್ಮಾ ಅವರ ನೆರವಿಗೆ ನಿಂತರು. ಅಲ್ಲದೆ ಉತ್ತಮ ಚಿಕಿತ್ಸೆಗಾಗಿ ಅವರನ್ನು ಲಂಡನ್​ಗೆ ಕಳುಹಿಸಿದರು. ಇದರ ಖರ್ಚು ವೆಚ್ಚಗಳನ್ನು ಆರ್​ಸಿಬಿ ಫ್ರಾಂಚೈಸಿಯೇ ನೋಡಿಕೊಂಡಿತು. ಸುಯಾಶ್‌ಗೆ ಎಲ್ಲಾ ರೀತಿಯ ನೆರುವು ನೀಡಿ, ಐಪಿಎಲ್‌ ಆರಂಭಕ್ಕೂ ಮುನ್ನವೇ ಫಿಟ್ ಆಗುವಂತೆ ಮಾಡಿದ್ರು. ಇದ್ದನ್ನ ಸುಯಾಶ್ ಮನಸ್ಸಿಗೆ ತಗೊಂಡ್ರು.. ನಾನು ಆರ್‌ಸಿಬಿಗೆ ಚಿರರುಣಿಯಾಗಿ ಇರಬೇಕು ಅನ್ಕೊಂಡ್ರು. ಹೀಗಾಗಿಯೇ ಆರ್​ಸಿಬಿ ಫ್ರಾಂಚೈಸಿಗೆ ಸುಯಶ್ ಶರ್ಮಾ ಕಪ್ ಗೆಲ್ಲಿಸಿಕೊಡಲು ಪಣತೊಟ್ಟಿದ್ದಾರೆ. ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿಕೊಡುವುದೇ ನನ್ನ ಗುರಿ ಎಂದು ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಹೇಳಿಕೆಯನ್ನು ಸಮರ್ಥಿಸುವಂತೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸುಯಶ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇನ್ನು ಜೂನ್ 3 ರಂದು ಕೂಡ ಸುಯಾಶ್ ಕಡೆಯಿಂದ ಇಂತಹದ್ದೇ ಪ್ರದರ್ಶನ ಮೂಡಿಬಂದರೆ, ಆರ್​ಸಿಬಿ ಕಪ್ ಗೆಲ್ಲುವುದರಲ್ಲಿ ಡೌಟೇ ಇಲ್ಲ ಎನ್ನಬಹುದು. ಒಟ್ನಲ್ಲಿ ಆರ್‌ಸಿಬಿಯಲ್ಲಿ ಮಿಂಚಿಗ ಸುಯಾಶ್ ಶರ್ಮಾ ಪೈನಲ್‌ನಲ್ಲಿ ವಿಕೆಟ್ ತೆಗೆದು ಕಪ್ ಗೆಲ್ಲಿಸಿಕೊಡಲಿ ಅನ್ನೋದು ಆರ್‌ಸಿಬಿ ಫ್ಯಾನ್ಸ್ ಆಶಯ.

 

Kishor KV