ನೀವು ಕುಡಿಯೋ ವಾಟರ್ ಬಾಟಲ್ ಸೇಫಾ? – ಈ ಬಾಟಲ್ ನೀರು ಕುಡಿದ್ರೆ ಅನಾರೋಗ್ಯ ಫಿಕ್ಸ್!

ಇದು ಫ್ಯಾಷನ್ ಯುಗ.. ತಿನ್ನೋ ಆಹಾರವನ್ನ ಕೂಡ ಹೇಗೆ ಡಿಸೈನ್ ಮಾಡಿರ್ತಾರೆ ಅಂತಾ ಈಗಿನ ಜನರೇಷನ್ ಅಳಿತಾರೆ. ಇನ್ನು ಕುಡಿಯೋ ವಾಟರ್ ಬಾಟಲ್ ಕತೆ ಕೇಳ್ಬೇಕಾ? ಎಲ್ಲರಿಗಿಂತ ವಿಭಿನ್ನವಾಗಿರ್ಮೇಕು ಅಂತಾ ಅನೇಕರು ಬಯಸ್ತಾರೆ. ಈಗಂತೂ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಪ್ಲಾಸ್ಟಿಕ್, ಗಾಜಿನ, ಸ್ಟೀಲ್, ತಾಮ್ರದ ಬಾಟಲ್ ಲಭ್ಯ. ನಾವು ಉಪಯೋಗಿಸುವ ನೀರಿನ ಬಾಟಲ್ ಗಳು ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಾ? ಯಾವ ತರನಾದ ನೀರಿನ ಬಾಟಲ್ ಬಳಸುವುದು ಉತ್ತಮ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಇದನ್ನೂ ಓದಿ: ಆಲಿಯಾ ಭಟ್ ಮತ್ತೆ ಪ್ರೆಗ್ನೆಂಟ್? – ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಣಬೀರ್ ಜೋಡಿ?
ಗಾಜಿನ ಬಾಟಲ್
ಗಾಜಿನ ಬಾಟಲ್‌ನಲ್ಲಿ ರಾಸಾಯನಿಕ ಅಂಶಗಳ ಅಪಾಯವಿರಲಾರದು. ಗಾಜಿನ ಬಾಟಲ್ ಹೆಚ್ಚು ಪಾರದರ್ಶಕವಾಗಿ ಇರುವ ಕಾರಣ ನೀರಿನ ಶುದ್ಧತೆ ಪಾರದರ್ಶಕವಾಗಿ ಕಾಣುತ್ತದೆ. ಗಾಜಿನ ನೀರಿನ ಬಾಟಲ್ ಬಹಳ ಸೂಕ್ಷ್ಮವಾಗಿರುವ ಕಾರಣ ಬಹಳ ಎಚ್ಚರಿಕೆಯಿಂದ ನಿಗಾವಹಿಸಿ ಇವುಗಳನ್ನು ಬಳಸಬೇಕಾಗುತ್ತದೆ. ಅಲ್ಲದೆ ಇದು ಮರುಬಳಕೆ ಮಾಡಬಹುದಾದ ಹಾಗೂ ಪರಿಸರ ಸ್ನೇಹಿಯೂ ಹೌದು. ಕೆಲವೊಂದು ಗಾಜಿನ ಬಾಟಲ್ ತುಂಬಾ ಭಾರವಾಗಿ ಇರಲಿದ್ದು ಸುಲಭಕ್ಕೆ ಕೊಂಡೊಯ್ಯುವುದು ಸಹ ಕಷ್ಟವೆನ್ನಬಹುದು. ಹಾಗಿದ್ದರೂ ಇದನ್ನು ನಿತ್ಯ ಜಾಗರೂಕತೆಯಿಂದ ಬಳಸಿದರೆ ಉತ್ತಮ ಎನ್ನಬಹುದು.
ಸ್ಟೀಲ್ ಬಾಟಲ್
ಸ್ಟೀಲ್ ಬಾಟಲ್‌ನ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಬರಲಾರದು. ಆದರೆ ನೀರಿನ ಹೊರತಾಗಿ ಜ್ಯೂಸ್ ಇತರ ಪಾನೀಯ ಸಂಗ್ರಹ ಮಾಡಿಟ್ಟು ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಸ್ಟೀಲ್ ಬಾಟಲ್ ಬದಲು ಸ್ಟೈನ್ ಲೆಸ್ ಬಾಟಲ್ ಬಳಸಿದರೆ ಉತ್ತಮ. ಸ್ಟೈನ್ ಲೆಸ್ ಸ್ಟೀಲ್‌ಗಳು ದೀರ್ಘಕಾಲದ ತನಕ ಬಾಳ್ವಿಕೆ ಬರಲಿದ್ದು, ಅನೇಕ ಗಂಟೆಗಳ ಕಾಲ ಬಿಸಿ ಅಥವಾ ತಣ್ಣಗಿನ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ಬಾಟಲಿ ಗಳಿಗಿವೆ. ಈ ಬಾಟಲ್‌ಗಳು ಕೊಳ್ಳಲು ದುಬಾರಿಯಾಗಿದ್ದು, ಪ್ಲಾಸ್ಟಿಕ್ ಬಾಟಲ್‌ಗೆ ಹೋಲಿಸಿದರೆ ಉತ್ತಮ.
ತಾಮ್ರದ ಬಾಟಲ್
ತಾಮ್ರದ ಬಾಟಲ್ ನೀರು ಕುಡಿಯುವುದರಿಂದ ಅನೇಕ ಪ್ರಯೋಜನಗಳು ದೇಹಕ್ಕೆ ಲಭ್ಯವಾಗುತ್ತದೆ. ತಾಮ್ರದ ಬಾಟಲಿಯಲ್ಲಿ ನೀರನ್ನು ಸಂಗ್ರಹ ಮಾಡಿ ಇಟ್ಟುಕೊಂಡರೆ ಖನಿಜಾಂಶಗಳು ನೀರಿನೊಂದಿಗೆ ಬೆರೆತು ದೇಹವನ್ನು ಸೇರಲಿವೆ. ಹೀಗಾಗಿ ನೀರಿನ ಗುಣಮಟ್ಟ ಸುಧಾರಣೆಯಾಗುತ್ತದೆ. ತಾಮ್ರದ ಬಾಟಲ್ ದುಬಾರಿ. ಅದೇ ರೀತಿ ತಾಮ್ರದ ಬಾಟಲ್ ನೀರು ಪೂರ್ತಿ ದಿನ ಬಳಕೆಗೆ ಅಷ್ಟು ಸೂಕ್ತವಲ್ಲ. ಬೆಳಗ್ಗೆಯಿಂದ ಮಧ್ಯಾಹ್ನದ ತನಕ ತಾಮ್ರದ ಬಾಟಲ್ ನೀರು ಬಳಕೆಗೆ ಸೂಕ್ತ. ತಾಮ್ರದ ಬಾಟಲ್ ಆಗಾಗ ಸ್ವಚ್ಛಗೊಳಿಸುತ್ತಲೇ ಇರಬೇಕು.
ಸಿಪ್ಪರ್ ಬಾಟಲ್
ಈ ಬಾಟಲ್ ಅನ್ನು ದೈಹಿಕ ವ್ಯಾಯಾಮ ಮಾಡುವ ಯುವ ಜನಾಂಗ ಹಾಗೂ ವಿದ್ಯಾರ್ಥಿಗಳು ಹೆಚ್ಚು ಇಷ್ಟ ಪಡುತ್ತಾರೆ. ಹೆಚ್ಚಾಗಿ ಪ್ಲಾಸ್ಟಿಕ್ ಮತ್ತು ಸ್ಟೀಲ್ ಮಾದರಿಯಲ್ಲಿಯೇ ಇಂತಹ ಸಿಪ್ಪರ್ ಬಾಟಲ್ ಲಭ್ಯ. ಸಿಪ್ಪರ್ ಬಾಟಲಿಯ ಮುಚ್ಚಳದಲ್ಲಿ ಸ್ಟ್ರಾ ವಿನ್ಯಾಸ ಇದ್ದು, ಅದರ ಮೂಲಕ ನೀರು ಹೀರಬಹುದು. ಹೀಗಾಗಿ ಇದರಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿ ಆಗುವ ಸಾಧ್ಯತೆ ಇದೆ. ಇಂತಹ ಬಾಟಲಿ ಹೆಚ್ಚಾಗಿ ಪ್ರಯಾಣ ಮಾಡುವಾಗ ಅನುಕೂಲ ಆಗುತ್ತದೆ. ಹಾಗಿದ್ದರೂ ಆಗಾಗ ಬಾಟಲಿ ಸ್ವಚ್ಛಗೊಳಿಸುತ್ತಿದ್ದರೆ ಯಾವ ಸಮಸ್ಯೆಯೂ ಬರಲಾರದು.
ಪ್ಲಾಸ್ಟಿಕ್ ಬಾಟಲ್
ಇಂದು ಪ್ಲಾಸ್ಟಿಕ್ ಬಾಟಲ್ ಅತೀ ಸುಲಭಕ್ಕೆ ಲಭ್ಯವಾಗುತ್ತಿದೆ. ವಿವಿಧ ಬಣ್ಣಗಳು ಮತ್ತು ಗಾತ್ರಗಳಲ್ಲಿ ಪ್ಲಾಸ್ಟಿಕ್ ಬಾಟಲಿ ದೊರೆಯುತ್ತಿದೆ. ಆದರೆ ಹಾನಿಕಾರಕ ರಾಸಾಯನಿಕಗಳು ನೀರಿನಲ್ಲಿ ಸೇರಿಕೊಳ್ಳುವ ಸಾಧ್ಯತೆ ಅಧಿಕ. ಇದರಿಂದಾಗಿ ನೀರಿನ ಇನ್‌ಫೆಕ್ಷನ್ ಸಮಸ್ಯೆ ಬರುವ ಸಾಧ್ಯತೆ ಇದೆ. ಪ್ಲಾಸ್ಟಿಕ್ ಬಾಟಲಿಯ ನೀರಿನಲ್ಲಿ ಮೈಕ್ರೋ ಪ್ಲ್ಯಾಸ್ಟಿಕ್ ಅಂಶ ಬೆರೆಯುವ ಚಾನ್ಸ್ ಕೂಡ ಇದೆ. ಇದು ದೇಹದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡಲಿದೆ. ಬೆಲೆ ಕಡಿಮೆ ಇದ್ದರೂ ಇವುಗಳು ಪರಿಸರದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಲಿದೆ. ಒಟ್ಟಿನಲ್ಲಿ ದೇಹದ ಆರೋಗ್ಯದ ಸುರಕ್ಷತೆಯ ಜತೆಗೆ ದೀರ್ಘಕಾಲದ ತನಕ ಬಾಳ್ವಿಕೆ ಬರುವ ಬಾಟಲ್ ಬಳಕೆ ಮಾಡುವುದು ಉತ್ತಮ ಎನ್ನಬಹುದು.