ಗುಜರಾತ್‌ಗೆ ಶಾಕ್ ಕೊಟ್ಟ ಲಕ್ನೋ ಸೂಪರ್ ಜೈಂಟ್ಸ್ – ಭರ್ಜರಿ ಶತಕ ಬಾರಿಸಿದ ಮಿಚೆಲ್ ಮಾರ್ಷ್

ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಬಾರಿಸಿದ ಭರ್ಜರಿ ಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ಗುಜರಾತ್ ಟೈಟಾನ್ಸ್ ತಂಡವನ್ನು 33 ರನ್‌ಗಳಿಂದ ಸೋಲಿಸಿದೆ. ಈ ಮೂಲಕ ಎಲ್‌ಎಸ್‌ಜಿ ಟೂರ್ನಿಯಲ್ಲಿ ಆರನೇ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಗುಜರಾತ್ ಟೈಟಾನ್ಸ್ ತಂಡದ ಆಸೆ ಕಮರಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 235 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 202 ರನ್ ಸೇರಿಸಿ ಸೋಲು ಕಂಡಿತು. ಜಿಟಿ ತಂಡ ಲೀಗ್‌ನಲ್ಲಿ ನಾಲ್ಕನೇ ಸೋಲು ಕಂಡಿದೆ.
ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡದ ಆರಂಭ ಸಾಧರಣವಾಗಿತ್ತು. ಆರಂಭಿಕ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಜೋಡಿ ಮೊದಲ ವಿಕೆಟ್‌ಗೆ 46 ರನ್ ಸೇರಿಸಿತು. ಸಾಯಿ ಸುದರ್ಶನ್ 21 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ನಾಯಕ ಶುಭಮನ್ ಗಿಲ್ 35 ರನ್, ಭರವಸೆಯ ಮಿಡ್ಲ್ ಆರ್ಡರ್ ಬ್ಯಾಟರ್ ಜೋಸ್ ಬಟ್ಲರ್ 33 ರನ್ ಸಿಡಿಸಿ ಪೆವಿಲಿಯನ್ ಸೇರಿದ್ರು.
ನಾಲ್ಕನೇ ವಿಕೆಟ್‌ಗೆ ಶೆರ್ಫೇನ್ ರುದರ್ಫೋರ್ಡ್ ಹಾಗೂ ಶಾರೂಖ್ ಖಾನ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 40 ಎಸೆತಗಳಲ್ಲಿ 86 ರನ್ ಸಿಡಿಸಿತು. ಶೆರ್ಫೇನ್ ರುದರ್ಫೋರ್ಡ್ 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ 38 ರನ್ ಬಾರಿಸಿ ಅಬ್ಬರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಶಾರೂಖ್ ಖಾನ್ 5 ಬೌಂಡರಿ, 3 ಸಿಕ್ಸರ್ ನೆರವಿನಿಂದ 57 ರನ್ ಬಾರಿಸಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಎಲ್‌ಎಸ್‌ಜಿ ಪರ ವಿಲ್ ಒ’ರೂರ್ಕ್ 3, ಆವೀಶ್ ಖಾನ್, ಆಯುಷ್ ಬದೋನಿ ತಲಾ ಎರಡು ವಿಕೆಟ್ ಕಬಳಿಸಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕರಾದ ಮಿಚೆಲ್ ಮಾರ್ಷ್ ಹಾಗೂ ಐಡೇನ್ ಮಾರ್ಕ್ರಾಮ್ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಆರಂಭದಲ್ಲಿ ಸಮಯೋಚಿತ ಆಟದ ಪ್ರದರ್ಶನ ನೀಡಿ, ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದ್ದಂತೆ ಅಬ್ಬರಿಸಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಗುಜರಾತ್ ಟೈಟಾನ್ಸ್ ತಂಡ ಬೌಲರ್‌ಗಳು ವಿಫಲರಾದರು.
ಮಿಚೆಲ್ ಮಾರ್ಷ್ ಹಾಗೂ ಐಡೇನ್ ಮಾರ್ಕ್ರಾಮ್ ಜೋಡಿ ಪವರ್ ಪ್ಲೇನಲ್ಲಿ ಪವರ್ ಫುಲ್ ಆಟದ ಪ್ರದರ್ಶನ ನೀಡಿತು. ಈ ಜೋಡಿ ಮೊದಲ ಆರು ಓವರ್‌ಗಳಲ್ಲಿ 53 ರನ್ ಸಿಡಿಸಿತು. ಬಳಿಕ ಸ್ಥಿರ ಪ್ರದರ್ಶನ ನೀಡಿದ ಜೋಡಿ ರನ್ ಕಲೆ ಹಾಕುತ್ತಾ ಸಾಗಿತು. ಈ ವೇಳೆ 36 ರನ್ ಬಾರಿಸಿದ್ದ ಮಾರ್ಕ್ರಾಮ್ ಇಲ್ಲದ ಹೊಡೆತಕ್ಕೆ ಮುಂದಾಗಿ ಸಾಯಿ ಕಿಶೋರ್‌ಗೆ ವಿಕೆಟ್ ಒಪ್ಪಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 91 ರನ್ ಸಿಡಿಸಿತು.