ಆಪರೇಷನ್ ಸಿಂಧೂರ್ನಲ್ಲಿ ಪಾಕಿಸ್ತಾನಕ್ಕೆ ಇನ್ನಷ್ಟು ಬುದ್ಧಿ ಕಲಿಸಬೇಕಿತ್ತು – ಕೇಂದ್ರದ ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ

ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ವೇಳೆಯಲ್ಲಿ ಪಾಕಿಸ್ತಾನಕ್ಕೆ ಇನ್ನಷ್ಟು ಬುದ್ಧಿ ಕಲಿಸಬೇಕಿತ್ತು ಎಂದು ಕೇಂದ್ರದ ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಪಾಟ್ನಾದ ಜಯಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಯು ನಮ್ಮ ನಾಗರಿಕತೆಯ ಇತಿಹಾಸದಲ್ಲಿ ಅತ್ಯಂತ ಕ್ರೂರ ಘಟನೆಗಳಲ್ಲಿ ಒಂದಾಗಿದೆ ಎಂದರು.
ಆಪರೇಷನ್ ಸಿಂಧೂರ್ ತದನಂತರದ ಬೆಳವಣಿಗೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪಾಕಿಸ್ತಾನ ಪಹಲ್ಗಾಮ್ ಹತ್ಯಾಕಾಂಡಕ್ಕೆ ಸಂಚು ರೂಪಿಸುವ ಮೂಲಕ ಸಂಘರ್ಷವನ್ನು ಆರಂಭಿಸಿತು. ಇದು ನಮ್ಮ ನಾಗರಿಕತೆಯ ಇತಿಹಾಸದಲ್ಲಿ ಅತ್ಯಂತ ಕ್ರೂರ ಘಟನೆಯಾಗಿದೆ. ಹಾಗಾಗಿ, ಪಾಕಿಸ್ತಾನಕ್ಕೆ ಇನ್ನಷ್ಟು ಬುದ್ಧಿ ಕಲಿಸಬೇಕಿತ್ತು ಎಂದು ಹೇಳಿದರು.
ಗಡಿಯಾಚೆಗಿನ ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ವಿವರಿಸಲು ವಿವಿಧ ದೇಶಗಳಿಗೆ ತೆರಳುತ್ತಿರುವ ಸರ್ವ ಪಕ್ಷ ನಿಯೋಗ ಕುರಿತ ಪ್ರಶ್ನೆಗೆ ಉತ್ತರಿಸಿದ ಸುಬ್ರಮಣಿಯನ್ ಸ್ವಾಮಿ, ಈ ನಿಯೋಗಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಸದಸ್ಯರು ಸರ್ಕಾರಿ ಹಣದಲ್ಲಿ ಎಂಜಾಯ್ ಮಾಡಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ ಎಂದರು.