ಮಕ್ಕಳಿಂದ ಮೊಬೈಲ್ ದೂರವಿರಿಸಲು ಪೋಷಕರಿಂದ ಲಿಖಿತ ಆಶ್ವಾಸನೆ -ಶಾಲೆಗಳ ಕ್ರಮಕ್ಕೆ ಉತ್ತಮ ಸ್ಪಂದನೆ

ಮಕ್ಕಳಿಂದ ಮೊಬೈಲ್ ದೂರವಿರಿಸಲು ಪೋಷಕರಿಂದ ಲಿಖಿತ ಆಶ್ವಾಸನೆ -ಶಾಲೆಗಳ ಕ್ರಮಕ್ಕೆ ಉತ್ತಮ ಸ್ಪಂದನೆ

ಬೆಂಗಳೂರು: ಕೊರೊನಾ ಕಾಲದಲ್ಲಿ ಆಗಿರುವ ಕೆಲ ಬದಲಾವಣೆಗಳಿಂದ ಆಗಿರುವ ತೊಂದರೆಯಿಂದ ಹೊರಬರಲು ಜನ ಈಗಲೂ ಒದ್ದಾಡುತ್ತಿದ್ದಾರೆ. ಅದರಲ್ಲೂ ಲಾಕ್‌ಡೌನ್, ಮಕ್ಕಳಿಗೆ ಆನ್‌ಲೈನ್ ಎಜುಕೇಷನ್ , ಆನ್‌ಲೈನ್ ಕ್ಲಾಸ್‌ನಿಂದಾಗಿ ಆಗಿರೋ ಸಮಸ್ಯೆ ಒಂದೆರಡಲ್ಲ. ನಮ್ಮ ಮಕ್ಕಳು ಮೊಬೈಲ್ ಮುಟ್ಟುವುದೇ ಇಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಪೋಷಕರು ಕೂಡಾ ಆ ದಿನಗಳಲ್ಲಿ ಅನಿವಾರ್ಯವಾಗಿ ಮಕ್ಕಳ ಕೈಗೆ ಸ್ಮಾರ್ಟ್ ಫೋನ್ ನೀಡಲೇಬೇಕಾಯ್ತು. ಇದ್ರಿಂದಾಗಿ ಮೊಬೈಲ್‌ ಮೇಲೆ ಮಕ್ಕಳ ಅವಲಂಬನೆ ಹೆಚ್ಚಾಗುತ್ತಾ ಹೋಗಿತ್ತು. ಅಲ್ಲಿಂದ ಸ್ಮಾರ್ಟ್ ಫೋನ್ ಸಹವಾಸ ಎಷ್ಟರಮಟ್ಟಿಗೆ ಅಂದರೆ ಮಕ್ಕಳಿಗೆ ಅದೇ ಪ್ರಪಂಚವಾಗಿ ಹೋಗಿತ್ತು. ಇದರಿಂದ ಈಗ ಪೋಷಕರು ಅನುಭವಿಸುತ್ತಿರುವ ಸಂಕಟದ ನಡುವೆ ಶಿಕ್ಷಕರು ಕೂಡಾ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈಗಿನ ಶಿಕ್ಷಣ ಕೂಡಾ ಮೊಬೈಲ್‌ಗೆ ಅಂಟಿಕೊಂಡಿದೆ. ಅದಕ್ಕೆ ಸರಿಯಾಗಿ ಮಕ್ಕಳು ಕೂಡಾ ಮೊಬೈಲ್‌ಗೆ ಅಂಟಿಕೊಂಡಿದ್ದಾರೆ. ಇದು ಮಕ್ಕಳ ಭವಿಷ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ.

ಇದನ್ನೂ ಓದಿ :   ‘ಪ್ರೀತಿಯ ಕ್ರಿಕೆಟ್.. ನನಗೆ ಇನ್ನೊಂದು ಅವಕಾಶ ಕೊಡು’ – ಕರುಣ್ ನಾಯರ್ ಟ್ವೀಟ್ ವೈರಲ್

ಮಕ್ಕಳ ವರ್ತನೆಯಲ್ಲಿ ಆಗಿರುವ ಬದಲಾವಣೆಯನ್ನು ಗುರುತಿಸಿರುವ ಪೋಷಕರು ಹಾಗೂ ಶಿಕ್ಷಕರು, ಶಾಲಾ ಆಡಳಿತ ಮಂಡಳಿಗಳ ನೆರವಿನಿಂದ ಪರಿಸ್ಥಿತಿಯನ್ನು ಸುಧಾರಿಸುವ ಕಡೆಗೆ ಹೆಜ್ಜೆ ಇಟ್ಟಿದ್ದಾರೆ. ಅದರಂತೆ ಬೆಂಗಳೂರಿನ ಹಲವು ಶಾಲೆಗಳು ಪೋಷಕರಿಂದ ಲಿಖಿತ ಆಶ್ವಾಸನೆ ಪಡೆದುಕೊಳ್ಳುತ್ತಿವೆ. ‘ನಮ್ಮ ಮಕ್ಕಳು ಪ್ರಾಪ್ತ ವಯಸ್ಕರಾಗುವವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ತೆರೆಯಲು, ನಿರ್ವಹಿಸಲು ಅವಕಾಶ ನೀಡುವುದಿಲ್ಲ. ಮಕ್ಕಳ ಆನ್ಲೈನ್ ಚಟುವಟಿಕೆಯ ಮೇಲೆ ನಿಗಾ ಇರಿಸುತ್ತೇವೆ’ ಎಂದು ಪೋಷಕರು ಶಾಲೆಗಳಿಗೆ ಬರೆದುಕೊಡುವ ಮೂಲಕ ಮಕ್ಕಳನ್ನು ಸರಿದಾರಿಗೆ ತರಲು ಬದ್ಧತೆ ತೋರುತ್ತಿದ್ದಾರೆ. ಮಕ್ಕಳೇ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಅಕೌಂಟ್‌ ತೆಗೆದು ತಮ್ಮ ಶಿಕ್ಷಕರೂ ಸೇರಿದಂತೆ ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದರು. ಕೆಲವರು ಪ್ರತ್ಯೇಕ ಗ್ರೂಪ್‌ಗಳನ್ನೂ ಮಾಡಿಕೊಂಡು ಆಕ್ಷೇಪಾರ್ಹ ಚಿತ್ರಗಳು ಹಾಗೂ ಚಾಟ್‌ಗಳನ್ನು ಶೇರ್ ಮಾಡುತ್ತಿದ್ದರು. ಚಿಕ್ಕವಯಸ್ಸಿನಲ್ಲಿಯೇ ಮಕ್ಕಳು ದಾರಿ ತಪ್ಪುವುದು ಅವರ ಮತ್ತು ಸಮಾಜದ ಭವಿಷ್ಯಕ್ಕೆ ಮಾರಕ ಎಂಬುದನ್ನು ಮನಗಂಡ ಶಿಕ್ಷಕರು, ಪೋಷಕರನ್ನು ಕರೆದು ಮಾತನಾಡಲು ಆರಂಭಿಸಿದ್ದಾರೆ. ಅದರ ಮುಂದಿನ ಬೆಳವಣಿಗೆ ಎಂಬಂತೆ ಪೋಷಕರಿಂದ ಲಿಖಿತ ಆಶ್ವಾಸನೆ ಪಡೆದುಕೊಳ್ಳಲಾಗುತ್ತಿದೆ.

ಇತ್ತೀಚೆಗಷ್ಟೇ ಕೆಲ ವಿದ್ಯಾರ್ಥಿಗಳ ಶಾಲಾ ಬ್ಯಾಗ್‌ಗಳಲ್ಲಿ ಕಾಂಡೋಮ್ ಸೇರಿದಂತೆ ಇನ್ನಿತರ ವಸ್ತುಗಳು ಸಿಕ್ಕಿದ್ದು, ಪೋಷಕರು ಸೇರಿದಂತೆ ಶಿಕ್ಷಕರ ಕಳವಳಕ್ಕೆ ಕಾರಣವಾಗಿತ್ತು. ಸೋಷಿಯಲ್ ಮೀಡಿಯಾ ಖಾತೆಗಳನ್ನು ಡಿಆ್ಯಕ್ಟಿವೇಟ್ ಮಾಡಬೇಕು ಎಂದೂ ಹಲವು ಶಾಲೆಗಳು ಪೋಷಕರಿಗೆ ಇಮೇಲ್, ವಾಟ್ಸಾಪ್ ಮೆಸೇಜ್ ಕಳಿಸಿವೆ. ಮಕ್ಕಳಿಂದ ಮೊಬೈಲ್ ದೂರ ಇರಿಸಿ, ಮಾತನಾಡುವ ಅಗತ್ಯ ಇದ್ದರೆ ಮಾತ್ರ ಬೇಸಿಕ್ ಸೆಟ್ ಫೋನ್ ಕೊಡಿ ಎಂದು ಕೆಲವು ಶಾಲೆಗಳು ಸಲಹೆ ನೀಡಿವೆ. ಶಾಲೆಗೆ ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್ ತರುವುದನ್ನು ಈಗಾಗಲೇ ಹಲವು ಶಾಲೆಗಳ ಆಡಳಿತ ಮಂಡಳಿ ನಿಷೇಧಿಸಿವೆ. ಅನಿವಾರ್ಯ ಸಂದರ್ಭಗಳಲ್ಲಿ ಮಕ್ಕಳಿಗೆ ಫೋನ್ ಕಳಿಸುವಂತಿದ್ದರೆ ಅದನ್ನು ಶಿಕ್ಷಕರ ಗಮನಕ್ಕೆ ತರುವುದು ಕಡ್ಡಾಯ ಎಂದು ಸೂಚಿಸಲಾಗಿದೆ. ಈ ನಡುವೆ ರಾಜ್ಯದ ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆ ಕುರಿತು ಜಾಗೃತಿ ಮೂಡಿಸುವ, ಅಪಾಯಗಳನ್ನು ಮನವರಿಕೆ ಮಾಡಿಕೊಡುವ ತರಗತಿಗಳೂ ಆರಂಭವಾಗಿವೆ.

suddiyaana