ಪಾಕಿಸ್ತಾನದಲ್ಲಿ ನೀರಿಗಾಗಿ ಪ್ರತಿಭಟನೆ – ಇಬ್ಬರು ಸಾ*ವು, ಸಚಿವರ ಮನೆಗೆ ಬೆ*ಕಿ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸೇನಾ ಬೆಂಬಲಿತ ಸಿಂಧೂ ಕಾಲುವೆ ಯೋಜನೆಯನ್ನು ವಿರೋಧಿಸಿ ಪ್ರತಿಭಟನಾಕಾರರು ಬೀದಿಗಿಳಿದಿದ್ದರಿಂದ ಉದ್ವಿಗ್ನತೆ ಹೆಚ್ಚಾಗಿದೆ. ಈ ಯೋಜನೆಯ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಇದರಿಂದ ಕೋಪಗೊಂಡ ಪ್ರತಿಭಟನಾಕಾರರು ಹಿಂಸಾತ್ಮಕ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದು, ಪಾಕಿಸ್ತಾನದ ಸಿಂಧ್ನ ಗೃಹ ಸಚಿವ ಜಿಯಾ-ಉಲ್-ಹಸನ್ ಲಂಜಾರ್ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ.ಸಿಂಧಿ ರಾಷ್ಟ್ರೀಯತಾವಾದಿ ಪಕ್ಷವಾದ ಜೈ ಸಿಂಧ್ ಮುತ್ತಹಿದಾ ಮಹಾಜ್ ನ ಕಾರ್ಯಕರ್ತ ಜಾಹಿದ್ ಲಘರಿ ಅವರನ್ನು ಪೊಲೀಸರು ಗುಂಡಿಕ್ಕಿ ಕೊಂದರು. ಇದರಿಂದ ಉತ್ತರ ಸಿಂಧ್ನ ನೌಶಾಹ್ರೋ ಫಿರೋಜ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಹಿಂಸಾತ್ಮಕವಾಗಿ ವರ್ತಿಸಿದ್ದಾರೆ.
ಪಾಕಿಸ್ತಾನದ ಪಂಜಾಬ್ಗೆ ನೀರು ಸರಬರಾಜು ಹೆಚ್ಚಿಸಲು ಸಿಂಧೂ ನದಿಯಿಂದ ನೀರನ್ನು ಬೇರೆಡೆಗೆ ತಿರುಗಿಸಲು ಸರ್ಕಾರ ಕಾಲುವೆ ನಿರ್ಮಿಸಲು ಯೋಜಿಸುತ್ತಿದೆ. ಆದರೆ ಸಿಂಧ್ನ ಸ್ಥಳೀಯರು ಈ ಯೋಜನೆಯು ತಮ್ಮ ಕೃಷಿಭೂಮಿ ಮತ್ತು ನೀರಿನ ಮೂಲಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಈ ಯೋಜನೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಅವರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.