ಪಾಕ್ ‘ಉಗ್ರ ಮುಖ’ ಬಯಲಿಗೆ ಭಾರತ ಪಣ – ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗ ಶೀಘ್ರದಲ್ಲೇ ವಿದೇಶಕ್ಕೆ!

ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಭಾರತ ರಾಜತಾಂತ್ರಿಕ ಅಭಿಯಾನ ನಡೆಸಲು ನಿರ್ಧರಿಸಿದೆ. ವಿಶ್ವ ವೇದಿಕೆಯಲ್ಲಿ ಉಗ್ರವಾದದ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸರ್ವಪಕ್ಷ ನಿಯೋಗವನ್ನು ಶನಿವಾರ ರಚಿಸಿದೆ. ಅದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳ 7 ಸಂಸದರ ನಿಯೋಗವನ್ನ ರಚಿಸಿದೆ.
ಇದನ್ನೂ ಓದಿ; ಅತ್ತೆಗೆ ಚಳಿ ಬಿಡಿಸಿದ ಗುಂಡಮ್ಮ! -ಜಿಮ್ ಸೀನಾಗೆ ರಶ್ಮಿ ಮೇಲೆ ಲವ್?
ಕಳೆದ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತ ʻಆಪರೇಷನ್ ಸಿಂಧೂರʼದ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಇದೀಗ ಪಾಕಿಸ್ತಾನದ ಮುಖವಾಡವನ್ನ ಇಡೀ ವಿಶ್ವದ ಮುಂದೆ ಬಿಚ್ಚಿಡಲು ಭಾರತ ಸಜ್ಜಾಗಿದ್ದು, 7 ಸಂಸದರ ನಿಯೋಗದ ಪಟ್ಟಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೆಸರನ್ನೂ ಕೇಂದ್ರ ಸರ್ಕಾರ ಸೇರಿಸಿದೆ. ವಿಶೇಷವೆಂದರೆ ಕಾಂಗ್ರೆಸ್‌ನಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾದ ಪಟ್ಟಿಯಲ್ಲಿ 4 ಹೆಸರುಗಳ ಪೈಕಿ ಶಶಿ ತರೂರ್ ಅವರ ಹೆಸರೇ ಇಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ.
ಆಪರೇಷನ್ ಸಿಂಧೂರದ ಬಳಿಕ ಶಶಿ ತರೂರ್ ಅವರು ಪ್ರಧಾನಿ ಮೋದಿ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದರು. ಇದರಿಂದ ʻಲಕ್ಷ್ಮಣ ರೇಖೆʼ ಮೀರಿದ್ದಾರೆ ಎಂದು ಕಾಂಗ್ರೆಸ್‌ನಿಂದಲೇ ಟೀಕೆಗೆ ಒಳಗಾಗಿದ್ದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮೇ 16ರಂದು ನಿಯೋಗಕ್ಕೆ 4 ಸಂಸದರ ಹೆಸರು ಶಿಫಾರಸು ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೋರಿದ್ದರು. ಅದರಂತೆಯೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸೂಚನೆಯಂತೆ ಆನಂದ ಶರ್ಮಾ, ಗೌರವ್ ಗೊಗೊಯಿ, ಡಾ. ಸಯದ್ ನಾಸೀರ್ ಹುಸೇನ್ ಮತ್ತು ರಾಜ್ ಬ್ರಾರ್ ಅವರ ಹೆಸರುಗಳನ್ನು ಶಿಫಾರಸು ಮಾಡಿ ಶುಕ್ರವಾರ ಸಂಜೆಯೇ ಪಟ್ಟಿ ಕಳುಹಿಸಲಾಗಿದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ತಿರುವನಂತಪುರದ ಸಂಸದ ಕಾಂಗ್ರೆಸ್‌ನ ಶಶಿ ತರೂರ್ ಹೆಸರು ಮೊದಲನೆಯದ್ದಾಗಿದೆ. ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಮತ್ತು ಬೈಜಯಂತ್ ಪಾಂಡಾ, ಜೆಡಿಯು ಸಂಸದ ಸಂಜಯ್ ಜಾ, ಡಿಎಂಕೆ ಸಂಸದೆ ಕನಿಮೋಳಿ, ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ, ಶಿವಸೇನಾ ಸಂಸದ ಶ್ರೀಕಾಂತ್ ಶಿಂದೆ ಅವರ ಹೆಸರುಗಳಿವೆ.