ಚಿನ್ನಸ್ವಾಮಿಯಲ್ಲಿ 10 ವರ್ಷಗಳಿಂದ ಕೊಲ್ಕತ್ತಾ ಸೋತೇ ಇಲ್ಲ – ಸೇಡು ತೀರಿಸಿಕೊಳ್ಳುತ್ತಾ ಆರ್ ಸಿಬಿ?

ಎಲ್ಲಾ ಟೀಮ್ಗಳಿಗೂ ಹೋಂ ಟೀಂ ಅಡ್ವಾಂಟೇಜ್ ಆದ್ರೆ ಆರ್ಸಿಬಿಗೆ ಮಾತ್ರ ತವರು ಮೈದಾನವೇ ವಿಲನ್ ಆಗಿದೆ. ಯಾಕಂದ್ರೆ ಚಿನ್ನಸ್ವಾಮಿಯಲ್ಲಿ ರೆಡ್ ಆರ್ಮಿ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಅವೇ ಪಿಚ್ನಲ್ಲಿ ಈ ಸಲ ರಾಜನಂತೆ ಮೆರೆದಿರೋ ಆರ್‌ಸಿಬಿ ತವರಿನಲ್ಲಿ ಐದು ಮ್ಯಾಚ್ ಆಡಿದ್ದು ಅದ್ರಲ್ಲಿ ಮೂರು ಪಂದ್ಯಗಳನ್ನ ಸೋತಿದೆ. ಅದೂ ಕೂಡ ಹ್ಯಾಟ್ರಿಕ್ ಸೋಲು. ಈಗ ಕೆಕೆಆರ್ ವಿರುದ್ಧ ತವರಿನಲ್ಲಿ 6ನೇ ಪಂದ್ಯಕ್ಕೆ ರೆಡಿಯಾಗಿದೆ. ವಿಷ್ಯ ಅಂದ್ರೆ ಕೆಕೆಆರ್ ಪಾಲಿಗೆ ಚಿನ್ನಸ್ವಾಮಿ ಮೈದಾನ ಅದೃಷ್ಟದ ಮೈದಾನವಾಗಿದೆ. ದಶಕದಿಂದ್ಲೂ ಇಲ್ಲಿ ಕೊಲ್ಕತ್ತಾದೇ ಪಾರುಪತ್ಯ.
ಇದನ್ನೂ ಓದಿ : RCB Vs KKR.. ಪ್ಲೇಯಿಂಗ್ 11 ರೆಡಿ – ರೆಡ್ ಆರ್ಮಿ ಪ್ಲಸ್ & ಮೈನಸ್ ಏನು?
ಶಾಕಿಂಗ್ ಅನ್ಸಿದ್ರೂ ಇದೇ ಸತ್ಯ. ಚಿನ್ನಸ್ವಾಮಿ ಮೈದಾನ ಕೆಕೆಆರ್ಗೆ ಹೋಂ ಟೀಮ್ಗಿಂತ್ಲೂ ಹೆಚ್ಚಾಗಿದೆ. ಅದೃಷ್ಟದ ಮೈದಾನದಂತಾಗಿದೆ. ಯಾಕಂದ್ರೆ 2015ರ ಬಳಿಕ ಕೆಕೆಆರ್ ಟೀಂ ಚಿನ್ನಸ್ವಾಮಿಯಲ್ಲಿ ಸೋತಿದ್ದೇ ಇಲ್ಲ. ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಕೆಕೆಆರ್ ಇದುವರೆಗೂ 11 ಪಂದ್ಯಗಳನ್ನ ಆಡಿದೆ. ಅದರಲ್ಲಿ 7 ಪಂದ್ಯಗಳನ್ನ ಕೆಕೆಆರ್ ತಂಡವೇ ಗೆದ್ದುಕೊಂಡಿದೆ. ಆರ್‌ಸಿಬಿ ಕೊನೆಯದಾಗಿ ಇಲ್ಲಿ ಗೆದ್ದಿದ್ದು 2015ರಲ್ಲಿ. ಆವತ್ತಿನ ಮ್ಯಾಚಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿದ್ರು. ಕೆಕೆಆರ್ ವಿರುದ್ಧ ಏಳು ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಆದ್ರೆ ಆ ಗೆಲುವಿನ ನಂತರ ನಮ್ಮ ಆರ್‌ಸಿಬಿ ತಂಡಕ್ಕೆ ತವರಿನಲ್ಲೇ ಕೆಕೆಆರ್ ಟೀಂ ಸೋಲಿಸೋಕೆ ಸಾಧ್ಯವಾಗಿಲ್ಲ. ಕೆಕೆಆರ್ ಈ ಮೈದಾನವನ್ನ ತಮ್ಮ ಭದ್ರಕೋಟೆಯಂತೆ ಮಾಡ್ಕೊಂಡಿದೆ.
ಬೆಂಗಳೂರು ಮತ್ತು ಕೋಲ್ಕತ್ತಾ ತಂಡಗಳು ಇದುವರೆಗೆ 35 ಐಪಿಎಲ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಆರ್‌ಸಿಬಿ ವಿರುದ್ಧ 20 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ರಾಯಲ್ ಚಾಲೆಂಜರ್ಸ್ ತಂಡವು ಇದುವರೆಗೆ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡೂ ತಂಡಗಳು ಕೊನೇದಾಗಿ ಇದೇ ಸೀಸನ್ನ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಿದ್ವು. ಕಳೆದ ಐದು ಪಂದ್ಯಗಳ ರಿಸಲ್ಟ್ ನೋಡಿದ್ರೆ ಕೆಕೆಆರ್ ತಂಡವೇ ಮೇಲುಗೈ ಸಾಧಿಸಿದೆ. ಇನ್ನು ಆರ್ಸಿಬಿಯಲ್ಲಿ ಚೇಸಿಂಗ್ ಮಾಡಿದ ತಂಡವೇ ಹೆಚ್ಚು ಸಲ ಗೆಲುವು ಸಾಧಿಸಿದೆ. ಬೆಂಗಳೂರಲ್ಲಿ ಒಟ್ಟು 100 ಪಂದ್ಯಗಳು ನಡೆದಿದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡ 43 ಸಲ ಗೆದ್ದಿದ್ರೆ ಚೇಸಿಂಗ್ ಮಾಡಿದ ಟೀಂ 52 ಬಾರಿ ಗೆಲುವು ಸಾಧಿಸಿದೆ. 4 ಪಂದ್ಯಗಳಿಗೆ ಯಾವುದೇ ರಿಸಲ್ಟ್ ಬಂದಿಲ್ಲ. ಒಂದು ಮ್ಯಾಚ್ ಟೈ ಆಗಿದೆ. ಚಿನ್ನಸ್ವಾಮಿಯಲ್ಲಿ ಹೈಯೆಸ್ಟ್ ಸ್ಕೋರ್ ಅಂದ್ರೆ 287. ಐಪಿಎಲ್ ಇತಿಹಾಸದಲ್ಲಿ ಇದೇ ಹೈಯೆಸ್ಟ್ ಸ್ಕೋರ್ ಕೂಡ ಆಗಿದೆ.
ಇನ್ನು ಈ ಮ್ಯಾಚಲ್ಲಿ ಕೊಹ್ಲಿ ವರ್ಸಸ್ ನರೈನ್ ಹಾಗೇ ರಿಂಕು ಸಿಂಗ್ ವರ್ಸಸ್ ಯಶ್ ದಯಾಳ್ ಫೈಟ್ ನೋಡೋದೇ ಮಜಾ ಇದೆ. ವಿರಾಟ್ ಕೊಹ್ಲಿ ಸ್ಪಿನ್ನರ್ಸ್ ಮುಂದೆ ಕೊಂಚ ಸ್ಟ್ರಗಲ್ ಅನುಭವಿಸ್ತಾರೆ. ಅದ್ರಲ್ಲೂ ಸುನಿಲ್ ನರೈನ್ ಮುಂದೆ ನಾಲ್ಕು ಬಾರಿ ಔಟ್ ಆಗಿದ್ದಾರೆ. ನರೈನ್ ಬೌಲಿಂಗ್ನಲ್ಲಿ ವಿರಾಟ್ ಕೊಹ್ಲಿ 129 ಎಸೆತಗಳಲ್ಲಿ 105.42 ಸ್ಟ್ರೈಕ್ ರೇಟ್‌ನಲ್ಲಿ 136 ರನ್ ಗಳಿಸಿದ್ದಾರೆ. ಹಾಗೇ ಈ ಪಂದ್ಯದಲ್ಲೂ ಇಬ್ಬರ ನಡುವೆ ಬೆಸ್ಟ್ ಫೈಟ್ ಇರಲಿದೆ. ಮತ್ತೊಂದೆಡೆ ರಿಂಕು ಸಿಂಗ್ ಹಾಗೇ ಯಶ್ ದಯಾಳ್ ಫೈಟ್ ಕೈಡ ಹೈಲೆಟ್ ಆಗಲಿದೆ. ರಿಂಕು ಸಿಂಗ್ ಯಶ್ ದಯಾಳ್ ಬೌಲಿಂಗ್ನಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನ ಸಿಡಿಸಿ ಸದ್ದು ಮಾಡಿದ್ರು. ಆ ಬಳಿಕ ಇಬ್ರೂ ಸಾಕಷ್ಟು ಏರಿಳಿತ ಕಂಡಿದ್ದು ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ. ಹೀಗಾಗಿ ದಯಾಳ್ ರಿಂಕುರನ್ನ ಔಟ್ ಮಾಡಿ ಸೇಡು ತೀರಿಸಿಕೊಳ್ಳೋ ತವಕದಲ್ಲಿದ್ದಾರೆ.