Ro- Ko ಸ್ಥಾನ ತುಂಬ್ತಾರಾ ಕನ್ನಡಿಗರು? ರಾಹುಲ್, ಕರುಣ್ ಯಾರಿಗೆ ಚಾನ್ಸ್?
ಇಂಗ್ಲೆಂಡ್ ಟೆಸ್ಟ್, ಪಡಿಕ್ಕಲ್ಗೆ ಅದೃಷ್ಟನಾ?

Ro- Ko ಸ್ಥಾನ ತುಂಬ್ತಾರಾ ಕನ್ನಡಿಗರು? ರಾಹುಲ್, ಕರುಣ್ ಯಾರಿಗೆ ಚಾನ್ಸ್?ಇಂಗ್ಲೆಂಡ್ ಟೆಸ್ಟ್, ಪಡಿಕ್ಕಲ್ಗೆ ಅದೃಷ್ಟನಾ?

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ ಗುಡ್‌ಬಾಯ್ ಹೇಳಿದ್ದಾರೆ. ಇವರಿಲ್ಲದೇ ಇದೇ ಫಸ್ಟ್ ವಿದೇಶಿ ಪ್ರವಾಸ ಮಾಡುತ್ತಿದ್ದು, ಯುವ ಆಟಗಾರರ ಮೇಲೆ ಒತ್ತಡ ಹೆಚ್ಚಿದೆ. ಜೊತೆ ಒಳ್ಳೆಯ ಅವಕಾಶ ಕೂಡ ಉಂಟು. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ತಂಡದಲ್ಲಿ ಸ್ಥಾನವನ್ನು ಭಧ್ರ ಪಡಿಸಿಕೊಳ್ಳಲು ಯುವ ಆಟಗಾರರಿಗೆ ಇದು ಒಳ್ಳೆಯ ಅವಕಾಶ. ಹೀಗಾಗಿ ಒಂದು ಚಾನ್ಸ್‌ಗಾಗಿ ಯುವ ಆಟಗಾರರು ಕಾಯುತ್ತಿದ್ದಾರೆ. ಇದ್ರಲ್ಲಿ ನಮ್ಮ ಕನ್ನಡಿಗರೇ ನಾಲ್ಕು ಜನ ಇದ್ದಾರೆ.

ರೋಹಿತ್ ಶರ್ಮಾ ಸ್ಥಾನಕ್ಕೆ ಕೆ.ಎಲ್‌ ರಾಹುಲ್

ಇಂಗ್ಲೆಂಡ್‌ ಫ್ಲೈಟ್‌ ಏರುವ ಕನಸಿನಲ್ಲಿರುವ ಕರ್ನಾಟಕದ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್ ಮುಂಚೂಣಿಯಲ್ಲಿದ್ದಾರೆ. ಸದ್ಯ ಭಾರತ ತಂಡದಲ್ಲಿ ಇರುವ ಹೆಚ್ಚು ಅನುಭವಿ ಬ್ಯಾಟರ್‌ನೆಂದರೆ ಅದು ಕನ್ನಡಿಗ ಕೆ.ಎಲ್. ರಾಹುಲ್. ಯಾವುದೇ ಬ್ಯಾಟಿಂಗ್‌ ಕ್ರಮಾಂಕದಲ್ಲಿಯೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯ ಇವರಲ್ಲಿದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇವರು ಯಶಸ್ವಿ ಜೈಸ್ವಾಲ್ ಜತೆಗೆ ಇನಿಂಗ್ಸ್‌ ಆರಂಭಿಸಿದ್ದರು. ಹೀಗಾಗಿ ರೋಹಿತ್‌ ಅವರಿಂದ ತೆರವಾದ ಆರಂಭಿಕ ಸ್ಥಾನವನ್ನು ರಾಹುಲ್‌ ನಿಭಾಯಿಸುವ ಸಾಧ್ಯತೆ ಇದೆ. ಇವರು ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ ಎಂದು ಹೇಳಲಾಗುತ್ತದೆ. ಅಲ್ಲದೆ ಇವರು ಟೀಮ್ ಇಂಡಿಯಾದ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದಾರೆ. ವಿದೇಶದಲ್ಲಿ ಇವರ ಅಂಕಿ ಅಂಶಗಳನ್ನು ನೋಡಿದರೆ ಇವರಿಗೆ ಕ್ಯಾಪ್ಟನ್ಸಿ ಸಿಗುವ ಸಾಧ್ಯತೆ ಇದೆ.

ಸಾಯಿ ಸುದರ್ಶನ್‌ಗೆ ಸಿಗುತ್ತಾ ಚಾನ್ಸ್‌?

ರಾಹುಲ್‌ಗೆ ಎಡಗೈ ಬ್ಯಾಟರ್ ಬಿ. ಸಾಯಿಸುದರ್ಶನ್ ಕೂಡ ಪೈಪೋಟಿ ನೀಡುವ ಸಾಧ್ಯತೆಯೂ ಇದೆ. ಈ ಬಾರಿಯ ಐಪಿಎಲ್‌ನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಸಾಯಿಸುದರ್ಶನ್ ಉತ್ತಮ ರನ್‌ ಕಲೆ ಹಾಕಿದ್ದಾರೆ. ಮಾಜಿ ಕೋಚ್‌ ರವಿಶಾಸ್ತ್ರಿ, ಸುನೀಲ್‌ ಗವಾಸ್ಕರ್‌ ಸೇರಿ ಅನೇಕ ಮಾಜಿ ಆಟಗಾರರು ಸಾಯಿಸುದರ್ಶನ್‌ಗೆ ಟೆಸ್ಟ್‌ನಲ್ಲಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಹೀಗಾಗಿ ಅವರು ಕೂಡ ಆರಂಭಿಕ ಸ್ಥಾನದ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಪಡಿಕ್ಕಲ್‌ಗೂ ಹುಡುಕಿ ಬರುತ್ತಾ ಅದೃಷ್ಟ?

ಇಂಗ್ಲೆಂಡ್ ಪ್ರವಾಸ ಬೆಳೆಸಲು ದೇವದತ್ ಪಡಿಕ್ಕಲ್ ಸಹ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ಅವರು ಗಾಯಕ್ಕೆ ತುತ್ತಾಗಿದ್ದರಿಂದ ಇವರ ಫಿಟ್ನೆಸ್‌ ಬಗ್ಗೆಯೂ ಯೋಚಿಸಿ ಆಯ್ಕೆ ಸಮಿತಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

ಕೊಹ್ಲಿ ಸ್ಥಾನದಲ್ಲಿ ಕರುಣ್‌ ನಾಯರ್‌?

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೊಬ್ಬ ಬ್ಯಾಟರ್‌ ಕರುಣ್‌ ನಾಯರ್. ಸುಮಾರು ಏಳು ವರ್ಷಗಳ ಬಳಿಕ ಟೀಮ್ ಇಂಡಿಯಾಕ್ಕೆ ಕಮ್‌ ಬ್ಯಾಕ್‌ ಮಾಡಲು ಕರುಣ್ ನಾಯರ್‌ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕರುಣ್ ನಾಯರ್ ದೇಶೀಯ ಟೂರ್ನಿಯಲ್ಲಿ ಅಬ್ಬರ ನಡೆಸಿದ್ದಾರೆ. ವಿಜಯ್ ಹಜಾರೆ ಹಾಗೂ ರಣಜಿ ಟ್ರೋಫಿಯಲ್ಲಿ ಕರುಣ್‌ ನಾಯರ್‌ ರನ್‌ ಹೊಳೆ ಹರಿಸಿದ್ದಾರೆ. ಇವರು ಕೂಡ 3 ಅಥವಾ 4ನೇ ಕ್ರಮಾಂಕದಲ್ಲಿ ಆಡಲು ಸೂಕ್ತ ಬ್ಯಾಟರ್ ಆಗಿದ್ದಾರೆ. ಹೀಗಾಗಿ ಕೊಹ್ಲಿಯ ಸ್ಥಾನಕ್ಕೆ ಇವರು ಸೂಕ್ತ ಆಟಗಾರನಾಗಬಲ್ಲರು. 2016ರಲ್ಲಿ ಕರುಣ್‌ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ತ್ರಿಶತಕ ಗಳಿಸಿದ್ದರು. ಆದರೆ 2017ರ ನಂತರ ಅವರಿಗೆ ಮತ್ತೆ ಟೆಸ್ಟ್‌ ತಂಡದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಹೀಗಾಗಿ ಇವರಿಗೆ ಚಾನ್ಸ್ ಸಿಗೋ ಅವಕಾಶವಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಪ್ರಸಿದ್ಧ್ ಕೃಷ್ಣಾ ಸಹ ಈ ಲೀಸ್ಟ್‌ನಲ್ಲಿದ್ದಾರೆ.  ಇವರು ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು ಗರಿಷ್ಠ ವಿಕೆಟ್‌ ಪಡೆದ ಆಟಗಾರರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇವರಿಗೂ ಇಂಗ್ಲೆಂಡ್‌ ಪ್ರವಾಸದ ವೇಳೆ ತಂಡದಲ್ಲಿ ಸ್ಥಾನ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದ್ದು, ಯಾವೆಲ್ಲಾ ಕನ್ನಡಿಗರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Kishor KV

Leave a Reply

Your email address will not be published. Required fields are marked *