ವಿರಾಟ್ ಟೆಸ್ಟ್ ಕ್ರಿಕೆಟ್ ಯುಗಾಂತ್ಯ – ನಿವೃತ್ತಿ ಪೋಸ್ಟ್.. ಭಾವುಕರಾಗಿದ್ದೇಕೆ?
RO ಬೆನ್ನಲ್ಲೇ ವಿದಾಯ.. ಕಾರಣ ಏನು?

ಯಶಸ್ಸಿನ ಉತ್ತುಂಗದಲ್ಲಿ ಇರುವಾಗ್ಲೇ ನೇಪಥ್ಯಕ್ಕೆ ಸರಿದುಬಿಡಬೇಕು ಎನ್ನುವ ಮಾತಿನಂತೆಯೇ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕೊನೆಗೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈಗಾಗ್ಲೇ ಟಿ-20 ಮಾದರಿಗೆ ಗುಡ್ ಬೈ ಹೇಳಿದ್ದ ವಿರಾಟ್ ಇದೀಗ ರೋಹಿತ್ ಶರ್ಮಾ ವಿದಾಯದ ಬೆನ್ನಲ್ಲೇ ತಾವೂ ರೆಡ್ ಬಾಲ್ ಕ್ರಿಕೆಟ್ನಿಂದ ಹಿಂದೆ ಸರಿದಿದ್ದಾರೆ.
ಇದನ್ನೂ ಓದಿ : 18ನೇ ಸೀಸನ್ RCBಗೆ ಸ್ಪೆಷಲ್ – ಕೊಹ್ಲಿ, ಶೆಫರ್ಡ್, ಡೇವಿಡ್ ಸುನಾಮಿ
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಮ್ಮ ನಿವೃತ್ತಿ ಬಗ್ಗೆ ಭಾವನಾತ್ಮಕವಾದ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಕಿಂಗ್ ಕೊಹ್ಲಿಯ 14 ವರ್ಷದ ಟೆಸ್ಟ್ ಕೆರಿಯರ್ ಅಂತ್ಯಗೊಂಡಂತಾಗಿದೆ. ತಮ್ಮ ನಿವೃತ್ತಿ ಬಗ್ಗೆ ಸುದೀರ್ಘವಾಗಿ ಬರೆದಿರೋ ಕೊಹ್ಲಿ ‘ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ನೀಲಿ ಜೆರ್ಸಿ ಹಾಕಿ 14 ವರ್ಷಗಳಾಗಿವೆ. ಈ ಪಯಣ ಹೀಗೆ ಇರುತ್ತೆ ಅಂತ ನಾನು ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿ, ರೂಪಿಸಿ, ಜೀವನ ಪಾಠ ಕಲಿಸಿದೆ… ನನ್ನ ಟೆಸ್ಟ್ ಜೀವನವನ್ನು ಯಾವಾಗಲೂ ಸಂತೋಷದಿಂದ ನೋಡುತ್ತೇನೆ ಎಂದು ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ಬರೆದಿರೋ ದಾಖಲೆಗಳು ಅದೆಷ್ಟೋ. ಹಾಗೇ ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಕಂಪ್ಲೀಟ್ ಮಾಡುವ ಹೊಸ್ತಿಲಲ್ಲಿದ್ರು. ಇದನ್ನು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಂಪ್ಲೀಟ್ ಮಾಡ್ತಾರೆ ಅಂತಾನೇ ಅನ್ಕೊಳ್ತಿದ್ರು. 10 ಸಾವಿರ ರನ್ಗಳ ಮೈಲುಗಲ್ಲು ತಲುಪೋಕೆ 770 ರನ್ಗಳ ಅಗತ್ಯ ಅಷ್ಟೇ ಇತ್ತು. ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಲ್ಲಿ 10 ಇನ್ನಿಂಗ್ಸ್ ಸಿಗುತ್ತಿತ್ತು, ಇದಕ್ಕಾಗಿ ಅವರು 770 ರನ್ ಗಳಿಸಬೇಕಿತ್ತು. ಇತ್ತೀಚೆಗಷ್ಟೇ ಬ್ರಿಯಾನ್ ಲಾರಾರಂಥ ಲೆಜೆಂಡರಿ ಕ್ರಿಕೆಟರ್ ಕೂಡ ಟೆಸ್ಟ್ಗೆ ವಿದಾಯ ಘೋಷಿಸಬೇಡಿ ಅಂತಾ ಮನವಿ ಮಾಡಿದ್ರು. ಟೆಸ್ಟ್ ಕ್ರಿಕೆಟ್‌ಗೆ ನಿಮ್ಮ ಅಗತ್ಯ ಇದೆ. ನಿಮ್ಮ ನಿರ್ಧಾರದಿಂದ ಹೊರ ಬನ್ನಿ ಎಂದು ಸಲಹೆ ನೀಡಿದ್ರು. ಆದ್ರೆ ವಿರಾಟ್ ಕೊನೆಗೂ ತಾವು ಅಂದುಕೊಂಡಂತೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ರು. ಅಲ್ಲಿಂದ ಈವರೆಗೂ ಅಂದ್ರೆ ಒಂದು ದಶಕದ ಕಾಲ ತಂಡದ ಬ್ಯಾಟಿಂಗ್ ಆಧಾರ ಸ್ತಂಭವಾಗಿದ್ದರು. ನಂತರ ತಂಡದ ನಾಯಕತ್ವ ವಹಿಸಿಕೊಂಡರು. ಕೊಹ್ಲಿ ನಾಯಕತ್ವದಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಉತ್ತುಂಗಕ್ಕೇರಿತ್ತು. 2018-19ರಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದಿತು. ಕೊಹ್ಲಿ ನಾಯಕತ್ವದಲ್ಲಿ ಭಾರತ ICC ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿತು. ಕೊಹ್ಲಿ ನಾಯಕತ್ವದಲ್ಲಿ ಭಾರತ 68 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 40 ಪಂದ್ಯಗಳಲ್ಲಿ ಗೆದ್ದಿದೆ. 17 ಪಂದ್ಯಗಳನ್ನ ಸೋತಿದ್ದಾರೆ. ಇನ್ನು 11 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ವು. ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಈವರೆಗೂ 123 ಪಂದ್ಯಗಳನ್ನು ಆಡಿದ್ದು 210 ಇನ್ನಿಂಗ್ಸ್‌ಗಳಲ್ಲಿ 9230 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳು ಸೇರಿವೆ. ಇನ್ನು 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಿದರು. ಆ ಸರಣಿಯಲ್ಲಿ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿ ಮಿಂಚಿದ್ದರು. ನಂತರದ ಕೊನೆಯ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಕೇವಲ 85 ರನ್ ಗಳಿಸಿ ಸಾಕಷ್ಟು ಟೀಕೆಗಳನ್ನ ಎದುರಿಸಿದ್ರು.
ಕಳೆದ ವರ್ಷ ಟಿ-20 ವಿಶ್ವಕಪ್ ಗೆದ್ದ ಬಳಿಕ ಟಿ-20 ಫಾರ್ಮೆಟ್ಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿದಾಯ ಘೋಷಿಸಿದ್ರು. ಇದೀಗ ಒಂದು ವಾರದ ಅಂತರದಲ್ಲೇ ಟೆಸ್ಟ್ ಕ್ರಿಕೆಟ್ಗೂ ಗುಡ್ ಬೈ ಹೇಳಿದ್ದಾರೆ. ಇನ್ನೇನಿದ್ರೂ ಈ ಇಬ್ಬರು ಆಟಗಾರರು ಭಾರತದ ಪರ ಏಕದಿನ ಫಾರ್ಮೆಟ್ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರು ಲೆಜೆಂಡರಿ ಪ್ಲೇಯರ್ಗಳ ಯುಗಾಂತ್ಯ ನಿಜಕ್ಕೂ ಇಡೀ ಕ್ರಿಕೆಟ್ ಲೋಕವನ್ನೇ ಶಾಕ್ ಗೊಳಿಸಿದೆ. ಮುಂದಿನ ದಿನಗಳಲ್ಲಿ ರವೀಂದ್ರ ಜಡೇಜಾ ಕೂಡ ಇವ್ರಿಬ್ಬರ ಹಾದಿಯಲ್ಲೇ ರೆಡ್ ಬಾಲ್ ಫಾರ್ಮೆಟ್ಗೆ ಗುಡ್ ಬೈ ಹೇಳೋ ಸಾಧ್ಯತೆ ಇದೆ.