‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಇನ್ನಿಲ್ಲ- ನಗಿಸುತ್ತಲೇ ಬದುಕಿಗೆ ವಿದಾಯ ಹೇಳಿದ ಕಲಾವಿದ

ನಗುವುದು.. ನಗಿಸುವುದು ಕಾಯಕವಾಗಿತ್ತು. ಕಷ್ಟದ ಜೀವನದಲ್ಲೂ ಕೈ ಹಿಡಿದಿದ್ದು ನಗು.. ಹೀಗಾಗಿಯೇ ಏನೋ ಹಾಸ್ಯ ಕಲಾವಿದ. ಕಾಮಿಡಿ ಕಿಲಾಡಿ ಅಂತಾನೇ ಫೇಮಸ್ ಆಗಿದ್ದವರು ರಾಕೇಶ್ ಪೂಜಾರಿ. ಇದೀಗ ನಗುಮೊಗದ ಈ ಯುವ ಕಲಾವಿದ ಬಾರದ ಲೋಕಕ್ಕೆ ತೆರಳಿದ್ದಾರೆ. ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇದನ್ನೂ ಓದಿ:ಯುವನಟ ರಾಕೇಶ್ ಪೂಜಾರಿ ನಿಧನ – ಹೃದಯಾಘಾತದಿಂದ ವಿಧಿವಶ
ರಂಗಭೂಮಿ ಮತ್ತು ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದವರು ರಾಕೇಶ್ ಪೂಜಾರಿ. ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ರಾಕೇಶ್ ಪೂಜಾರಿಗೆ ಹೆಸರು ತಂದುಕೊಟ್ಟಿತ್ತು. ಜೊತೆಗೆ ಕಾಮಿಡಿ ಕಿಲಾಡಿಗಳು ಸೀಸನ್ ಮೂರರ ವಿನ್ನರ್ ಆಗಿದ್ದರು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ರಾಕೇಶ್ ಅವರು ಮೆಹಂದಿ ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಆಗಿದೆ. ಮೇ 12ರಂದು ಸೋಮವಾರ ಮುಂಜಾನೆ 2 ಗಂಟೆ ಸುಮಾರಿಗೆ ಬಾರದ ಲೋಕಕ್ಕೆ ತೆರಳಿದ್ದಾರೆ.
ವಿಶ್ವರೂಪ್ ಎಂದೇ ರಾಕೇಶ್ ಪೂಜಾರಿ ಜನಪ್ರಿಯತೆ ಪಡೆದಿದ್ದರು. ಅವರು ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಇದ್ದರು. ಆದರೆ, ‘ಕಾಮಿಡಿ ಕಿಲಾಡಿಗಳು’ ಶೋ ಇವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಈ ಶೋನ ನಂತರ ಸಿನಿಮಾಗಳಲ್ಲೂ ನಟಿಸಿ ಸೈ ಅನಿಸಿಕೊಂಡಿದ್ದರು. ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲೂ ರಾಕೇಶ್ ಅಭಿನಯಿಸುತ್ತಿದ್ದರು. ಇದೇ ಚಿತ್ರದ ಶೂಟಿಂಗ್ ಮುಗಿಸಿ, ಗೆಳೆಯನ ಮದುವೆಯಲ್ಲಿ ಭಾಗವಹಿಸಿದ್ದರು ರಾಕೇಶ್.
ಭಾನುವಾರ ರಾತ್ರಿ ಗೆಳೆಯನ ಮದುವೆ ಫಂಕ್ಷನ್ ನಲ್ಲಿ ತುಂಬಾ ಹೊತ್ತು ಡ್ಯಾನ್ಸ್ ಮಾಡಿದ್ದರು ರಾಕೇಶ್. ದೇಹಕ್ಕೆ ದಣಿವಾಗಿದ್ದರೂ ಕೂಡಾ ತನ್ನ ಜೊತೆಯಲ್ಲಿದ್ದವರ ಕೋರಿಕೆಯಂತೆ ನಗುತ್ತಲೇ ಕುಣಿಯುತ್ತಾ, ಕಾಮಿಡಿ ಮಾಡುತ್ತಾ ಎಲ್ಲರ ಖುಷಿಗಾಗಿ ಸಮಯ ಕಳೆದಿದ್ದರು. ನಂತರ ತುಂಬಾ ಸುಸ್ತಾಗಿದ್ದರು. ಮಧ್ಯರಾತ್ರಿ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಹೇಳಲಾಗಿದೆ.
ರಾಕೇಶ್ ಪೂಜಾರಿ ಮನೆಗೆ ಆಧಾರಸ್ತಂಭವಾಗಿದ್ದರು. ರಾಕೇಶ್ ತಾಯಿ ಮೊದಲೇ ಗಂಡನನ್ನ ಕಳೆದುಕೊಂಡಿದ್ದರು. ಇವರನ್ನ ಮಗ ರಾಕೇಶ್ ಪೂಜಾರಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕಷ್ಟದಲ್ಲಿದ್ದರೂ ಕೂಡಾ ತಾಯಿ ಮಗ ಒಬ್ಬರಿಗೊಬ್ಬರು ಆಸರೆಯಾಗಿ ಬದುಕುತ್ತಿದ್ದರು. ಇದೀಗ ಮನೆಗಿದ್ದ ಆಧಾರಸ್ತಂಭ ಕುಸಿದು ಬಿದ್ದಿದ್ದೆ. ಮಗನ ಸಾವಿನ ಶೋಕವನ್ನ ತಾಯಿ ಹೃದಯ ಹೇಗೆ ಸಹಿಸಿಕೊಳ್ಳುತ್ತೋ.. ಇದಕ್ಕೆ ಹೇಳೋದು ವಿಧಿ ಬರಹ ತುಂಬಾ ಕ್ರೂರ…