ಬಲೂಚ್ ಉಗ್ರರಿಂದ ಸೇನಾ ವಾಹನದ ಮೇಲೆ ಐಇಡಿ ದಾಳಿ – 12 ಪಾಕ್ ಸೈನಿಕರು ಸಾವು

ಪಹಲ್ಗಾಮ್ ಮೇಲಿನ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತ ಸರ್ಕಾರ ಪಾಕ್ ಮೇಲೆ ಪ್ರತಿಕಾರದ ದಾಳಿ ನಡೆಸುತ್ತಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕ್ ಮೇಲೆ ಭೀಕರ ದಾಳಿ ನಡೆಸಲಾಗಿದ್ದು, ಪಾಕ್ ಹೀನಾಯ ಸ್ಥಿತಿಗೆ ತಲುಪಿದೆ. ಇದೀಗ ಬಲೂಚಿಸ್ತಾನದ ಕಚ್ಚಿ ಜಿಲ್ಲೆಯ ಮಾಚ್ ಪ್ರದೇಶದಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆ ವಾಹನದ ಮೇಲೆ ಬಲೂಚ್ ಲಿಬರೇಶನ್ ಆರ್ಮಿ ಐಇಡಿ ದಾಳಿ ನಡೆಸಿದ್ದು, ಪಾಕ್ ಸೇನೆಯ 12 ಮಂದಿ ಪಾಕ್ ಸೈನಿಕರನ್ನು ಹತ್ಯೆ ಮಾಡಿದೆ.
ಬಲೂಚ್ ಲಿಬರೇಷನ್ ಆರ್ಮಿಯ ಭಯೋತ್ಪಾದಕರು ಪಾಕ್ ಸೇನಾ ವಾಹನವನ್ನು ಗುರಿಯಾಗಿಸಿ ಈ ದಾಳಿ ನಡೆಸಿದ್ದಾರೆ. ಈ ವೇಳೆ ವಿಶೇಷ ಕಾರ್ಯಾಚರಣೆ ಕಮಾಂಡರ್ ತಾರಿಕ್ ಇಮ್ರಾನ್ ಮತ್ತು ಸುಬೇದಾರ್ ಉಮರ್ ಫಾರೂಕ್ ಸೇರಿದಂತೆ ಸೇನಾ ವಾಹನದಲ್ಲಿದ್ದ 12 ಸೈನಿಕರು ಸಾವನ್ನಪ್ಪಿದ್ದಾರೆ.
ಸ್ಫೋಟ ಸಂಭವಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸ್ಫೋಟದ ತೀವ್ರತೆಗೆ ವಾಹನ ಸಮೇತ ಅದರಲ್ಲಿದ್ದ ಸೈನಿಕರ ದೇಹ ಛಿದ್ರ ಛಿದ್ರವಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಪಾಕ್ ಸೇನೆ ಬಲೂಚ್ ಉಗ್ರರನ್ನು ಸದೆಬಡಿಯಲು ಪಣ ತೊಟ್ಟಿದೆ.
ಒಂದು ವಾರದ ಹಿಂದೆಯಷ್ಟೇ ಬಲೂಚಿಸ್ತಾನ ಪ್ರಾಂತ್ಯದ ಕಚ್ ಮತ್ತು ಜಿಯಾರತ್ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳು 10 ಉಗ್ರರನ್ನ ಕೊಂದಿದ್ದವು, ಇದಕ್ಕೆ ಪ್ರತೀಕಾರವಾಗಿ ಬಲೂಚ್ ಉಗ್ರರು ಐಇಡಿ ದಾಳಿ ನಡೆಸಿದ್ದಾರೆ.