ಕೊಹ್ಲಿ Vs ಧೋನಿ.. ಕೊನೆ ಕಾಳಗ? ಚಿನ್ನಸ್ವಾಮಿಯಲ್ಲೇ ಧೋನಿ ನಿವೃತ್ತಿ?
ಸೈಲೆಂಟ್ ಶಾಕ್ ಕೊಡ್ತಾರಾ MSD?

ಚಿನ್ನಸ್ವಾಮಿ ಅಂಗಳದಲ್ಲಿ ನಡೆಯೋ ಇವತ್ತಿನ ಆರ್‌ಸಿಬಿ ಮತ್ತು ಸಿಎಸ್‌ಕೆ ಮ್ಯಾಚ್‌ನಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಇಬ್ಬರೇ. ಅವರೇ ಕಿಂಗ್ ಕೊಹ್ಲಿ ಹಾಗೂ ಕೂಲ್ ಧೋನಿ. ಯಾಕಂದ್ರೆ ಇವರಿಬ್ಬರಿಗೂ ಕೂಡ ಕೋಟಿ ಕೋಟಿ ಫ್ಯಾನ್ಸ್ ಇದ್ದಾರೆ. ಅಲ್ಲದೇ ಬಹುತೇಕ ಇದೇ ಪಂದ್ಯ ಕೊಹ್ಲಿ ಧೋನಿ ಮುಖಾಮುಖಿಯಾಗೋ ಕೊನೆಯ ಪಂದ್ಯವಾಗೋ ಸಾಧ್ಯತೆಯಿದೆ.ಯಾಕಂದ್ರೆ ಧೋನಿ ನಿವೃತ್ತಿಯ ಹಿಂಟ್ ಕೊಟ್ಟಿದ್ದು, ಇಂದಿನ ಪಂದ್ಯವೇ ಚಿನ್ನಸ್ವಾಮಿಯಲ್ಲಿ ಧೋನಿ ಆಡೋ ಕೊನೆಯ ಪಂದ್ಯವಾದ್ರೂ ಅಚ್ಚರಿ ಪಡಬೇಕಿಲ್ಲ.
ಐಪಿಎಲ್‌ನ ಆರಂಭದಿಂದಲೂ ಸಹ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿಯ ಮುಖಾಮುಖಿಯನ್ನ ಅಭಿಮಾನಿಗಳು ಎಂಜಾಯ್ ಮಾಡುತ್ತಲೇ ಬರುತ್ತಿದ್ದಾರೆ. ತಮ್ಮದೇ ಅಭಿಮಾನಿ ಬಳಗವನ್ನ ಹೊಂದಿರುವ ಧೋನಿ ಹಾಗೂ ಕೊಹ್ಲಿ ಐಪಿಎಲ್‌ನ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಇಬ್ಬರು ದಿಗ್ಗಜ ಆಟಗಾರರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ವೃತ್ತಿ ಜೀವನದುದ್ದಕ್ಕೂ ಉತ್ತಮ ಒಡನಾಟ ಹೊಂದಿರುವ ಈ ಜೋಡಿಗೆ ಇಂದಿನ ಪಂದ್ಯ ಮೈದಾನದಲ್ಲಿ ಕೊನೆಯ ಮುಖಾಮುಖಿ ಎಂಬ ಮಾತುಗಳು ಕೇಳಿಬರುತ್ತಿವೆ. ವಿರಾಟ್ ಕೊಹ್ಲಿ ಇನ್ನೂ ಕೆಲ ವರ್ಷಗಳ ಕಾಲ ಕ್ರಿಕೆಟ್ ಆಡಲಿದ್ದಾರೆ. ಆದರೆ 43 ವರ್ಷದ ಮಹೇಂದ್ರ ಸಿಂಗ್ ಧೋನಿಗೆ ಇದು ಕೊನೆಯ ಐಪಿಎಲ್ ಆಗಬಹುದು ಎಂದು ಹೇಳಲಾಗುತ್ತಿರುವುದರಿಂದ ಇಂದಿನ ಪಂದ್ಯವೇ ಉಭಯ ಆಟಗಾರರ ನಡುವಿನ ಕೊನೆಯ ಮುಖಾಮುಖಿಯಾಗಬಹುದು.
ಈ ಬಾರಿಯ ಐಪಿಎಲ್‌ನಲ್ಲಿ ಆಟಗಾರನಾಗಿ ಹಾಗೂ ನಾಯಕನಾಗಿಯೂ ಯಶಸ್ಸು ಕಾಣದ ಧೋನಿ ಐಪಿಎಲ್ ಜರ್ನಿಗೆ ಗುಡ್ ಬೈ ಹೇಳುವ ಸಾಧ್ಯತೆ ದಟ್ಟವಾಗಿದೆ. ಈ ಊಹೆಗಳಿಗೆ ಪೂರಕವೆಂಬಂತೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಟಾಸ್ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಧೋನಿ, “ನಾನು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಬಗ್ಗೆಯೇ ಖಚಿತವಿಲ್ಲ” ಎಂದಿರುವುದು ಅವರ ಮುಂದಿನ ನಡೆಯ ಕುರಿತು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಈ ಆವೃತ್ತಿಯ ಬಳಿಕ ಐಪಿಎಲ್‌ನಿಂದ ಮಾಹಿ ನಿವೃತ್ತಿಯಾದರೆ ಇಂದಿನ ಪಂದ್ಯವೇ ಧೋನಿ ಹಾಗೂ ವಿರಾಟ್ ನಡುವಿನ ಕೊನೆಯ ಮುಖಾಮುಖಿ ಎನಿಸಿಕೊಳ್ಳಲಿದೆ.
ಫ್ಯಾನ್ಸ್ ಗೆ ಇವತ್ತು ಡಬಲ್ ಧಮಾಕ
ಇಂದಿನ ಪಂದ್ಯ CSK vs RCB ನಡುವಿನ ಪಂದ್ಯ ಅನ್ನೋದಕ್ಕಿಂತ ಇದು ಧೋನಿ vs ಕೊಹ್ಲಿ ನಡುವಿನ ಕಾಳಗ ಎಂದೇ ಬಿಂಬಿತವಾಗಿದೆ. ಧೋನಿ-ಕೊಹ್ಲಿ ಎದುರುಬದುರು ಆಗ್ತಿರೋದ್ರ ಕ್ರೇಜ್ ನೆಕ್ಸ್ಟ್ ಲೆವೆಲ್ನಲ್ಲಿದೆ. MS ಧೋನಿ-ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಯಾವತ್ತೇ ಮುಖಾಮುಖಿಯಾದ್ರೂ, ಫ್ಯಾನ್ಸ್ಗೆ ಫುಲ್ ಮೀಲ್ಸ್ ಫಿಕ್ಸ್. ಜಿದ್ದಿಗೆ ಬಿದ್ದವರಂತೆ ಹೋರಾಡೋದ್ರಲ್ಲಿ ಇಬ್ಬರನ್ನ ಮೀರಿಸೋರಿಲ್ಲ. ಬಾಲರ್ಗಳನ್ನು ದಂಡಿಸಿ, ರನ್ ಭರಾಟೆ ನಡೆಸೋದ್ರಲ್ಲಂತೂ ಇಬ್ಬರೂ ನಿಸ್ಸೀಮರು. ಫ್ಯಾನ್ಸ್ ಅಂತದ್ದೇ ಒಂದು ಜಿದ್ದಾಜಿದ್ದಿನ ಕಾಳಗದ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ ಇದು ಧೋನಿಯ ಕೊನೆಯ ಪಂದ್ಯ ಆಗಿರುವ ಸಾಧ್ಯತೆ ಇರೋದ್ರಿಂದ ಫ್ಯಾನ್ಸ್ ಒಂದು ರೀತಿಯಲ್ಲಿ ಡಬಲ್ ಧಮಾಕ ಸಿಗಲಿದೆ.
ಸೈಲೆಂಟ್ ಶಾಕ್ ಕೊಡ್ತಾರಾ ಧೋನಿ..?
ಪ್ಲೇ ಆಫ್ ದೃಷ್ಟಿಯಿಂದ ಇಂದಿನ ಪಂದ್ಯ ಆರ್‌ಸಿಬಿ ಪಾಲಿಗೆ ಮೋಸ್ಟ್ ಇಂಪಾರ್ಟೆಂಟ್. ಪ್ಲೇ ಆಫ್‌ನಿಂದ ಹೊರ ಬಿದ್ದಿರೋ ಚೆನ್ನೈ ಈ ಪಂದ್ಯದಲ್ಲಿ ಕಳೆದುಕೊಳ್ಳೋದು ಏನೋ ಇಲ್ಲ. ಒಂದು ವೇಳೆ ಚೆನ್ನೈ ಗೆದ್ರೆ ಆರ್ಸಿಬಿಗೇ ಡ್ಯಾಮೇಜ್. ಈ ಸೀಸನ್‌ನಲ್ಲಿ ಮಾಹಿಯ ಮೋಡಿ ನಡೆದಿಲ್ಲ ಹಾಗಂತ ಕಡೆಗಣಿಸುವಂತಿಲ್ಲ. ವಿಕೆಟ್ ಹಿಂದೆ ನಿಂತು ಸೈಲೆಂಟಾಗೆ ರಣತಂತ್ರ ರೂಪಿಸೋ ಮಾಹಿ, ಎದುರಾಳಿಗೆ ಶಾಕ್ ಕೊಡೋದ್ರಲ್ಲಿ ಎತ್ತಿದ ಕೈ. ಡೆತ್ ಓವರ್ಗಳಲ್ಲಿ ಬ್ಯಾಟಿಂಗ್ಗಿಳಿದ್ರಂತೂ ಅಬ್ಬರಿಸಿ ಬಿಡ್ತಾರೆ. ಅಲ್ಲದೇ ಈ ಸೀಸನ್‌ನಲ್ಲಿ ನಿವೃತ್ತಿ ನೀಡೋ ಮಾತು ಕೇಳಿ ಬರ್ತಿದ್ದು, ಧೋನಿ ಬ್ಯಾಟ್‌ನಿಂದ ಇವತ್ತು ರನ್ ಮಳೆ ಹರಿಯೋ ಸಾಧ್ಯತೆ ತುಂಬಾಯಿದೆ.. ಹೀಗಾಗಿ ಚಿನ್ನಸ್ವಾಮಿ ಅಂಗಳ ಇವತ್ತು ಒಂದು ರೀತಿ ಬಾವುಕ ಕ್ಷಣಕ್ಕೂ ಸಾಕ್ಷಿ ಆಗಬಹುದು.
ಐಪಿಎಲ್‌ನ ಬದ್ಧವೈರಿಗಳು ಎನಿಸಿರುವ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳು ಒಟ್ಟು 35 ಬಾರಿ ಮುಖಾಮುಖಿಯಾಗಿದ್ದು, ಆ ಪೈಕಿ 22 ಪಂದ್ಯಗಳಲ್ಲಿ ಸಿಎಸ್‌ಕೆ ಗೆಲುವು ಸಾಧಿಸಿದರೆ 12 ಪಂದ್ಯಗಳನ್ನ ಆರ್‌ಸಿಬಿ ಗೆದ್ದಿದೆ. 1 ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ. ಟೂರ್ನಿಯ ಒಟ್ಟಾರೆ ಅಂಕಿ-ಅಂಶಗಳು ಏನೇ ಹೇಳಿದರೂ ಈ ಬಾರಿ ಆಡಿರುವ 10 ರಲ್ಲಿ 7 ಪಂದ್ಯಗಳನ್ನ ಗೆದ್ದು ಉತ್ತಮ ಲಯದಲ್ಲಿರುವ ಆರ್‌ಸಿಬಿ ಗೆಲುವಿನ ಫೇವರೆಟ್ ತಂಡವಾಗಿದೆ. ಮಳೆ ಅಡ್ಡಿಯಾಗದಿದ್ದರೆ ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜ ಆಟಗಾರರನ್ನ ಮೈದಾನದಲ್ಲಿ ಕೊನೆ ಬಾರಿಗೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.