ಕೇದಾರನಾಥ ಯಾತೆ ಆರಂಭ – ಒಂದೇ ದಿನ 30ಸಾವಿರಕ್ಕೂ ಹೆಚ್ಚು ಜನರಿಂದ ಕೇದಾರನಾಥನ ದರ್ಶನ

ಕೇದಾರನಾಥ ಧಾಮದ ಬಾಗಿಲು ತೆರೆದ ಮೊದಲ ದಿನವೇ ದೇವಸ್ಥಾನಕ್ಕೆ 30,000ಕ್ಕೂ ಹೆಚ್ಚು ಭಕ್ತರು ಆಗಮಿಸಿ ದರ್ಶನ ಪಡೆದಿದ್ದಾರೆ. ಮೇ 2ರಂದು ಸಂಜೆ 7 ಗಂಟೆಯ ವೇಳೆಗೆ 19,196 ಪುರುಷರು, 10,597 ಮಹಿಳೆಯರು ಮತ್ತು 361 ತೃತಿಯ ಲಿಂಗಿಗಳು ಕೇದಾರನಾಥಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಭಾರತ ಪ್ರತಿಕಾರದ ಭಯ – ಪಿಒಕೆಯಲ್ಲಿರುವ 1000ಕ್ಕೂ ಹೆಚ್ಚು ಮದರಸಾಗಳನ್ನು ತಾತ್ಕಾಲಿಕ ಬಂದ್
ಶುಕ್ರವಾರ ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಾಯಿತು. ಭಾರತೀಯ ಸೇನೆಯ ಗರ್ವಾಲ್ ರೈಫಲ್ಸ್‌ನ ಬ್ಯಾಂಡ್ ಈ ಸಂದರ್ಭದಲ್ಲಿ ಭಕ್ತಿಗೀತೆಗಳನ್ನು ನುಡಿಸಿತು. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಧಾಮ್ ಪೋರ್ಟಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಕೇದಾರನಾಥ ಆವರಣದಲ್ಲಿ ನಡೆದ ಮುಖ್ಯ ಸೇವಕ ಭಂಡಾರದಲ್ಲಿ ಭಕ್ತರಿಗೆ ವೈಯಕ್ತಿಕವಾಗಿ ಪ್ರಸಾದ ವಿತರಿಸಿದರು. ಇದೇ ವೇಳೆ ಮೇ 4ರಂದು ಬದರಿನಾಥ ಧಾಮದ ಬಾಗಿಲು ತೆರೆಯಲಿದೆ ಎಂದು ಘೋಷಿಸಿದರು.
ಕೇದಾರನಾಥದ ಪುನರ್‌ನಿರ್ಮಾಣಕ್ಕಾಗಿ 2,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಸಿಎಂ ಧಾಮಿ ಬಹಿರಂಗಪಡಿಸಿದರು. ಹೆಚ್ಚುವರಿಯಾಗಿ ಪ್ರವೇಶವನ್ನು ಸುಧಾರಿಸಲು ಗೌರಿಕುಂಡ್‌ನಿಂದ ಕೇದಾರನಾಥಕ್ಕೆ ರೋಪ್‌ವೇ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ನಾವು ಪ್ರತಿ ಹಂತದಲ್ಲೂ ತೀರ್ಥಯಾತ್ರೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಯಾತ್ರೆಯ ಮಾರ್ಗಗಳಲ್ಲಿ ಹಲವಾರು ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಚಾರ್‌ಧಾಮ್ ಯಾತ್ರೆ ಉತ್ತರಾಖಂಡದ ಜೀವನಾಡಿಯಾಗಿದ್ದು, ಲಕ್ಷಾಂತರ ಜನರಿಗೆ ಜೀವನೋಪಾಯವನ್ನು ಒದಗಿಸುತ್ತದೆ ಎಂದು ಧಾಮಿ ಹೇಳಿದರು.