ತನ್ನ ಪ್ರಜೆಗಳಿಗೆ ಗೇಟ್ ಓಪನ್ ಮಾಡಿದ ಪಾಕ್ – ವಾಘಾ ಗಡಿ ಮೂಲಕ ಮರಳಲು ಪಾಕ್ ಅವಕಾಶ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಸರ್ಕಾರ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸಿದೆ. ವೀಸಾ ರದ್ದಾಗಿ ಭಾರತದಲ್ಲಿ ಸಿಲುಕಿರುವ ತನ್ನ ನಾಗರಿಕರಿಗೆ ವಾಘಾ ಗಡಿ ಮೂಲಕ ದೇಶಕ್ಕೆ ಮರಳಲು ಅವಕಾಶ ನೀಡುವುದಾಗಿ ಪಾಕಿಸ್ತಾನ ಘೋಷಿಸಿದೆ.

ಭಾರತದ ಅಮೃತಸರ ಮತ್ತು ಪಾಕಿಸ್ತಾನದ ಲಾಹೋರ್ ಬಳಿ ಇರುವ ಅಟ್ಟಾರಿ-ವಾಘಾ ಗಡಿಯನ್ನು ಏಪ್ರಿಲ್ 30 ರವರೆಗೆ ತೆರೆದಿಟ್ಟು, ಗುರುವಾರ ಬಂದ್ ಮಾಡಲಾಗಿದೆ. ಭಾರತವನ್ನು ತೊರೆಯಲು ನೀಡಲಾಗಿದ್ದ ಗಡುವು ಗುರುವಾರ ಮುಗಿದಿದ್ದು, ಸುಮಾರು 70 ಪಾಕಿಸ್ತಾನಿ ಪ್ರಜೆಗಳು ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

“ಕೆಲವು ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಭಾರತೀಯ ಅಧಿಕಾರಿಗಳು ತಮ್ಮ ಕಡೆಯಿಂದ ಗಡಿ ದಾಟಲು ಅವಕಾಶ ನೀಡಿದರೆ ನಮ್ಮ ನಾಗರಿಕರನ್ನು ಸ್ವೀಕರಿಸಲು ನಾವು ಮುಕ್ತರಾಗಿದ್ದೇವೆ” ಎಂದು MoFA ವಕ್ತಾರರು ತಿಳಿಸಿದ್ದಾರೆ.

ಭವಿಷ್ಯದಲ್ಲಿಯೂ ವಾಘಾ ಗಡಿಯು ಪಾಕಿಸ್ತಾನಕ್ಕೆ ಮರಳಲು ಬಯಸುವ ಪಾಕಿಸ್ತಾನಿ ಪ್ರಜೆಗಳಿಗೆ ಮುಕ್ತವಾಗಿರುತ್ತದೆ ಎಂದು ವಕ್ತಾರರು ಹೇಳಿದ್ದಾರೆ.  ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸುವ ಭಾರತದ ನಿರ್ಧಾರವನ್ನು ಪಾಕ್ ವಿದೇಶಾಂಗ ಕಚೇರಿ ಟೀಕಿಸಿದೆ. “ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸುವ ಭಾರತದ ನಿರ್ಧಾರವು ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಹಲವು ಗಂಭೀರ ಮಾನವೀಯ ಸವಾಲುಗಳನ್ನು ಸೃಷ್ಟಿಸುತ್ತಿದೆ” ಎಂದು ಅವರು ಹೇಳಿದ್ದಾರೆ.

 

Kishor KV

Leave a Reply

Your email address will not be published. Required fields are marked *