ಕ್ರಿಕೆಟ್ಗೆ ಹೊಸ ಸಿಡಿಲಮರಿ – 11 ಸಿಕ್ಸ್.. 7 ಫೋರ್ ವೈಭವ
ದ್ರಾವಿಡ್ ಶಿಷ್ಯನ ಅವತಾರ

ಸೀನಿಯರ್ ಬೌಲರ್‌ಗಳೇ ವೈಭವ್ ಬ್ಯಾಟಿಂಗ್ ವೈಖರಿಗೆ ಸುಸ್ತಾಗುತ್ತಾರೆ ಅಂದ ಮೇಲೆ ಬೇರೆ ಬೌಲರ್‌ಗಳಿಗೆ ನರಕ ದರ್ಶನವಾಗುವುದರಲ್ಲಿ ಅಚ್ಚರಿ ಏನಿಲ್ಲ. ಮೀಸೆ ಚಿಗುರದ ಹುಡುಗನ ತಾಕತ್ತು.. ಪ್ರತಿಭೆಯನ್ನು ಪ್ರಶ್ನೆ ಮಾಡಿದವರಿಗೆ ತಕ್ಕ ಉತ್ತರ ನೀಡುತ್ತಿದ್ದಾನೆ ವೈಭವ್ ಸೂರ್ಯವಂಶಿ. ಈ ಬಾರಿಯ ಐಪಿಎಲ್‍ನ ಬಲಿಷ್ಠ ತಂಡ ಎಂದೇ ಬಿಂಬಿತವಾಗಿರುವ ಗುಜರಾತ್ ಟೈಟಾನ್ಸ್ ತಂಡಕ್ಕೆ ಕೊಟ್ಟ ಏಟು ಇದೆಯಲ್ವಾ ಅದನ್ನು ಮರೆಯಲು ಸಾಧ್ಯವೇ ಇಲ್ಲ.
17 ಎಸೆತದಲ್ಲಿ ಅರ್ಧಶತಕ.. 35 ಎಸೆತದಲ್ಲಿ ಸೆಂಚುರಿ.. 11 ಸಿಕ್ಸರ್.. ಏಳು ಬೌಂಡರಿಗಳು… ಅಂದ್ರೆ 94 ರನ್‍ಗಳು ಬರೀ 18 ಎಸೆತಗಳಲ್ಲಿ ಬಂದಿವೆ. ಅದು ಯಾರೋ ಒಬ್ಬ ಅನುಭವಿ ಆಟಹಾರ, ಸ್ಟಾರ್ ಆಟಗಾರ ಹೊಡೆದಿದ್ದು ಅಲ್ಲ. ಯಾವೋದು ಸಿನಿಮಾ ಸ್ಟೋರಿ ಕೂಡ ಅಲ್ಲ.. ಕೇವಲ 14ರ ಹರೆಯದ ಬಾಲಕನ ತಾಕತ್ತು ಏನು ಅನ್ನೋದನ್ನ ತೋರಿಸಿದ್ದಾನೆ ವೈಭವ್ ಸೂರ್ಯವಂಶಿ.. ಕೇವಲ 35 ಎಸೆತಗಳಲ್ಲಿ ಶತಕ ಗಳಿಸಿ ಐಪಿಎಲ್ ಇತಿಹಾಸದಲ್ಲೇ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಒಟ್ಟಾರೆ ಇದು ಐಪಿಎಲ್‌ನ ಎರಡನೇ ವೇಗದ ಶತಕವಾಗಿದೆ. ಶತಕ ಬಾರಿಸಿದ ಅತಿ ಕಿರಿಯ ಆಟಗಾರ ಎನ್ನುವ ದಾಖಲೆ ಮಾಡಿದರು. ವೈಭವ್ 14 ವರ್ಷ 32 ದಿನ ವಯಸ್ಸಿನಲ್ಲಿ ಈ ದಾಖಲೆ ಮಾಡಿದ್ದಾರೆ.
ಬಹುಶಃ ವೈಭವನ ಬ್ಯಾಟಿಂಗ್ ಝಳಕನ್ನು ಮೈದಾನದಲ್ಲಿ ನೋಡಿದವರಿಗೆ ಹೈಲೈಟ್ಸ್ ನೋಡಿದಂಗೆ ಭಾಸವಾದ್ರೂ ಅಚ್ಚರಿ ಏನಿಲ್ಲ. ಮನೆಯಲ್ಲಿ ಟಿವಿ ನೋಡಿಕೊಂಡು ಪಂದ್ಯ ನೋಡುತ್ತಿದ್ದವರು ಬೇರೆ ಚಾನೆಲ್ ಹಾಕೋಕೆ ಮನಸ್ಸು ಬರಲ್ಲ.. ಯಾಕಂದ್ರೆ ಅಷ್ಟೊಂದು ಕೂಲ್ ಆಗಿಯೇ ಆಡುತ್ತಿರುವ ಈ ಪೋರನ ಆಟವನ್ನು ಮನಸಾರೆ ಎಂಜಾಯ್ ಮಾಡಬೇಕು ಎಂದು ಅನ್ನಿಸುತ್ತಿರುತ್ತದೆ. ಮುಖದಲ್ಲಿ ಒಂಚೂರು ಟೆನ್ಷನ್ ಇಲ್ಲ. ಅಹಂ ಇಲ್ಲ.. ಜಾಸ್ತಿ ಸಂಭ್ರಮಪಡಲ್ಲ. ಏನೋ ಮಾಮೂಲಿಯಾಗಿ ಆಡುತ್ತಿದ್ದೇನೆ ಎಂಬಂತೆ ಬ್ಯಾಟ್ ಬೀಸುವ ಈ ಹುಡುಗನ ಹಿಂದಿನ ಶಕ್ತಿಯೇ ಗುರು ರಾಹುಲ್ ದ್ರಾವಿಡ್.
ಅದರಲ್ಲೂ 14ರ ಹರೆಯದ ಹುಡುಗನನ್ನು ಐಪಿಎಲ್‍ನಂತಹ ಹೈವೋಲ್ಟೆಜ್ ಮ್ಯಾಚ್‍ನಲ್ಲಿ ಆಡಿಸುವುದು ಅಂದ್ರೆ ಅದು ತಮಾಷೆಯ ಸಂಗತಿಯಲ್ಲ. ಒಬ್ಬ ಕೋಚ್ ಆಗಿ ರಾಹುಲ್ ದ್ರಾವಿಡ್ ಸಾಕಷ್ಟು ರಿಸ್ಕ್ ತಗೊಂಡೇ ಈ ನಿರ್ಧಾರವನ್ನು ತಂಗೋಡಿರುತ್ತಾರೆ. ಹೊಡಿ ಬಡಿ ಆಟವಾಗಿರುವ ಟಿ-20ಯಲ್ಲಿ ಓರ್ವ ಹೈಸ್ಕೂಲ್ ಹುಡುಗನನ್ನು ಆಡಿಸುವುದು ಅಂದ್ರೆ ಆತನ ಪ್ರತಿಭೆ, ಸಾಮರ್ಥ್ಯ ಮೊದಲು ಗೊತ್ತಾಗಬೇಕು. ನಂತ್ರ ಆತನನ್ನ ಟ್ರೈನಿಂಗ್ ಕೊಟ್ಟು ರೆಡಿಮಾಡಬೇಕು.. ಆ ಕೆಲಸವನ್ನು ರಾಜಸ್ತಾನ ರಾಯಲ್ಸ್ ತಂಡದ ಟೀಮ್ ಮ್ಯಾನೇಜ್‍ಮೆಂಟ್ ಮತ್ತು ಹೆಡ್ ಕೋಚ್ ರಾಹುಲ್ ದ್ರಾವಿಡ್ ಸರಿಯಾಗಿಯೇ ಮಾಡಿದ್ದಾರೆ. ಭಾರತೀಯ ಕ್ರಿಕೆಟ್‍ಗೆ ಹೊಸ ಹುಡುಗರನ್ನು ಪರಿಚಯಿಸಿದ ರಾಹುಲ್ ದ್ರಾವಿಡ್ ಈಗ ಮತ್ತೊಬ್ಬ ಹುಡುಗನನ್ನು ಪರಿಚಯಿಸಿದ್ದಾರೆ. ದ್ರಾವಿಡ್ ಗುರು ಕುಲದಿಂದ ಐಪಿಎಲ್ ಮಾತ್ರವಲ್ಲ.. ಭಾರತ ತಂಡಕ್ಕೆ, ವಿಶ್ವ ಕ್ರಿಕೆಟ್‍ಗೆ ಹೊಸ ಕ್ರಿಕೆಟಿಗ ಸಿಕ್ಕಿದ್ದಾನೆ.
ತಾನಾಡಿದ ಮೊದಲ ಪಂದ್ಯದಲ್ಲಿ ತನ್ನ ತಾಕತ್ತು ತೋರಿಸಿದ ವೈಭವ್ ಎರಡನೇ ಪಂದ್ಯದಲ್ಲಿ ಸೆಂಚುರಿ ಬಾರಿಸಿ ಇಡೀ ಜಗತ್ತಿಗೆ ತನ್ನ ಆಟವನ್ನ ಪರಿಚಯಿಸಿದ್ದಾನೆ. ಅಷ್ಟೇ ಅಲ್ಲ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಆಗುತ್ತೇನೆ ಅಂತಾ ಸಾರಿ ಸಾರಿ ಹೇಳಿದ್ದಾನೆ. ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾನೆ.
ಕ್ರಿಕೆಟ್ ಮೈದಾನದಲ್ಲಿ ನಂಬಲಸಾಧ್ಯ ಸಾಧನೆ ತೊರುತ್ತಿರುವ ವೈಭವ್ ಸೂರ್ಯವಂಶಿಗೆ ಇದೀಗ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಕೇವಲ ಕ್ರಿಕೆಟ್ ಲೋಕದ ದಿಗ್ಗಜರ ಮಾತ್ರವಲ್ಲ, ಹಲವು ಅನ್ಯ ಕ್ಷೇತ್ರಗಳ ಗಣ್ಯರೂ ಕೂಡ ವೈಭವ್ ಸೂರ್ಯವಂಶಿಯ ಆಟಕ್ಕೆ ಮಾರು ಹೋಗಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಂತೂ ವೈಭವ್ ಸೂರ್ಯವಂಶಿ ಅವರ ಆಟಕ್ಕೆ ಮನಸೋತಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಟ್ವೀಟ್ ಮಾಡಿರುವ ಯವರಾಜ್ ಸಿಂಗ್, “14ನೇ ವಯಸ್ಸಿನಲ್ಲಿ ನೀವು ಏನು ಮಾಡುತ್ತಿದ್ದಿರಿ? ಈ ಮಗು ಕಣ್ಣು ಮಿಟುಕಿಸದೆ ವಿಶ್ವದ ಅತ್ಯುತ್ತಮ ಬೌಲರ್‌ಗಳನ್ನು ಎದುರಿಸುತ್ತಿದೆ! ವೈಭವ್ ಸೂರ್ಯವಂಶಿ, ಈ ಹೆಸರು ನೆನಪಿಡಿ. ನಿರ್ಭೀತ ಮನೋಭಾವದಿಂದ ಆಟವಾಡುತ್ತಿರುವ ಈ ಹುಡುಗನ ಕ್ರಿಕೆಟ್ ಲೋಕದಲ್ಲಿ ಮಿಂಚುವುದನ್ನು ನೋಡಲು ಹೆಮ್ಮೆಪಡುತ್ತೇನೆ!” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಕೂಡ ವೈಭವ್ ಸೂರ್ಯವಂಶಿ ಅವರ ಆಟವನ್ನು ಹಾಡಿ ಹೊಗಳಿದ್ದಾರೆ. “ವೈಭವ್ ಸೂರ್ಯವಂಶಿ ಅವರ ಆಟವನ್ನು ನೋಡುವುದೇ ಚೆಂದ. ಭಾರತೀಯ ಕ್ರಿಕೆಟ್‌ನ ಭವಿಷ್ಯ ಉಜ್ವಲವಾಗಿದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ” ಎಂದು ಸಚಿನ್ ತೆಂಡೂಲ್ಕರ್ ಭರವಸೆ ವ್ಯಕ್ತಪಡಿಸಿದ್ದಾರೆ.
ಶಿಷ್ಯನ ಆಟ ನೋಡಿ ಕುಣಿದು ಕುಪ್ಪಳಿಸಿದ ದ್ರಾವಿಡ್
ಸಿಕ್ಸರ್ ಮೂಲಕ ಶತಕ ಸಿಡಿಸಿದ ವೈಭವ್ ರಾಜಸ್ತಾನ ಡಗೌಟ್ ನತ್ತ ತಿರುಗಿ ತನ್ನ ಗುರು ಹಾಗೂ ತಂಡದ ಕೋಚ್ ರಾಹುಲ್ ದ್ವಾವಿಡ್ ಗೆ ಬ್ಯಾಟ್ ಮೂಲಕ ಸೆಲ್ಯೂಟ್ ಮಾಡಿದರು. ಈ ವೇಳೆ ಇಡೀ ಕ್ರೀಡಾಂಗಣ ಹರ್ಷೋದ್ಗಾರದಲ್ಲಿ ಮುಳುಗಿತ್ತು. ಕೇವಲ ರಾಜಸ್ತಾನ ಅಭಿಮಾನಿಗಳು ಅಷ್ಟೇ ಅಲ್ಲ ಮೈದಾನದಲ್ಲಿದ್ದ ಗುಜರಾತ್ ತಂಡದ ಅಭಿಮಾನಿಗಳೂ ಕೂಡ ಎದ್ದು ನಿಂತು ವೈಭವ್ ಸೂರ್ಯವಂಶಿಗೆ ಚಪ್ಪಾಳೆ ತಟ್ಟಿದರು. ಇದೇ ಸಂದರ್ಭದಲ್ಲಿ ರಾಜಸ್ತಾನ ತಂಡದ ಕೋಚ್ ರಾಹುಲ್ ದ್ರಾವಿಡ್ ಕೂಡ ತಮ್ಮ ಶಿಷ್ಯನ ಸಾಧನೆಯನ್ನು ಭಾವುಕರಾಗಿ ಸಂಭ್ರಮಿಸಿದರು. ಅತ್ತ ವೈಭವ್ ಸಿಕ್ಸರ್ ಮೂಲಕ ಶತಕ ಸಿಡಿಸುತ್ತಲೇ ತಮ್ಮ ಮುರಿದ ಕಾಲನ್ನೂ ಲೆಕ್ಕಿಸದ ರಾಹುಲ್ ದ್ರಾವಿಡ್ ಎದ್ದು ನಿಂತು ಹರ್ಷೋಧ್ಗಾರದಲ್ಲಿ ಚಪ್ಪಾಳೆ ತಟ್ಟಿ ಶಿಷ್ಯನನ್ನು ಹುರಿದುಂಬಿಸಿದರು. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ವೈಭವ್ ಸೂರ್ಯವಂಶಿಗೆ ಅಪ್ಪನೇ ಮೊದಲ ಗುರು
ವೈಭವ್ ಸೂರ್ಯವಂಶಿಗೆ ಅಪ್ಪನೇ ಮೊದಲ ಗುರು. ಕ್ರಿಕೆಟ್‌ನ ಹುಚ್ಚು ಹತ್ತಿಸಿದ್ದೆ ಅಪ್ಪ ಸಂಜೀವ್ ಸೂರ್ಯವಂಶಿ. ಆರಂಭದಲ್ಲಿ ತಂದೆಯ ಜೊತೆ ವೈಭವ್ ಕ್ರಿಕೆಟ್ ಆಡುತ್ತಿದ್ರು. ಮಗನ ಉತ್ಸಾಹ ಕಂಡಿದ್ದ ಸಂಜೀವ್, ಆತನಿಗೆ 5ನೇ ವರ್ಷದಲ್ಲೇ ಮನೆ ಬಳಿ ನೆಟ್ಸ್ ತಯಾರಿಸಿ ಅಭ್ಯಾಸಕ್ಕೆ ನೆರವಾಗಿದ್ರು. ಕೃಷಿಕರಾಗಿದ್ರು ಮಗನ ಕನಸಿಗೆ ನೆರವಾದ ತಂದೆ 9ನೇ ವರ್ಷದಲ್ಲಿ ಸಮೀಪದ ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರುಮಗನನ್ನ ಕ್ರಿಕೆಟರ್ ಮಾಡೋ ಪಣ ತೊಟ್ಟ ತಂದೆ ಹಣದ ಸಮಸ್ಯೆಯಾದಗ ಇದ್ದ ಸ್ವಲ್ಪ ಕೃಷಿ ಜಮೀನನ್ನೆ ಮಾರಿದ್ರು. ಬಿಹಾರದ ಮಾಜಿ ಕ್ರಿಕೆಟಿಗ ಮನೀಷ್ ಓಜಾ ಬಳಿ ಕೋಚಿಂಗ್ಗೆ ಸೇರಿಸಿದ್ರು. ಅಕಾಡೆಮಿ ಸೇರಿದ ಮೊದಲ ದಿನವೇ ತಂದೆಯ ಋಣ ತೀರಿಸೋ ಪಣ ತೊಟ್ಟಿದ್ದ ವೈಭವ್, ಸಿಕ್ಕ ಪ್ರತಿ ಅವಕಾಶದಲ್ಲೂ ಸಾಮರ್ಥ್ಯ ಫ್ರೂವ್ ಮಾಡಿದ್ದರು. ಯಶಸ್ಸಿನ ಪಯಣದಲ್ಲಿ ಸಾಗಿದ್ದ ವೈಭವ್ ವಿರುದ್ಧ ಏಜ್ ಫ್ರಾಡ್ ಆರೋಪವೂ ಕೇಳಿ ಬಂತು. ಈ ವೇಳೆ ಬಿಸಿಸಿಐ ನಿಯಮದಂತೆ ವೈಭವ್, ಬೋನ್ ಟೆಸ್ಟ್ಗೆ ಒಳಗಾಗಿ, ತಾನು ತಪ್ಪು ಮಾಡಿಲ್ಲ ಅನ್ನೋದು ಪ್ರೂವ್ ಮಾಡಿದ್ರು. ಚಿಕ್ಕ ವಯಸ್ಸಿನಲ್ಲೇ ಯಶಸ್ಸಿನ ಮೆಟ್ಟಿಲು ಹತ್ತುತ್ತಿರುವ ವೈಭವ್ಗೆ, ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗ್ತಿದೆ.
ಇನ್ನು ಹರಾಜಿನಲ್ಲಿ ವೈಭವ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಜಿದ್ದಿಗೆ ಬಿದ್ದಿದ್ದವು. ಕೊನೆಯಲ್ಲಿ ಆರ್ಆರ್ ಬಿಡ್ಡಿಂಗ್ ಗೆದ್ದುಕೊಂಡಿತ್ತು. ದೆಹಲಿ ತಂಡ ಕೊನೆಯದಾಗಿ 1 ಕೋಟಿ ರೂಪಾಯಿ ಬಿಡ್ ಮಾಡ್ತಿರೋದಾಗಿ ಹೇಳಿತು. ಆದರೆ ರಾಜಸ್ಥಾನ 1.10 ಕೋಟಿ ನೀಡಿ ಖರೀದಿ ಮಾಡಿತ್ತು. ಸೂರ್ಯವಂಶಿ ಪ್ರತಿಭೆಯನ್ನು ಗುರುತಿಸಿದ್ದ ಹೆಡ್ಕೋಚ್ ರಾಹುಲ್ ದ್ರಾವಿಡ್, ಕೊನೆಗೂ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ದ್ರಾವಿಡ್ ನಂಬಿಕೆಗೆ ವೈಭವ್, ನ್ಯಾಯ ಒದಗಿಸಿದ್ದಾರೆ. ಇನ್ನು ವೈಭವ್ ಹಿರಿಯ ಬೌಲರ್‌ಗಳೇನ್ನ ಬೆಂಡೆತ್ತಿದ್ದಾರೆ. ಸಿರಾಜ್ ಮತ್ತು ಇಶಾಂತ್ ಶರ್ಮಾ ಬೌಲಿಂಗ್‌ನಲ್ಲಿ ತನ್ನ ಅದ್ಫುತ ಪ್ರದರ್ಶನ ತೋರಿಸಿದ್ದಾರೆ.
ಭಾರತೀಯ ಕ್ರಿಕೆಟಿಗೆ ಒಂದು ಸುಂದರ ಡೈಮಂಡ್ ಸಿಕ್ಕಿದೆ. ಅದನ್ನು ಹೊಳೆಯುವಂತೆ ಮಾಡಬೇಕಿದೆ. ಈತನ ಪ್ರತಿ ಹೆಜ್ಜೆಯನ್ನು ಕಣ್ಣಿಟ್ಟು ನೋಡಿಕೊಳ್ಳಬೇಕಿದೆ. ಯಾಕಂದ್ರೆ ಈತನಿಗೆ ಉಜ್ಜಲ ಭವಿಷ್ಯವಿದೆ. ಅದು ಹಾಳಾಗದಂತೆ ನೋಡಿಕೊಂಡು, ಭಾರತಕ್ಕಾಗಿ ಈತನನ್ನ ಬಳಸಿಕೊಳ್ಳಬೇಕು..