ಹೆಚ್ಚು ಚಿನ್ನ ಹೊಂದಿದ ದೇಶಗಳ್ಯಾವು? – ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ಚಿನ್ನ ಯಾರಿಗೆ ಇಷ್ಟವಾಗಲ್ಲ ಹೇಳಿ? ಈ ಹಳದಿ ಲೋಹ ಎಷ್ಟೇ ಗಗನಕ್ಕೇರಿದರೂ ಕೂಡ ಜನರು ಕೊಂಡುಕೊಳ್ಳುವುದು ಮಾತ್ರ ಬಿಡುವುದಿಲ್ಲ. ಒಂದು ದೇಶದ ಆರ್ಥಿಕತೆ ಹದಗೆಟ್ಟು ಹೋದಾಗ ಚಿನ್ನದ ನಿಕ್ಷೇಪಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ,.
ವಿಶ್ವದಲ್ಲೇ ಅತಿ ಹೆಚ್ಚು ಚಿನ್ನದ ಮೀಸಲು ಹೊಂದಿರುವ ಟಾಪ್ 10 ದೇಶಗಳಲ್ಲಿ ಭಾರತವೂ ಸ್ಥಾನ ಪಡೆದಿದೆ. ಅಂತರರಾಷ್ಟ್ರೀಯ ಅನಿಶ್ಚಿತತೆಯ ಸಮಯದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿರುತ್ತದೆ. ಅಲ್ಲದೆ, ಇದು ಸುರಕ್ಷಿತ ಹೂಡಿಕೆಯಾಗಿ ಕಾರ್ಯನಿರ್ವಹಿಸುತ್ತದೆ . ಹೀಗಾಗಿ ಬಹುತೇಕ ದೇಶಗಳ ಕೇಂದ್ರ ಬ್ಯಾಂಕುಗಳು ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿವೆ. ಭಾರತದಲ್ಲಿ ಸಹಜವಾಗಿಯೇ ಚಿನ್ನದ ಬೇಡಿಕೆ ಹೆಚ್ಚಿರುತ್ತದೆ. ಹೀಗಾಗಿ ದೇಶವು ಹೆಚ್ಚಿನ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಚಿನ್ನವು ಸುರಕ್ಷಿತ ಹೂಡಿಕೆಯ ಸಾಧನ ಆಗಿರುವುದರಿಂದ ಜನರು ಚಿನ್ನದತ್ತ ಮುಖ ಮಾಡುತ್ತಾರೆ. ಈ ಸಂದರ್ಭದಲ್ಲಿ ಚಿನ್ನದ ಬೆಲೆಗಳು ಸಹ ಏರಿಕೆಯಾಗುತ್ತವೆ. ಹೀಗಾಗಿ, ಪ್ರಪಂಚದಾದ್ಯಂತದ ಕೇಂದ್ರ ಬ್ಯಾಂಕುಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸಿ ತಮ್ಮ ಚಿನ್ನದ ಮೀಸಲನ್ನು ಹೆಚ್ಚಿಸಿಕೊಳ್ಳುತ್ತವೆ. ಚಿನ್ನದ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ದೇಶಗಳಿಂದ ಇತರ ದೇಶಗಳು ಚಿನ್ನವನ್ನು ಆಮದು ಮಾಡಿಕೊಳ್ಳುತ್ತವೆ. ಭಾರತ ಕೂಡ ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದು. ಚಿನ್ನದ ಆಮದಿನಲ್ಲಿ ಚೀನಾ ಮತ್ತು ಭಾರತ ಎರಡೂ ರಾಷ್ಟ್ರಗಳು ಮುಂಚೂಣಿಯಲ್ಲಿವೆ. ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ. ವಿಶೇಷವಾಗಿ ಹಬ್ಬಗಳು, ಶುಭ ಸಮಾರಂಭಗಳು ಮತ್ತು ಇತರ ಸಂದರ್ಭಗಳಲ್ಲಿ ಜನರು, ಮುಖ್ಯವಾಗಿ ಮಹಿಳೆಯರು ಚಿನ್ನಾಭರಣಗಳನ್ನು ಖರೀದಿಸುತ್ತಾರೆ. ಆದರೆ ಭಾರತದಲ್ಲಿ ಸಾಕಷ್ಟು ಚಿನ್ನದ ಉತ್ಪಾದನೆ ಇಲ್ಲದ ಕಾರಣ, ವಿದೇಶಗಳಿಂದ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ.
ವಿಶ್ವದ ಅತಿ ಹೆಚ್ಚು ಚಿನ್ನದ ನಿಕ್ಷೇಪವನ್ನು ಹೊಂದಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, 8,133.46 ಟನ್ಗಳಷ್ಟು ಹೊಂದಿದೆ. ಟಾಪ್ 10 ದೇಶಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಎರಡನೇ ಅತಿ ಹೆಚ್ಚು ಚಿನ್ನದ ನಿಕ್ಷೇಪಗಳನ್ನು ಹೊಂದಿರುವ ಜರ್ಮನಿ 3,352.65 ಟನ್ಗಳಷ್ಟು ಹೊಂದಿದೆ. ಇನ್ನು ಇಟಲಿ ಮೂರನೇ ಸ್ಥಾನದಲ್ಲಿದ್ದು, 2,451.84 ಟನ್ಗಳ ಗಣನೀಯ ಪ್ರಮಾಣದ ಚಿನ್ನದ ನಿಕ್ಷೇಪವನ್ನು ಹೊಂದಿದೆ. 2,436.88 ಟನ್ಗಳೊಂದಿಗೆ, ಗಮನಾರ್ಹವಾದ ಚಿನ್ನವನ್ನು ಹೊಂದಿರುವ ದೇಶಗಳಲ್ಲಿ ಫ್ರಾನ್ಸ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. 2,332.74 ಟನ್ಗಳನ್ನು ಹೊಂದಿರುವ ರಷ್ಯಾ ಜಾಗತಿಕವಾಗಿ ಐದನೇ ಅತಿ ದೊಡ್ಡ ನಿಕ್ಷೇಪಗಳನ್ನು ಹೊಂದಿದೆ. ಚೀನಾ ಒಟ್ಟು 2,191.53 ಟನ್ಗಳಷ್ಟು ಚಿನ್ನ ಹೊಂದಿದ್ದು, ಆರನೇ ಸ್ಥಾನದಲ್ಲಿದೆ.
ಸ್ವಿಟ್ಜರ್ಲೆಂಡ್: 1,040.00 ಟನ್ ಚಿನ್ನವನ್ನು ಹೊಂದಿರುವ ಸ್ವಿಟ್ಜರ್ಲೆಂಡ್ ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಏಳನೇ ಸ್ಥಾನದಲ್ಲಿದೆ. 845.97 ಟನ್ಗಳ ಚಿನ್ನದ ನಿಕ್ಷೇಪಗಳೊಂದಿಗೆ, ಜಪಾನ್ ಎಂಟನೇ ಸ್ಥಾನದಲ್ಲಿದೆ.ನಮ್ಮ ಭಾರತವು 800.78 ಟನ್ ಚಿನ್ನದ ನಿಕ್ಷೇಪಗಳನ್ನು ಹೊಂದಿದ್ದು, ಒಂಬತ್ತನೇ ಸ್ಥಾನದಲ್ಲಿದೆ. 612.45 ಟನ್ಗಳ ಚಿನ್ನದ ನಿಕ್ಷೇಪವನ್ನು ಹೊಂದಿರುವ ನೆದರ್ಲ್ಯಾಂಡ್ ಹತ್ತನೇ ಸ್ಥಾನದಲ್ಲಿದೆ.