ಪಹಲ್ಗಾಮ್ ಉಗ್ರರ ದಾಳಿ – ಭಾರತದಲ್ಲಿ ಪಾಕ್ನ X ಖಾತೆ ಬಂದ್

ಪಹಲ್ಗಾಮ್ನಲ್ಲಿ ನಡೆದಿರುವ ಭಯಾನಕ ದಾಳಿ, ಉಗ್ರರ ನರಮೇಧ ಇಡೀ ಭಾರತವೇ ಕುದಿಯುವಂತೆ ಮಾಡಿದೆ. ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ. ಇದೀಗ ಪಾಕ್ ವಿರುದ್ಧ ತಿರುಗಿಬಿದ್ದಿರುವ ಭಾರತ, ಪಾಕಿಸ್ತಾನ ಸರ್ಕಾರದ ಎಕ್ಸ್ ಖಾತೆಯನ್ನು ಭಾರತದಲ್ಲಿ ಸ್ಥಗಿತಗೊಳಿಸಿದೆ.
ಇದನ್ನೂ ಓದಿ: ಪಹಲ್ಗಾಮ್ ಉ*ಗ್ರ ದಾಳಿಗೆ ಪ್ರತೀಕಾರದ ಹೇಳಿಕೆ – ಉ*ಗ್ರರಿಂದ ಗೌತಮ್ ಗಂಭೀರ್ ಗೆ ಪ್ರಾಣ ಬೆದರಿಕೆ!
ಪೆಹಲ್ಗಾಮ್ ದಾಳಿ ಬೆನ್ನಲ್ಲೇ ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಇದೀಗ ಪಾಕ್ ವಿರುದ್ಧ ಭಾರತ ಸರ್ಕಾರ ರಿವೇಂಜ್ ತೆಗೆದುಕೊಳ್ಳುತ್ತಿದೆ. ಬುಧವಾರ ನಡೆದ ಸಿಸಿಎಸ್ ಸಭೆಯಲ್ಲಿ ಉಗ್ರರ ದಾಳಿಗೆ ಪ್ರತಿಯಾಗಿ, ಸಿಂಧೂ ಜಲ ಒಪ್ಪಂದವನ್ನು ಅನಿರ್ದಿಷ್ಟಾವಧಿ ಸ್ಥಗಿತಗೊಳಿಸುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಭಾರತ ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಇದಾದ ಬಳಿಕ ಈಗ ಪಾಕ್ ಸರ್ಕಾರದ ಎಕ್ಸ್ ಖಾತೆಯನ್ನು ಭಾರತ ಸ್ಥಗಿತಗೊಳಿಸಿದೆ.
ಪಾಕಿಸ್ತಾನಿ ಪ್ರಜೆಗಳಿಗೆ ಸಾರ್ಕ್ ವೀಸಾ ವಿನಾಯಿತಿ ಯೋಜನೆಯನ್ನು ಬುಧವಾರ ಭಾರತ ಸ್ಥಗಿತಗೊಳಿಸಿತ್ತು. ಇದರ ಅಡಿ ಪಾಕಿಸ್ತಾನಿ ನಾಗರಿಕರಿಗೆ ನೀಡಲಾದ ಯಾವುದೇ ಅಸ್ತಿತ್ವದಲ್ಲಿರುವ ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. 48 ಗಂಟೆಗಳಲ್ಲಿ ಭಾರತ ತೊರೆಯುವಂತೆ ಪಾಕ್ ಪ್ರಜೆಗಳಿಗೆ ಸೂಚಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಅಟ್ಟಾರಿ-ವಾಘಾ ಗಡಿ ಚೆಕ್ಪೋಸ್ಟ್ನ್ನು ತಕ್ಷಣದಿಂದ ಮುಚ್ಚಲು ಆದೇಶಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ತಿಳಿಸಿದ್ದರು.
ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ತ್ಯಜಿಸುವವರೆಗೆ 1960ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳ್ಳುತ್ತದೆ ಎಂದು ಮಿಶ್ರಿ ಹೇಳಿದ್ದರು. ಸಿಸಿಎಸ್ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗವಹಿಸಿದ್ದರು.