ಪಹಲ್ಗಾಮ್ ಉ*ಗ್ರ ದಾಳಿಗೆ ಪ್ರತೀಕಾರದ ಹೇಳಿಕೆ – ಉ*ಗ್ರರಿಂದ ಗೌತಮ್ ಗಂಭೀರ್ ಗೆ ಪ್ರಾಣ ಬೆದರಿಕೆ!

ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರದ ಹೇಳಿಕೆ ನೀಡಿದ್ದ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮತ್ತು ಬಿಜೆಪಿಯ ಮಾಜಿ ಸಂಸದ ಗೌತಮ್ ಗಂಭೀರ್‌ಗೆ “ಐಸಿಸ್ ಕಾಶ್ಮೀರ” ಉಗ್ರರಿಂದ ಜೀವ ಬೆದರಿಕೆ ಬಂದಿದೆ.
ಈ ಸಂಬಂಧ ದೆಹಲಿ ಪೊಲೀಸರನ್ನು ಸಂಪರ್ಕಿಸಿದ್ದು, ಎಫ್ ಐಆರ್ ಗಾಗಿ ದೂರು ದಾಖಲಿಸಿದ್ದಾರೆ. ಅವರ ಕುಟುಂಬದ ಭದ್ರತೆ ಕಾಪಾಡಲು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ. ದೆಹಲಿ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಗಂಭೀರ್ ಅವರಿಗೆ ಎರಡು ಬೆದರಿಕೆ ಇಮೇಲ್‌ಗಳು ಬಂದಿವೆ ಎಂದು ಎಎನ್‌ಐ ವರದಿ ಮಾಡಿದೆ. ಒಂದು ಇಮೇಲ್ ಮಧ್ಯಾಹ್ನ ಮತ್ತು ಇನ್ನೊಂದು ಸಂಜೆ ಬಂದಿದೆ. ಎರಡೂ ಇಮೇಲ್ ನಲ್ಲಿಯೂ ‘IKILLU’ ಎಂಬ ಸಂದೇಶವಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು ಗೌತಮ್ ಗಂಭೀರ್‌ಗೆ ಸಂಬಂಧಿಸಿದ ಇಮೇಲ್ ಐಡಿಯಲ್ಲಿ ಬೆದರಿಕೆ ಮೇಲ್ ಬಂದಿರುವ ಬಗ್ಗೆ ನಮಗೆ ತಿಳಿಸಲಾಗಿದೆ. ಅದೇ ರೀತಿ ತನಿಖೆ ನಡೆಸಲಾಗುತ್ತಿದೆ. ಅವರಿಗೆ ಈಗಾಗಲೇ ದೆಹಲಿ ಪೊಲೀಸರು ರಕ್ಷಣೆ ಒದಗಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯಾನಕ ದಾಳಿಯನ್ನು ಗಂಭೀರ್ ಖಂಡಿಸಿದ್ದರು. ಪ್ರವಾಸಿಗರ ಮೇಲೆ ನಡೆದ ದಾಳಿಗೆ ಸಂತಾಪ ಸೂಚಿಸಿ, ‘ಮೃತರ ಕುಟುಂಬಗಳಿಗೆ ನನ್ನ ಪ್ರಾರ್ಥನೆಗಳು. ಇದಕ್ಕೆ ಕಾರಣರಾದವರು ಶಿಕ್ಷೆ ಅನುಭವಿಸುತ್ತಾರೆ. ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತದೆʼ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಗೌತಮ್ ಗಂಭೀರ್‌ಗೆ ಜೀವ ಬೆದರಿಕೆ ಸಂದೇಶ ಬಂದಿದೆ.