ವಿಂಗ್ ಕಮಾಂಡರ್ ಹಸಿ ಹಸಿ ಸುಳ್ಳು!! ಸಿಸಿಟಿವಿ ಇಲ್ಲದಿದ್ರೆ ಕನ್ನಡಿಗನ ಕಥೆಯೇನು?
FIRನಲ್ಲಿ ಜಾಣತನ ತೋರಿಸಿದ್ದೇಕೆ ಖಾಕಿ?

ಒಬ್ಬ ದೇಶ ಕಾಯೋ ವಿಂಗ್ ಕಮಾಂಡರ್ ಹೀಗ್ ಮಾಡಿದ್ರೆ ನಿಜಕ್ಕೂ ತಲೆ ತಗ್ಗಿಸುವ ಘಟನೆ.. ಅಧಿಕಾರ ಇದೆ.. ನಾನ್ ಏನ್ ಮಾಡಿದ್ರು ನಡೆಯುತ್ತೆ.. ನಾನ್ ಏನ್ ಹೇಳಿದ್ರು ಜನ ನಂಬ್ತಾರೆ ಅಂತ ಕನ್ನಡಿಗನ ಮೇಲೆ ಸುಳ್ಳ ಕಥೆ ಹೇಳಿದ್ದ ವಿಂಗ್ ಕಮಾಂಡರ್, ತಾನು ತೊಡಿದ ಹೊಂಡಕ್ಕೆ ತಾನೇ ಬಿದ್ದಿದ್ದಾನೆ..ಬೈಕ್ ಟಚ್ ಆಗಿದ್ದಕ್ಕೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ಆಮೇಲೆ ನಾನೇನು ಮಾಡಿಲ್ಲ ಅಂತ ಬಣ್ಣ ಬಣ್ಣದ ಕಥೆ ಕಟ್ಟಿದ್ದ ವಿಂಗ್ ಕಮಾಂಡರ್ ಈಗ ಪೇಚೆಗೆ ಸಿಲುಕಿದ್ದಾನೆ. ಕನ್ನಡಿಗರು ಕೂಡ ರೊಚ್ಚಿಗೆದಿದ್ದು, ವಿಂಗ್ ಕಮಾಂಡರ್ ರ್ಶೀಲಾದಿತ್ಯ ಬೊಸೆ ಮೇಲೆ ದ್ವೇಷದ ಜ್ವಾಲೆಯನ್ನೇ ಉಗುಳುತ್ತಿದ್ದಾರೆ.
ಕೆಂಪಾದವೋ ಎಲ್ಲಾ ಕೆಂಪಾದವೋ ಅಂತ ಡವ್ ಮಾಡ್ತಾ ಸೆಲ್ಫಿ ವಿಡಿಯೋ ಮಾಡಿದ್ದ ಬೋಸ್ ಅದರಲ್ಲಿ ತಾನು ಏ. 21ರಂದು ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿರುವ ಡಿಆರ್ ಡಿಒ ಕಾಲೋನಿಯಲ್ಲಿರುವ ತನ್ನ ಮನೆಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವಾಗ ಬೈಕರ್ ಒಬ್ಬ ಬಂದು ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದ್ದ. ತನ್ನನ್ನು ಹಿಗ್ಗಾಮುಗ್ಗಾ ಹೊಡೆದ. ಇಷ್ಟು ಹೇಳಿ, “ದೇಶವನ್ನು ರಕ್ಷಿಸುವವರಿಗೆ ಮರ್ಯಾದೆ ಕೊಡೋದು ಹೀಗಾ’’ ಎಂದು ಡೈಲಾಗ್ ಬೇರೆ ಹೊಡೆದಿದ್ದ. ಜೊತೆಗೆ, ಪೊಲೀಸರು ಸಹ ದೂರು ದಾಖಲಿಸಿಕೊಳ್ಳಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ. ಈ ವಿಡಿಯೋ ನೋಡಿದವರು ಅಯ್ಯೋ ಪಾಪ.. ವಿಂಗ್ ಕಮಾಂಡರ್‌ಗೆ ಏನ್ ಸಿತ್ಥಿ ಬಂತಪ್ಪ ಅಂತ ಕಮೆಂಟ್ ಮಾಡಿದ್ದೇ ಮಾಡಿದ್ದು.. ಕರುಣೇ ತೋರಿದ್ದೇ ತೋರಿದ್ದು.. ಯಾವಾಗ ಅಸಲಿ ಫಿಕ್ಚರ್ ರಿಲೀಸ್ ಆಯ್ತೋ.. ವಿಂಗ್ ಕಮಾಂಡರ್ ನವರಂಗಿ ಆಟ ಬಯಲಾಯ್ತು.. ವಿಡಿಯೋ ವೈರಲ್ ಆಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ಘಟನೆ ನಡೆದ ಸಿಸಿಟಿವಿ ಸ್ಥಳದ ಸಿಸಿಟಿವಿಗಳನ್ನು ಪಡೆದು ಪರಿಶೀಲಿಸಿದ್ದಾರೆ. ಆಗಲೇ ಗೊತ್ತಾಗಿದೆ… ವಾಯುಪಡೆಯ ವಿಂಗ್ ಕಮಾಂಡರ್ ಹೇಳಿದ್ದು ಅಪ್ಪಟ ಸುಳ್ಳು ಅಂತ.
ಪ್ರಕರಣದಲ್ಲಿ ಟ್ವಿಸ್ಟ್ ಕೊಟ್ಟ ಸಿಸಿಟಿವಿ ವಿಡಿಯೋ
ಈ ಪ್ರಕರಣ ವೈರಲ್ ಆಗುತ್ತಲೇ ಸಿಸಿಟಿವಿ ವಿಡಿಯೋ ವೈರಲ್ ಆಗಿದ್ದು, ಇದೇ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದೆ. ಸ್ಥಳದಲ್ಲಿನ ಸಿಸಿಟಿವಿಯಲ್ಲಿ ಬೋಸ್ನ ನವರಂಗಿ ಆಟ ಬಟಾಬಯಲಾಗಿದ್ದು, ಸಿಸಿಟಿವಿ ದೃಶ್ಯದಲ್ಲಿ ಯುವಕ ಹಲ್ಲೆ ಮಾಡಿಲ್ಲ. ಬದಲಾಗಿ ವಿಂಗ್ ಕಮಾಂಡ್ ಬೋಸ್ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಬೀದಿಯಲ್ಲೇ ಡಬ್ಲ್ಯೂಡಬ್ಲ್ಯೂಎಫ್ ಫೈಟರ್ ಗಳ ರೀತಿ ಬೈಕ್ ಸವಾರನ ಮೇಲೆ ಮುಗಿಬಿದ್ದ ಬೋಸ್, ಎಲ್ಲರ ಮುಂದೆಯೇ ಬೈಕ್ ಸವಾರನಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ. ನಡು ರಸ್ತೆಗೆ ಏಳೆದುಕೊಂಡು ಹೋಗಿ ಆತನನ್ನು ನೆಲಕ್ಕೆ ಬೀಳಿಸಿ, ಕಾಲಿನಿಂದ ಹೊಟ್ಟೆ, ಎದೆ, ಮುಖಕ್ಕೆ ಜಾಡಿಸಿ ಹಲವಾರು ಬಾರಿ ಹೊಡೆದಿದ್ದಾರೆ. ಆತನನ್ನು ಬಿಡಿಸಲು ಜನರು ಹರಸಾಹಸ ಪಡುತ್ತಿರುವುದು ಸಿಸಿಟಿವಿಯಲ್ಲಿ ಕಂಡಿದೆ. ಅಷ್ಟೇ ಅಲ್ಲ, ಕೆಲವರು ಬಂದು ಆತನನ್ನು ತಡೆದಿದ್ದು, ಆಗ ಬೈಕ್ ಸವಾರ ಬದುಕಿಗೆಯೇ ಬಡಜೀವವೇ ಎಂಬಂತೆ ಅತ್ತ ಸೈಡಿಗೆ ಹೋಗಿ ತನ್ನ ಸುಧಾರಿಸಿಕೊಳ್ಳುತ್ತಿದ್ದಂತೆ ಮತ್ತೆ ಆತನನ್ನ ಓಡಿ ಹೋಗಿ ಮುಗಿಬಿದ್ದು ಮತ್ತಷ್ಟು ಏಳೆದಾಡಿ ಹೊಡೆದಿದ್ದಾನೆ ಈ ವಿಂಗ್ ಕಮಾಂಡರ್. ಅಲ್ಲದೇ ಯುವಕನ ಮೊಬೈಲ್ಕಿತ್ತುಕೊಂಡು ಎಸೆದಿದ್ದಾನೆ.
ಕೊಲೆ ಯತ್ನ ಪ್ರಕರಣ ದಾಖಲು!
ಈ ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಪೊಲೀಸರು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. BNS ಸೆಕ್ಷನ್ 109 ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಅವರ ಮೇಲೆ BNSನ ಇನ್ನೂ ಕೆಲವು ಸೆಕ್ಷನ್‌ಗಳ ಅಡಿಯಲ್ಲಿಯೂ ಪ್ರಕರಣ ದಾಖಲಾಗಿದೆ. ಬಿಎನ್‌ಎಸ್‌ನ ಸೆಕ್ಷನ್ 109 ಜಾಮೀನು ರಹಿತವಾಗಿದ್ದು, ಈ ಸೆಕ್ಷನ್ ಅಡಿಯಲ್ಲಿ ಬೋಸ್ ಸುಲಭವಾಗಿ ಜಾಮೀನು ಪಡೆಯಲು ಸಾಧ್ಯವಿಲ್ಲ. ಆದ್ರೆ ದಾಖಲಾದ ದೂರಿನಲ್ಲಿ ಕಾರಿನ ನಂಬರ್ ಆಧಾರದಲ್ಲಿ ಎಫ್ಐಆರ್ ದಾಖಲಾಗಿದ್ದು, ಎಫ್ಐಆರ್ನಲ್ಲಿ ಹೆಸರು ಬದಲು ವ್ಯಕ್ತಿ ಅಂತ ಉಲ್ಲೇಖಿಸಲಾಗಿದೆ. ಎಫ್ಐಆರ್ ಬೆನ್ನಲ್ಲೇ, ಬಂಧಿಸಲು ಒತ್ತಾಯ ಜೋರಾಗಿದೆ. ಟಿನ್ ಪ್ಯಾಕ್ಟರಿ ಸಿಗ್ನಲ್ ಬಳಿ ಬೈಕ್ಗೆ ಕಾರು ಟಚ್ ಆಗಿದೆ. ಕಾರಿನಿಂದ ಇಳಿದು ಬಂದ ವ್ಯಕ್ತಿ ಕಾಲಿನಿಂದ ಒದ್ದು ಬೈಕ್ ಕೆಳಗೆ ಬೀಳಿಸ್ತಾನೆ. ಅದನ್ನ ಕೇಳಿದಾಗ ನಿರಂತರವಾಗಿ ವಿಕಾಸ್ ಮೇಲೆ ಹಲ್ಲೆ ಮಾಡಿದ್ದಾನೆ. ಸ್ನೇಹಿತನಿಗೆ ಕರೆ ಮಾಡಲು ವಿಕಾಸ್ ಮೊಬೈಲ್ ತೆಗೆದಾಗ ಮೊಬೈಲ್ ಎಸೆಯುತ್ತಾನೆ. ಜೊತೆಗೆ ಬೈಕ್ ಕೀ ಎಸೆದು, ಕುತ್ತಿಗೆ ಹಿಡಿದು ಕೊಲೆಗೆ ಯತ್ನಿಸಿದ್ದಾನೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ವಿಂಗ್ ಕಮಾಂಡರ್ ಮೊದಲಿಗೆ ಶೇರ್ ಮಾಡಿದ್ದ ವಿಡಿಯೋ ಭಾಷಾ ಕಿಡಿ ಹೊತ್ತಿಸಿತ್ತು. ರಾಷ್ಟ್ರೀಯ ಮಾಧ್ಯಮಗಳು ಕೂಡ ಶಿಲಾದಿತ್ಯ ಬೋಸ್ ಪರವಾಗಿಯೇ ಧ್ವನಿ ಎತ್ತಿದ್ದವು. ಬೆಂಗಳೂರಿನಲ್ಲಿ ಉತ್ತರ ಭಾರತೀಯರ ಮೇಲೆ ಹಲ್ಲೆ ಎಂದು ಬಿಂಬಿಸಿದ್ದವು. ಆದರೆ ಸಿಸಿಟಿವಿ ದೃಶ್ಯಾವಳಿಗಳು ವಿಂಗ್ ಕಮಾಂಡರ್‌ನ ಮುಖವಾಡ ಕಳಚಿದೆ. ಅಸಲಿಗೆ ಗಲಾಟೆ ನಡೆದಿರುವುದಂತೂ ಸತ್ಯ, ಆದರೆ ವಿಂಗ್ ಕಮಾಂಡರ್ ಕನ್ನಡಿಗನ ಮೇಲೆ ಮನಸೋ ಇಚ್ಛೆ ಥಳಿಸಿದ್ದಾನೆ. ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆಯೂ ನಡೆಸಿದ್ದಾನೆ. ಇದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಸಿಎಂ
ವಿಂಗ್ ಕಮಾಂಡರ್ ಆಗಲಿ ಯಾರೇ ಆಗಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಂಗ್ ಕಮಾಂಡರ್ ಯುವಕನ ಮೇಲೆ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ. ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕುವ ದುಷ್ಟತನ ಮೆರೆದಿದ್ದಾರೆ. ಕನ್ನಡಿಗರು ಮಾತೃ ಭಾಷೆಯ ಬಗ್ಗೆ ಅಭಿಮಾನ ಹೊಂದಿರುವವರೇ ಹೊರತು ದುರಭಿಮಾನಿಗಳಲ್ಲ. ಭಾಷೆಯ ವಿಚಾರಕ್ಕೆ ವಿನಾಕರಣ ಇತರರ ಮೇಲೆ ಹಲ್ಲೆ ಮಾಡುವ ಅಥವಾ ನಿಂದಿಸುವ ಸಣ್ಣತನ ಕನ್ನಡಿಗರದ್ದಲ್ಲ ಎಂದಿದ್ದಾರೆ. ಒಮ್ಮೆ ಎಲ್ಲಾದ್ರೂ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗದಿದ್ರೆ, ಪಾಪ ಪೆಟ್ಟು ತಿಂದ ಬೈಕ್ ಸವಾರ ಭವಿಷ್ಯವೇ ಹಾಳಾಗಿ ಹೋಗುತಿತ್ತು.. ಜೊತೆಗೆ ಕರುನಾಡಿಗೆ ಈ ಘಟನೆ ಕಪ್ಪು ಚುಕ್ಕೆಯಾಗಿ ಉಳಿಯುತಿತ್ತು. ಆದ್ರೆ ಹಾಗಾಲಿಲ್ಲ.. ಒಟ್ನಲ್ಲಿ ವಿಂಗ್ ಕಮಾಂಡರ್ ಆಗಿ ದೇಶದ ಮತ್ತು ಜನರ ರಕ್ಷಣೆ ಮಾಡಬೇಕಾದವರೇ ಹೀಗ್ ಮಾಡಿದ್ರೆ ಹೇಗ್ ಹೇಳಿ. ಒಬ್ಬ ಅಮಾಯಕನ ಮೇಲೆ ಹಲ್ಲೆ ಮಾಡಿದ್ದು ಅಲ್ಲದೇ ಕರ್ನಾಟಕಕ್ಕೆ ಮಸಿ ಬಳಿಯೋ ಕೆಲಸ ಕೂಡ ಮಾಡಲಾಗಿದೆ. ನಿಜಕ್ಕೂ ಈ ವಿಂಗ್ ಕಮಾಂಡರ್‌ಗೆ ತಕ್ಕ ಶಿಕ್ಷೆಯಾಗಾಲೇ ಬೇಕು, ಇದು 7 ಕೋಟಿ ಕನ್ನಡಿಗರ ಆಗ್ರಹ..