ಖರ್ಗೆ ಕಾರ್ಯಕ್ರಮಕ್ಕೆ ಕುರ್ಚಿಗಳು ಖಾಲಿ ಖಾಲಿ – ಕಾರ್ಯಕ್ರಮಕ್ಕೆ ಜನ ಬಂದಿಲ್ಲ ಎಂದು ಜಿಲ್ಲಾಧ್ಯಕ್ಷ ಅಮಾನತು

ಖರ್ಗೆ ಕಾರ್ಯಕ್ರಮಕ್ಕೆ ಕುರ್ಚಿಗಳು ಖಾಲಿ ಖಾಲಿ – ಕಾರ್ಯಕ್ರಮಕ್ಕೆ ಜನ ಬಂದಿಲ್ಲ ಎಂದು ಜಿಲ್ಲಾಧ್ಯಕ್ಷ ಅಮಾನತು

ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದೆ. ಇದೀಗ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಈ ಬಾರಿ ಬಿಹಾರದಲ್ಲಿ ಹೆಚ್ಚಿನ ಸ್ಥಾನಗಳಿಗೆ ಬೇಡಿಕೆ ಇಡುತ್ತಿರುವ ಕಾಂಗ್ರೆಸ್, ನೆಲದ ಮೇಲೆ ತನ್ನ ಅಸ್ತಿತ್ವವನ್ನು ತೋರಿಸಲು ಪ್ರಯತ್ನಿಸುತ್ತಿದೆ. ಈ ಬೆನ್ನಲ್ಲೇ ಕಾಂಗ್ರೆಸ್‌ ನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಿಹಾರ ಕಾರ್ಯಕ್ರಮದಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಕ್ಕೆ ಬಕ್ಸಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನೋಜ್ ಕುಮಾರ್ ಪಾಂಡೆಯನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಕೋಲ್ಕತ್ತಾ ವಿರುದ್ಧ ಗುಜರಾತ್‌ಗೆ  39 ರನ್‌ಗಳ ಭರ್ಜರಿ ಜಯ

ಭಾನುವಾರ ಬಕ್ಸಾರ್‌ನ ದಲ್ಸಾಗರ್ ಕ್ರೀಡಾಂಗಣದಲ್ಲಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಕಾರ್ಯಕ್ರಮ ಆಯೋಜನೆಯಾಗಿತ್ತು. ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಬರುವ ವಿಚಾರ ತಿಳಿದಿದ್ದರೂ ಬಹಳಷ್ಟು ಕುರ್ಚಿಗಳು ಖಾಲಿ ಇದ್ದವು. ಬಕ್ಸಾರ್‌ನ ಕಾಂಗ್ರೆಸ್ ಶಾಸಕ ಸಂಜಯ್ ಕುಮಾರ್ ತಿವಾರಿ ಮುಂದೆ ಬಂದು ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಜನರಲ್ಲಿ ಕೇಳಿಕೊಳ್ಳುತ್ತಿದ್ದರು. ಖಾಲಿ ಕುರ್ಚಿಗಳು ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಬೆನ್ನಲ್ಲೇ ಮನೋಜ್ ಕುಮಾರ್ ಪಾಂಡೆ ಅವರನ್ನು ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ ಮತ್ತು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ ಎಂದು ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ (ಬಿಪಿಸಿಸಿ) ಮಾಧ್ಯಮ ಕೋಶದ ಅಧ್ಯಕ್ಷ ರಾಜೇಶ್ ರಾಥೋಡ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಹಾರದ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಲ್ಲವರು, ರಾಜ್ಯಾಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್, ಬಕ್ಸಾರ್‌ನ ಆರ್‌ಜೆಡಿ ಸಂಸದ ಸುಧಾಕರ್ ಸಿಂಗ್, ಸಸಾರಂನ ಕಾಂಗ್ರೆಸ್ ಸಂಸದ ಮನೋಜ್ ಕುಮಾರ್ ರಾಮ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಡಿಮೆ ಸಂಖ್ಯೆಯಲ್ಲಿ ಜನರ ಭಾಗಿ ಮತ್ತು ಖಾಲಿ ಕುರ್ಚಿಗಳು ಹಿರಿಯ ನಾಯಕರಿಗೆ ಮುಜುಗರವನ್ನು ಉಂಟು ಮಾಡಿತ್ತು. ಈ ಕಾರಣಕ್ಕೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳನ್ನು ಆಧಾರಿಸಿ ವರದಿಯಾಗಿದೆ.

ಈ ವರ್ಷದ ಅಕ್ಟೋಬರ್‌ – ನವೆಂಬರ್‌ ಅವಧಿಯಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ ಮತ್ತು ಆರ್‌ಜೆಡಿ ಮೈತ್ರಿ ಮಾಡಿಕೊಂಡಿದ್ದರೆ ಬಿಜೆಪಿ, ಜೆಡಿಯು, ಎಲ್‌ಜೆಪಿ ಮೈತ್ರಿ ಮಾಡಿಕೊಂಡಿವೆ.

Shwetha M

Leave a Reply

Your email address will not be published. Required fields are marked *